ನವದೆಹಲಿ: ಅವೈಜ್ಞಾನಿಕ ವಿಧಾನಗಳಿಂದ ಕಳಪೆ ಕಾಮಗಾರಿ ಕಟ್ಟಡಗಳನ್ನು ನಿರ್ಮಿಸಿದ ಖಾಸಗಿ ಗುತ್ತಿಗೆದಾರರಿಂದಾಗಿ ಉತ್ತರಾಖಂಡದಲ್ಲಿ ನೂರಾರು ಜನ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಬೇಕಾಯಿತು ಎಂದು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಪ್ರವಾಸಿಗರನ್ನು ಆಕರ್ಷಿಸಲು ಉತ್ತರಾಖಂಡದ ಅಲಕನಂದ ಹಾಗೂ ಮಂದಾಕಿನಿ ನದಿ ಕಣಿವೆಗುಂಟ ನಿರ್ಮಿಸಲಾದ ವಸತಿಗೃಹಗಳು, ಬಹುಮಹಡಿ ಹೋಟೆಲ್‌ಗಳ ಕಟ್ಟಡಗಳು ಗುಣಮಟ್ಟದಿಂದ ಕೂಡಿಲ್ಲ ಮೇಲಾಗಿ ಇವುಗಳಿಗೆ ಹಾಕಲಾದ ತಳಪಾಯವೂ ವೈಜ್ಞಾನಿಕವಾಗಿಲ್ಲ . ಹೀಗಾಗಿ ಇವುಗಳೆಲ್ಲ ಪ್ರವಾಹದಲ್ಲಿ ಸುಲಭವಾಗಿ ಕುಸಿದುಬಿದ್ದ ಪರಿಣಾಮ ನೂರಾರು ಜನ ಕೊಚ್ಚಿಕೊಂಡು ಹೋಗುವಂತಾಯಿತು ಎಂದು ರೂರ್‌ರ್ಕಿಯಲ್ಲಿರುವ ಕೇಂದ್ರಿಯ ಕಟ್ಟಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಎಸ್.ಕೆ. ಭಟ್ಟಾಚಾರ್ಯ `ಪ್ರಜಾವಾಣಿ'ಗೆ ತಿಳಿಸಿದರು.
ಸಮರ್ಪಕ ತಳಪಾಯ ಹಾಕದೆ, ಮಣ್ಣು ಪರೀಕ್ಷೆಯನ್ನು ಕೈಗೊಳ್ಳದೆಯೇ ಇಲ್ಲಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು ಇವುಗಳಲ್ಲಿ ಬಹುತೇಕ ನದಿ ತಟದಲ್ಲಿವೆ.
`ಕಟ್ಟಡದ ಆಯುಷ್ಯ ಅಳೆಯಲು ಅಲ್ಲಿಯ ಮಣ್ಣನ್ನು ಅವರು ಪರೀಕ್ಷೆ ನಡೆಸಿದ್ದಾರೆಯೇ. ಇದನ್ನೆಲ್ಲ ಈ ಖಾಸಗಿ ಗುತ್ತಿಗೆದಾರರು ತಲೆಕೆಡಿಸಿಕೊಳ್ಳದೆ ಪ್ರವಾಸಿಗರನ್ನು ಆಕರ್ಷಿಸಲು ಬರಿ ಮಹಡಿ ಮೇಲೆ ಮತ್ತೊಂದು ಮಹಡಿ ನಿರ್ಮಿಸಿದ್ದಾರೆ ಅಷ್ಟೆ' ಎಂದು ಭಟ್ಟಾಚಾರ್ಯ ಟೀಕಿಸಿದರು.
ಪ್ರವಾಹದ ಒತ್ತಡವನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುವ ತಾಂತ್ರಿಕತೆ ಇಲ್ಲಿಯ ಕಟ್ಟಡಗಳಿಗೆ ಅಗತ್ಯವಾಗಿದೆ. ಆದರೆ ದುರದೃಷ್ಟವಶಾತ್ ಇದನ್ನೆಲ್ಲ ಇಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿಲ್ಲ. ಬಹುಕಾಲ ಬಾಳುವ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ' ಎಂದರು.
ವಾಸದ ಕಟ್ಟಡ, ವಾಣಿಜ್ಯ ಹಾಗೂ ಔದ್ಯೋಗಿಕ ಸಂಕೀರ್ಣಗಳು ಪ್ರವಾಹ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಅಡ್ಡವಾಗಿವೆ ಎಂದು ಭೂವಿಜ್ಞಾನಿ ಕೆ.ಎಸ್. ವಲ್ದಿಯ ವಲ್ಡಿಯ ಅಭಿಪ್ರಾಯಪಡುತ್ತಾರೆ. ಈ ಭಾಗದಲ್ಲಿ ತೀವ್ರಗತಿಯಲ್ಲಿ ಸಾಗುತ್ತಿರುವ ಭೂಪರಿವರ್ತನೆ ಪ್ರಕ್ರಿಯೆಯೂ ದುರಂತಕ್ಕೆ ಕೊಡುಗೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.