ADVERTISEMENT

ದುರ್ಗಾಶಕ್ತಿ ಅಮಾನತು: ಐಎಎಸ್ ಅಧಿಕಾರಿ ವಾಪಸಿಗೆ ಉ.ಪ್ರ. ಸರ್ಕಾರದ ಸವಾಲು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 11:18 IST
Last Updated 5 ಆಗಸ್ಟ್ 2013, 11:18 IST
ದುರ್ಗಾಶಕ್ತಿ ಅಮಾನತು: ಐಎಎಸ್ ಅಧಿಕಾರಿ ವಾಪಸಿಗೆ ಉ.ಪ್ರ. ಸರ್ಕಾರದ ಸವಾಲು
ದುರ್ಗಾಶಕ್ತಿ ಅಮಾನತು: ಐಎಎಸ್ ಅಧಿಕಾರಿ ವಾಪಸಿಗೆ ಉ.ಪ್ರ. ಸರ್ಕಾರದ ಸವಾಲು   

ಲಖನೌ (ಪಿಟಿಐ): ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಅಮಾನತಿನ ವಿಚಾರದಲ್ಲಿ ಸೋಮವಾರ ಕೇಂದ್ರದ ವಿರುದ್ಧ ಸೆಣಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸರ್ಕಾರ, ತಪ್ಪು ಮಾಡಿದಾಗ ಅಧಿಕಾರಿಗಳನ್ನು ಶಿಕ್ಷಿಸಲಾಗುತ್ತದೆ. ಕೇಂದ್ರ ಸರ್ಕಾರ ಬೇಕಿದ್ದರೆ ರಾಜ್ಯದಿಂದ ಐಎಎಸ್ ಅಧಿಕಾರಿಗಳನ್ನು ಹಿಂತೆಗೆದುಕೊಳ್ಳಬಹುದು ಎಂದು ಸವಾಲು ಎಸೆಯಿತು.

'ತಪ್ಪು ಮಾಡಿದ್ದಕ್ಕಾಗಿ ಶಿಕ್ಷಕರು ಅಥವಾ ಪಾಲಕರಿಂದ ಶಿಕ್ಷೆಗೆ ಒಳಗಾದ ಹಲವಾರು ಮಕ್ಕಳು ಇಲ್ಲಿ ಕುಳಿತುಕೊಂಡಿರಬಹುದು.,,, ಸರ್ಕಾರವೂ ಇದೇ ರೀತಿಯಲ್ಲಿ ನಡೆಯುತ್ತದೆ. ಅಧಿಕಾರಿಗಳು ಏನಾದರೂ ತಪ್ಪು ಮಾಡಿದಾಗ ಅವರನ್ನು ಶಿಕ್ಷಿಸಲಾಗುತ್ತದೆ' ಎಂದು ಮುಖ್ಯಮಂತ್ರಿ ಅಖಿಲೇಶ ಯಾದವ್ ಇಲ್ಲಿ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಹೇಳಿದರು.

ಕೇಂದ್ರ ಸರ್ಕಾರವು ಅಧಿಕಾರಿಯ ಅಮಾನತು ವಿಚಾರದಲ್ಲಿ ವರದಿ ಕೋರಿರುವ ಬಗ್ಗೆ ಪ್ರಸ್ತಾಪಿಸಿದ ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮಗೋಪಾಲ್ ಯಾದವ್ ಅವರು 'ಎಲ್ಲ ಐಎಎಸ್ ಅಧಿಕಾರಿಗಳನ್ನೂ ರಾಜ್ಯದಿಂದ ಹಿಂತೆಗೆದುಕೊಳ್ಳಿ' ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.

ವಿಷಯಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡುವ ಸಂಪ್ರದಾಯವನ್ನು ಕೇಂದ್ರ ಸರ್ಕಾರವು ಹುಟ್ಟು ಹಾಕುತ್ತಿದೆಯೇ ಎಂಬ ಪ್ರಶ್ನೆಗೆ ಅಂತಹ ಸಂದರ್ಭದಲ್ಲಿ ಎಲ್ಲ ಐಎಎಸ್ ಅಧಿಕಾರಿಗಳನ್ನೂ ಹಿಂತೆಗೆದುಕೊಳ್ಳುವಂತೆ ರಾಜ್ಯವು ಕೇಂದ್ರಕ್ಕೆ ಸೂಚಿಸುವುದು. ಸರ್ಕಾರವು ತನ್ನ ಪ್ರಾಂತೀಯ ಸೇವಾ ಅಧಿಕಾರಿಗಳ ನೆರವಿನಿಂದ ನಡೆಯುವುದು ಎಂದು ಯಾದವ್ ನುಡಿದರು.

ಅಮಾನತು ಆಡಳಿತಾತ್ಮಕ ವಿಚಾರವಾಗಿದ್ದು, ಪಕ್ಷವು ಅದನ್ನು ರಾಜಕೀಯಗೊಳಿಸಲು ಬಯಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಹೇಳಿದರು.

ಕೇಂದ್ರ ಸರ್ಕಾರವು ಅಧಿಕಾರಿಯ ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯದಿಂದ ವರದಿ ಕೋರಿದೆ. ರಾಜ್ಯ ಸರ್ಕಾರವು ನಾಗಪಾಲ್ ವಿರುದ್ಧ ದೋಷಾರೋಪ ಪಟ್ಟಿ ಜಾರಿ ಮಾಡಿ ಉತ್ತರ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.