ADVERTISEMENT

ದೆಹಲಿಗೆ ದೂತ ರವಾನಿಸಿದ ಬಿಎಸ್‌ವೈ

ಬಿಜೆಪಿಗೆ ಮರಳಲು ಹರಸಾಹಸ?

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 9:55 IST
Last Updated 18 ಸೆಪ್ಟೆಂಬರ್ 2013, 9:55 IST
ದೆಹಲಿಗೆ ದೂತ ರವಾನಿಸಿದ ಬಿಎಸ್‌ವೈ
ದೆಹಲಿಗೆ ದೂತ ರವಾನಿಸಿದ ಬಿಎಸ್‌ವೈ   

ನವದೆಹಲಿ (ಪಿಟಿಐ): ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಭಾರತೀಯ ಜನತಾ ಪಕ್ಷಕ್ಕೆ(ಬಿಜೆಪಿ) ಮರಳುವ ಪ್ರಯತ್ನಗಳು ಮತ್ತೆ ಚುರುಕು ಪಡೆದಿವೆ. ಬಿಜೆಪಿಯೊಂದಿಗೆ ಕೆಜೆಪಿ ವಿಲೀನಗೊಳಿಸುವ ಬಗ್ಗೆ  ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಪಕ್ಷದ ರಾಷ್ಟ್ರ ಘಟಕದ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಅರುಣ್ ಜೇಟ್ಲಿ ಜೊತೆಗೆ ಚರ್ಚಿಸಲು ಬಿಎಸ್‌ವೈ  ತಮ್ಮ ಪರವಾಗಿ ಬುಧವಾರ  ಸಂಧಾನಕಾರರೊಬ್ಬರನ್ನು  ನವದೆಹಲಿಗೆ ಕಳುಹಿಸಿದ್ದಾರೆ.

`ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಿಜೆಪಿಗೆ ಬೈ ಹೇಳಿ ಕರ್ನಾಟಕ ಜನತಾ  ಪಕ್ಷ ಸ್ಥಾಪಿಸಿದ್ದ ಯಡಿಯೂರಪ್ಪ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ  ಮತ್ತೆ ಬಿಜೆಪಿಗೆ ಮರಳಲು ಒಲವು ತೋರಿದ್ದಾರೆ' ಎಂದು ಪಕ್ಷದ ಮೂಲಗಳು ಹೇಳಿವೆ.

ಅಲ್ಲದೇ ದೆಹಲಿಗೆ ಭೇಟಿ ನೀಡಿ ಬಿಜೆಪಿ ಹಿರಿಯ ನಾಯಕರನ್ನು ಭೇಟಿ ಮಾಡಲು   ತಮ್ಮ ಆಪ್ತ ಹಾಗೂ  ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್  ಅವರನ್ನು ಸಹ ಯಡಿಯೂರಪ್ಪ ನಿಯೋಜಿಸಿದ್ದಾರೆ.

ADVERTISEMENT

ರಾಜ್ಯಸಭಾ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಅವರನ್ನು ಲೆಹರ್ ಸಿಂಗ್ ಭೇಟಿ ಮಾಡುವ ನಿರೀಕ್ಷೆಗಳಿದ್ದು, ಅಡ್ವಾಣಿ ಅವರ ಭೇಟಿಗೂ ಕಾಲಾವಕಾಶ ಕೋರುವ ಸಾಧ್ಯತೆಗಳಿವೆ. ಅಲ್ಲದೇ ಸಂಜೆಯ ವೇಳೆಗೆ ರಾಜನಾಥ್ ಸಿಂಗ್ ಅವರನ್ನೂ ಲೆಹರ್ ಸಿಂಗ್ ಭೇಟಿಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಮತ್ತೊಂದೆಡೆ `ಬಿಎಸ್‌ವೈ ಅವರು ಇಂದು ಕೆಜೆಪಿ  ಕಾರ್ಯಕಾರಿ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಮೋದಿ ಆಯ್ಕೆಯನ್ನು ಬೆಂಬಲಿಸುವ ಹಾಗೂ ಕೇಸರಿ ಪಕ್ಷದಲ್ಲಿ ಒಮ್ಮತವಿದ್ದರೇ ಅದರೊಂದಿಗೆ ಕೆಜೆಪಿ ಪಕ್ಷ ವಿಲೀನ ಸಿದ್ಧ ಎಂಬ ನಿರ್ಣಯಗಳು ಹೊರಬೀಳುವ ಸಾಧ್ಯತೆ ಇದೆ' ಎಂದು ಮೂಲಗಳು ಹೇಳಿವೆ.

ಈ ನಡುವೆ `ಈ ಬಗ್ಗೆ ಬಿಜೆಪಿಯ ದೆಹಲಿ ನಾಯಕರು ಹಾಗೂ  ಕರ್ನಾಟಕ ಬಿಜೆಪಿ ಮುಖಂಡರ ನಡುವೆ ಒಮ್ಮತ ಮೂಡದೇ ಹೋದರೆ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಸೇರ ಬಯಸುವುದಿಲ್ಲ. ಅವರಿಗೇನು ಶೀಘ್ರದಲ್ಲೇ ಮುಖ್ಯಮಂತ್ರಿ ಸ್ಥಾನ ಸಿಗುವುದಿಲ್ಲ. ಆದರೆ ಲೋಕಸಭೆ ಚುನಾವಣೆಗಳು ಸಮೀಪಿಸಿದ್ದು, ಅವರಿಂದ ಬಿಜೆಪಿ ಲಾಭ ಪಡೆಯಲಿದೆ' ಎದು ಕೆಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.