ADVERTISEMENT

ದೆಹಲಿ ಚುನಾವಣಾಧಿಕಾರಿಗೆ ನೊಟೀಸ್‌

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ನವದೆಹಲಿ(ಪಿಟಿಐ): ರಾಜಕೀಯ ಪಕ್ಷ­ಗಳ ಪಟ್ಟಭದ್ರ ಹಿತಾಸಕ್ತಿಗಾಗಿ ಬಾಂಗ್ಲಾ ವಲಸಿಗರು ಮತ್ತು ದೇಶದ ಇತರ ರಾಜ್ಯದಿಂದ ವಲಸೆ ಬಂದ ದೆಹಲಿ ನಿವಾಸಿಗಳಿಗೆ ಮತದಾರರ ಗುರುತಿನ ಚೀಟಿ ನೀಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿ­ದಂತೆ ಕೋರ್ಟ್‌ ದೆಹಲಿ ಮುಖ್ಯ ಚುನಾವಣಾಧಿಕಾರಿಗಳಿಗೆ ನೊಟೀಸ್‌ ನೀಡಿದೆ.

ಬೇರೆ ರಾಜ್ಯಗಳ ಮತದಾರರಿಗೆ ಕೂಡ ದೆಹಲಿಯಲ್ಲಿ ಪುನಃ ಗುರುತಿನ ಚೀಟಿ ನೀಡಲಾಗಿದೆ ಎಂದು ದೆಹಲಿ ನಿವಾಸಿ ಸತ್ಯವೀರ ಸಿಂಗ್‌ ದೂರು ನೀಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡು­ವಂತೆ ದೆಹಲಿ ಮುಖ್ಯ ಚುನಾವ­ಣಾ­ಧಿಕಾರಿ ವಿಜಯ್‌ ದೇವ್‌ ಅವರಿಗೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸುದೇಶ್‌ ಕುಮಾರ್‌ ಸೂಚನೆ ನೀಡಿದ್ದಾರೆ.

‘ನಕಲಿ ಮತ್ತು ಬೋಗಸ್‌ ಮತಗಳ ಕುರಿತಂತೆ ಇದುವರೆಗೆ ಅನೇಕ ದೂರುಗಳನ್ನು ನೀಡಲಾಗಿದೆ. ಆದರೆ ಅವರುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ’ ಎಂದು ಸಿಂಗ್‌ ದೂರಿದ್ದಾರೆ.

‘ಮುಕ್ತ ಮತ್ತು ನೇರ ಮತದಾನ ಪ್ರಜಾಪ್ರಭುತ್ವದ ಮೂಲಭೂತ ಅವಶ್ಯ­ಕ­ತೆಯಾಗಿದೆ. ದೆಹಲಿ ಭಾರತದ ರಾಜ­ಧಾನಿ. ಇಲ್ಲಿಗೆ ದೇಶದ ಬೇರೆ ಬೇರೆ ರಾಜ್ಯಗಳಿಂದ ಮತ್ತು ಬಾಂಗ್ಲಾದೇಶ­ದಿಂದ ಕೂಡ ವಲಸಿಗರು ಬರುತ್ತಾರೆ. ಅವರು ಮೂಲ ಸ್ಥಾನದಲ್ಲಿ ಮತ­ದಾನದ ಹಕ್ಕನ್ನು ಹೊಂದಿದ್ದರೂ ಕೂಡ ದೆಹಲಿಯಲ್ಲಿ ಅವರಿಗೆ ಮತ್ತೆ ಮತದಾರರ ಗುರುತಿನ ಚೀಟಿ ಕೊಡಲಾಗುತ್ತಿದೆ.

ಆಡಳಿತ ವರ್ಗ­ದೊಂದಿಗೆ ರಾಜಿ ಮಾಡಿಕೊಂಡು ಇವೆ­ಲ್ಲವನ್ನೂ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಈಗ ಚುನಾವಣೆ ಘೊಷಿಸಲಾಗಿದೆ. ಆದ್ದರಿಂದ ಇದರ ಬಗ್ಗೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.