ADVERTISEMENT

ದೆಹಲಿ ಬಾಲೆ ಮೇಲೆ ಅತ್ಯಾಚಾರ: ಇನ್ನೊಬ್ಬ ಆರೋಪಿಯ ಸೆರೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 9:58 IST
Last Updated 22 ಏಪ್ರಿಲ್ 2013, 9:58 IST
ದೆಹಲಿ ಬಾಲೆ ಮೇಲೆ ಅತ್ಯಾಚಾರ: ಇನ್ನೊಬ್ಬ ಆರೋಪಿಯ ಸೆರೆ
ದೆಹಲಿ ಬಾಲೆ ಮೇಲೆ ಅತ್ಯಾಚಾರ: ಇನ್ನೊಬ್ಬ ಆರೋಪಿಯ ಸೆರೆ   

ಪಟ್ನಾ/ ನವದೆಹಲಿ (ಐಎಎನ್ಎಸ್): ರಾಜಧಾನಿಯಲ್ಲಿ ಕಳೆದವಾರ ಸಂಭವಿಸಿದ ಐದು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಷಾಮೀಲಾಗಿದ್ದಾನೆಂದು ಆರೋಪಿಸಲಾದ ಎರಡನೇ ವ್ಯಕ್ತಿಯನ್ನು ಸೋಮವಾರ ನಸುಕಿನ ವೇಳೆಯಲ್ಲಿ ಬಿಹಾರದಲ್ಲಿ ಬಂಧಿಸಲಾಯಿತು. ಈ ಮಧ್ಯೆ ಮೊದಲ ಆರೋಪಿ ಮಾಡಿರುವ ಪ್ರತಿಪಾದನೆಗಳ ಸತ್ಯಾಸತ್ಯತೆಗಳ ಪರಿಶೀಲನೆಯಲ್ಲಿ ಪೊಲೀಸರು ಮಗ್ನರಾಗಿದ್ದಾರೆ.

ಮೊದಲ ಆರೋಪಿ ಮನೋಜ್ ಕುಮಾರ್ ಹೆಸರಿಸಿದ ಪ್ರದೀಪ್ ಎಂಬ ವ್ಯಕ್ತಿಯನ್ನು ಬಿಹಾರಿನ ಲಖಿಸರಾಯಿಯ ಬರಹಿಯಾ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಬಿಹಾರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಭಯಾನಂದ ಹೇಳಿದರು.

ಬಿಹಾರ ಪೊಲೀಸ್ ವಿಶೇಷ ಕಾರ್ಯಪಡೆಯ ನೆರವಿನೊಂದಿಗೆ ದೆಹಲಿ ಪೊಲೀಸ್ ತಂಡವು ಪ್ರದೀಪ್ ನನ್ನು ಆತ ಅವಿತುಕೊಂಡಿದ್ದ ಆತನ ಮಾವನ ಮನೆಯಿಂದ ಬಂಧಿಸಿದರು ಎಂದು ಡಿಜಿಪಿ ತಿಳಿಸಿದರು. 'ಆತನನ್ನು ಈದಿನ ದರ್ಭಾಂಗ ನ್ಯಾಯಾಲಯದಿಂದ ಅನುಮತಿ ಪಡೆದ ದೆಹಲಿಗೆ ಕರೆತರಲಾಗುವುದು' ಎಂದು ದೆಹಲಿ ಪೊಲೀಸ್ ಕಮೀಷನರ್ ನೀರಜ್ ಕುಮಾರ್ ಪಿಟಿಐಗೆ ತಿಳಿಸಿದರು.

ಬಿಹಾರದ ಮುಜಾಫರ್ ಪುರದಲ್ಲಿ ಶನಿವಾರ ಬಂಧಿತಾದ ಮನೋಜ್, ವಿಚಾರಣೆ ಕಾಲದಲ್ಲಿ ತನ್ನ ಗೆಳೆಯರ ಪೈಕಿ ಒಬ್ಬ ಈ ಕೃತ್ಯದಲ್ಲಿ ಷಾಮೀಲಾಗಿದ್ದುದಾಗಿ ಹೇಳಿದ್ದ. ಬಾಲಕಿಯ ಮೇಲೆ ಏಪ್ರಿಲ್ 15ರಂದು ಪೂರ್ವ ದೆಹಲಿಯ ಗಾಂಧಿ ನಗರ ಪ್ರದೇಶದಲ್ಲಿ ಮನೋಜ್ ವಾಸ್ತವ್ಯವಿದ್ದ ಕಟ್ಟಡದಲ್ಲೇ ಅತ್ಯಾಚಾರ ಎಸಗಲಾಗಿತ್ತು.  40 ಗಂಟೆಗಳ ಬಳಿಕ ಏಪ್ರಿಲ್ 17ರಂದು ಬಾಲಕಿಯನ್ನು ರಕ್ಷಿಸಲಾಗಿತ್ತು. ಬಾಲಕಿ ಮೃತಳಾಗಿರುವುದಾಗಿ ಭಾವಿಸಿ ಮನೋಜ್ ಸ್ಥಳದಿಂದ ಪರಾರಿಯಾಗಿದ್ದ.

ದೆಹಲಿ ಪೊಲೀಸ್ ಕಮೀಷನರ್ ವಜಾಕ್ಕೆ ಒತ್ತಾಯಿಸಿ ಭಾನುವಾರ ಸಾರ್ವಜನಿಕ ಪ್ರತಿಭಟನಾ ಪ್ರದರ್ಶನಗಳು ನಡೆದ ಬಳಿಕ ತನಿಖಾ ತಂಡ ಪ್ರದೀಪನನ್ನು ಬಂಧಿಸಿದೆ.

'ಏಪ್ರಿಲ್ 15ರಂದು ಗೆಳೆಯ ಪ್ರದೀಪ್ ನನ್ನ ಮನೆಗೆ ಬಂದ. ಇಬ್ಬರೂ ಮದ್ಯಪಾನ ಮಾಡಿದೆವು. ನಂತರ ಪ್ರದೀಪ್ ಬಾಲಕಿಯನ್ನು ಮನೆಗೆ ಕರೆತರುವಂತೆ ಒತ್ತಾಯಿಸಿದ. ನಾನು ಹೊರಗೆ ಹೋಗಿ ಚಾಕೋಲೇಟ್ ತೋರಿಸಿ ಬಾಲಕಿಯನ್ನು ಕರೆದುಕೊಂಡು ಬಂದೆ' ಎಂದು ಮನೋಜ್ ವಿಚಾರಣೆ ಕಾಲದಲ್ಲಿ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ. ತಾನು ಬಾಲಕಿಯ ಮೇಲೆ ಅತ್ಯಾಚಾರ ಎಸಗಿಲ್ಲ ಎಂಬುದಾಗಿ ಮನೋಜ್ ಪೊಲೀಸರ ಬಳಿ ಪ್ರತಿಪಾದಿಸಿದ್ದಾನೆ ಎಂದೂ ಮೂಲಗಳು ಹೇಳಿವೆ.

ತಮ್ಮನ್ನು ಮುಂದೆ ಗುರುತಿಸದಿರಲಿ ಎಂಬ ಕಾರಣಕ್ಕಾಗಿ ಬಾಲಕಿಯ ಕೊರಳನ್ನು ಬಿಗಿದು, ಆತ ಸತ್ತಳೆಂದು ಭಾವಿಸಿ ಸ್ಥಳದಿಂದ ಪರಾರಿಯಾದುದಾಗಿಯೂ ಮನೋಜ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಬಾಲಕಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ (ಏಮ್ಸ್) ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ದೇಹಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆಕೆ ಕ್ರಮೇಣ ಚೇತರಿಸುತ್ತಿದ್ದು ಎರಡು ವಾರಗಳಲ್ಲಿ ಮನೆಗೆ ತೆರಳುವ ನಿರೀಕ್ಷೆಯಿದೆ ಎಂದು ವೈದ್ಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.