ADVERTISEMENT

ದೆಹಲಿ ಸರ್ಕಾರ ಅನಿಶ್ಚಿತ

ಎಲ್ಲ ಆಯ್ಕೆ ಪರಿಶೀಲಿಸಲಿರುವ ಲೆಫ್ಟಿನೆಂಟ್ ಗವರ್ನರ್

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST
ದೆಹಲಿ ಸರ್ಕಾರ ಅನಿಶ್ಚಿತ
ದೆಹಲಿ ಸರ್ಕಾರ ಅನಿಶ್ಚಿತ   

ನವದೆಹಲಿ: ಅತ್ಯಂತ ಅಚ್ಚರಿ ಫಲಿತಾಂಶ ನೀಡಿರುವ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಸರ್ಕಾರ ರಚಿಸಲು  ಬಿಜೆಪಿ ಮತ್ತು ಆಮ್‌ ಆದ್ಮಿ ಪಕ್ಷ ಆಸಕ್ತಿ ತೋರದೆ ಇರುವುದರಿಂದ ರಾಜಕೀಯ ಅನಿಶ್ಚಯತೆ ತಲೆದೋರಿದೆ.

ಒಟ್ಟು 70 ಸ್ಥಾನದ ದೆಹಲಿ ವಿಧಾನ­ಸಭೆಯಲ್ಲಿ 31 ಸ್ಥಾನ ಪಡೆದಿರುವ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದೆ. 28 ಸ್ಥಾನಗಳನ್ನು ಗಳಿಸಿರುವ ಆಮ್‌ ಆದ್ಮಿ ಪಕ್ಷ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್‌ ಕೇವಲ ಎಂಟು ಸ್ಥಾನಗಳಿಗೆ ಕುಸಿದಿದೆ. ಎರಡು ಸ್ಥಾನಗಳು ಇತರರ ಪಾಲಾಗಿವೆ.
ರಾಜ್ಯದಲ್ಲಿ ಸರ್ಕಾರ ರಚಿಸಲು 36 ಶಾಸಕರ ಬೆಂಬಲ ಬೇಕು. ಏಕೈಕ ದೊಡ್ಡ ಪಕ್ಷ ಬಿಜೆಪಿಗೆ ಇನ್ನೂ ಐದು ಸದಸ್ಯರ ಬೆಂಬಲ ಅಗತ್ಯವಿದೆ. ಸದ್ಯ ಬಿಜೆಪಿ ಮುಂದಿರುವುದು ಎರಡು ಮಾರ್ಗ ಮಾತ್ರ. ಒಂದು ಆಮ್‌ ಆದ್ಮಿ ಪಕ್ಷದ ಜತೆ ಸೇರಿ ಸರ್ಕಾರ ರಚನೆ ಮಾಡುವುದು ಇಲ್ಲವೆ ಕಾಂಗ್ರೆಸ್‌ ಪಕ್ಷವನ್ನು ಒಡೆಯುವುದು.

‘ಯಾವುದೇ ಅನೈತಿಕ ಮಾರ್ಗದಿಂದ  ಅಧಿಕಾರ ಹಿಡಿಯುವುದಿಲ್ಲ. ನಾವು ಆಮ್‌ ಆದ್ಮಿ ಪಕ್ಷದ ಬೆಂಬಲ ಪಡೆಯುವುದಾಗಲೀ ಅಥವಾ ಆ ಪಕ್ಷವನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ’ ಎಂದು ಹಿರಿಯ ಬಿಜೆಪಿ ನಾಯಕ ಅರುಣ್‌ ಜೇಟ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಧ್ರುವೀಕರಣ ಆಗದ ಕೆಲಸ. ಬೇಕಾದರೆ ಆಮ್‌ ಆದ್ಮಿ ಪಕ್ಷ ಕಾಂಗ್ರೆಸ್‌ ಸಹಕಾರ ಪಡೆದು ಸರ್ಕಾರ ಮಾಡಬಹುದು’ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಕಾಂಗ್ರೆಸ್‌ ಬೆಂಬಲ ಪಡೆಯುವುದಿಲ್ಲ ಅಥವಾ ಕಾಂಗ್ರೆಸ್‌ಗೆ ಬೆಂಬಲ ಕೊಡುವುದಿಲ್ಲ ಎಂದು ಆಮ್‌ ಆದ್ಮಿ ಪಕ್ಷ ಖಚಿತವಾಗಿ ತಿಳಿಸಿರುವುದರಿಂದ ನಮ್ಮ ಮುಂದೆ ಬೇರೆ  ಆಯ್ಕೆಗಳಿಲ್ಲ’ ಎಂದು ಶೀಲಾ ದೀಕ್ಷಿತ್‌ ಹೇಳಿದ್ದಾರೆ. ಮತ್ತೆ ಚುನಾವಣೆ ಅನಿವಾರ್ಯವಾದರೆ ಎದುರಿಸಲು ಸಿದ್ಧ ಎಂದಿದ್ದಾರೆ.

28 ಸ್ಥಾನಗಳನ್ನು ಗೆದ್ದು ರಾಜಕೀಯ ವಲಯಕ್ಕೆ ಆಘಾತ ಕೊಟ್ಟಿರುವ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು, ಬಿಜೆಪಿ ಅಥವಾ ಕಾಂಗ್ರೆಸ್‌ ಜತೆ ಸೇರದೆ ವಿರೋಧ ಪಕ್ಷವಾಗಿ ಕೆಲಸ ಮಾಡಲು ಸಿದ್ಧ ಎಂದು ತಿಳಿಸಿದೆ.

‘ನಾವು ಯಾರ ಬೆಂಬಲವನ್ನೂ ಪಡೆಯುವುದಿಲ್ಲ ಅಥವಾ ಯಾರಿಗೂ ಬೆಂಬಲಿಸುವುದಿಲ್ಲ  ಎಂದು ಮೊದಲಿಂದಲೂ ಹೇಳುತ್ತಾ ಬಂದಿದ್ದೇವೆ’ ಎಂದು  ಎಎಪಿಯ  ಹಿರಿಯ ಮುಖಂಡ ಯೋಗೇಂದ್ರ ಯಾದವ್‌ ಪತ್ರಕರ್ತರಿಗೆ ತಿಳಿಸಿದ್ದಾರೆ.

ಕೇಜ್ರಿವಾಲ್‌ ಶಾಸಕಾಂಗ ಪಕ್ಷದ ನಾಯಕ: ಆಮ್‌ ಆದ್ಮಿ ಪಕ್ಷದ ಶಾಸಕರು ಸೋಮವಾರ ಸಭೆ ಸೇರಿ ಅರವಿಂದ್ ಕೇಜ್ರಿವಾಲ್‌ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ್ದಾರೆ.

ಚುನಾವಣೆ ಪ್ರಕ್ರಿಯೆ ಇನ್ನೂ ಪೂರ್ಣವಾಗದೆ ಇರುವುದರಿಂದ ಲೆಫ್ಟಿನೆಂಟ್‌ ಗವರ್ನರ್‌ ಸರ್ಕಾರ ರಚನೆಗೆ ಯಾರನ್ನೂ ಕರೆದಿಲ್ಲ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಅತಿ ಹೆಚ್ಚು ಶಾಸಕ ಬಲ ಹೊಂದಿರುವ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು. ಆ ಪಕ್ಷ ಸರ್ಕಾರ ರಚಿಸುವುದಿಲ್ಲ ಎಂದು ಖಚಿತಪಡಿಸಿದರೆ ಎರಡನೇ ಅತಿ ದೊಡ್ಡ ಪಕ್ಷವನ್ನು ಕರೆಯಬೇಕಾಗುತ್ತದೆ.

ಕಿರಣ್‌ ಬೇಡಿ ಸಲಹೆ:  ಮತ್ತೆ ಚುನಾವಣೆ ಅನಗತ್ಯ­ವಾಗಿದ್ದು, ಬಿಜೆಪಿ ಜತೆ ಸೇರಿ ಎಎಪಿ ಸರ್ಕಾರ ರಚನೆ ಮಾಡಿದರೆ ಒಳಿತು ಎಂದು ಭ್ರಷ್ಟಾಚಾರ ವಿರುದ್ಧ ಅಣ್ಣಾ ಹಜಾರೆ ಅವರೊಂದಿಗೆ ಹೋರಾಟ ನಡೆಸಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ ಸಲಹೆ ಮಾಡಿದ್ದಾರೆ.

ಸೀಮಾಂಧ್ರ: ಕಾಂಗ್ರೆಸ್‌ಗೆ ಮುಜುಗರ
ನವದೆಹಲಿ (ಪಿಟಿಐ):
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ವಿರೋಧ ವ್ಯಕ್ತಪಡಿಸಿರುವ ಸೀಮಾಂಧ್ರ ಭಾಗದ ಆರು ಕಾಂಗ್ರೆಸ್ ಸಂಸದರು, ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ವಿರುದ್ಧ ಸೋಮವಾರ ಅವಿಶ್ವಾಸ ನಿರ್ಣಯ ಗೊತ್ತುವಳಿಯ ನೋಟಿಸ್ ಜಾರಿ ಮಾಡಿದ್ದಾರೆ.

ಪಕ್ಷದ ಸಂಸದರು ನೀಡಿರುವ ಅವಿಶ್ವಾಸ ನಿರ್ಣಯ ನೋಟಿಸ್‌ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಈ ನೋಟಿಸ್‌ಗೆ ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಟಿಡಿಪಿ ಬೆಂಬಲಿಸಿವೆ.

ಕಾನೂನು ಅಭಿಪ್ರಾಯ ಕೇಳಿದ ರಾಷ್ಟ್ರಪತಿ?: ಆಂಧ್ರಪ್ರದೇಶ ವಿಭಜನೆ  ಸಂಬಂಧ ಸಿದ್ಧ ಪಡಿಸಲಾಗಿರುವ ಮಸೂದೆಯ ಕುರಿತಂತೆ ರಾಷ್ಟ್ರಪತಿ ಅವರು ಕಾನೂನು ಅಭಿಪ್ರಾಯವನ್ನು ಕೇಳಿದ್ದಾರೆ ಎಂದು ಹೇಳಲಾಗಿದೆ.

ಮಿಜೋರಾಂನಲ್ಲಿ ಕಾಂಗ್ರೆಸ್‌ಗೆ ಜಯ
ಐಜ್ವಾಲ್‌ (ಪಿಟಿಐ):
ಈಶಾನ್ಯ ಗುಡ್ಡ­­­ಗಾಡು ರಾಜ್ಯವಾದ ಮಿಜೋರಾಂ ವಿಧಾನಸಭೆಗೆ ಆಡಳಿತಾ­ರೂಢ ಕಾಂಗ್ರೆಸ್‌ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾಗಿದೆ. ಇತರ 4 ರಾಜ್ಯಗಳ ಚುನಾವಣೆ­ಯಲ್ಲಿ ಸೋತು ಸುಣ್ಣವಾಗಿ­ರುವ ಕಾಂಗ್ರೆಸ್‌ಗೆ ಈ ಗೆಲುವು ಕೊಂಚಮಟ್ಟಿನ ಸಮಾಧಾನ ನೀಡಿದೆ. 40 ಕ್ಷೇತ್ರಗಳ ಪೈಕಿ 33ರಲ್ಲಿ ಕಾಂಗ್ರೆಸ್‌,  ಮಿಜೊ ನ್ಯಾಷನಲ್‌ ಫ್ರಂಟ್‌ 5 ಮತ್ತು ಎಂಪಿಪಿ 2 ಸ್ಥಾನಗಳಲ್ಲಿ ಜಯಗಳಿಸಿವೆ. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ 32 ಸದಸ್ಯ ಬಲ ಹೊಂದಿತ್ತು.

ಮುಖ್ಯಮಂತ್ರಿ ಲಾಲ್‌ ತಾನ್ಹಾವ್ಲ ಅವರು ಐದನೇ ಬಾರಿಗೆ ಅಧಿಕಾರದ ಗದ್ದುಗೆ ಏರುವುದು ಬಹುಮಟ್ಟಿಗೆ ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT