ADVERTISEMENT

ದೇವಿ ಶೆಟ್ಟಿ ಪದ್ಮಭೂಷಣ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST
ದೇವಿ ಶೆಟ್ಟಿ ಪದ್ಮಭೂಷಣ
ದೇವಿ ಶೆಟ್ಟಿ ಪದ್ಮಭೂಷಣ   

ನವದೆಹಲಿ (ಪಿಟಿಐ): ಕರ್ನಾಟಕದ ಹೃದ್ರೋಗ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿ ಅವರಿಗೆ ಈ ಬಾರಿಯ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ.

ಖ್ಯಾತ ವನ್ಯಜೀವಿ ತಜ್ಞ ಕೆ.ಉಲ್ಲಾಸ್ ಕಾರಂತ, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ರಂಗಭೂಮಿ ಕಲಾವಿದೆ ಆರ್.ನಾಗರತ್ನಮ್ಮ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಡಾ. ಯಜ್ಞಾಸ್ವಾಮಿ ಸುಂದರರಾಜನ್ ಅವರು `ಪದ್ಮಶ್ರೀ~ಗೆ ಆಯ್ಕೆಯಾಗಿದ್ದಾರೆ.

ಅಸ್ಸಾಂನ ಗಾಯಕ ಭೂಪೇನ್ ಹಜಾರಿಕಾ, ಪ್ರಸಿದ್ಧ ಚಿತ್ರ ಕಲಾವಿದ ಮಾರಿಯೊ ಡಿ. ಮಿರಾಂಡಾ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಭಾರತ ರತ್ನ~ಕ್ಕೆ ಸರ್ಕಾರ ಈ ಬಾರಿಯೂ ಯಾರ ಹೆಸರನ್ನೂ ಪರಿಗಣಿಸಿಲ್ಲ. ದಿವಂಗತ ಪಂ.ಭೀಮಸೇನ ಜೋಶಿ ಅವರಿಗೆ 2008ರಲ್ಲಿ `ಭಾರತ ರತ್ನ~ ನೀಡಿದ ನಂತರ ಇದುವರೆಗೂ ಯಾರ ಹೆಸರನ್ನೂ ಈ ಪ್ರಶಸ್ತಿಗೆ ಪರಿಗಣಿಸಿಲ್ಲ.

ಶಿಕ್ಷಣ, ಕ್ರೀಡೆ, ರಂಗಭೂಮಿ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಹಿತ್ಯ, ಕಲೆ, ಚಲನಚಿತ್ರ ಸೇರಿದಂತೆ ವಿವಿಧ ರಂಗಗಳ ಸಾಧಕರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಒಟ್ಟಾರೆ ಐವರಿಗೆ ಪದ್ಮವಿಭೂಷಣ, 27 ಜನರಿಗೆ ಪದ್ಮಭೂಷಣ ಮತ್ತು 77 ಮಂದಿಗೆ ಪದ್ಮಶ್ರೀ ಘೋಷಿಸಲಾಗಿದೆ. ಒಟ್ಟು ಪದ್ಮ ಪ್ರಶಸ್ತಿಗಳ ಪೈಕಿ ಮೂರನೇ ಒಂದು ಭಾಗದಷ್ಟು ಪ್ರಶಸ್ತಿ ಪಡೆದ ಕಲಾ ಕ್ಷೇತ್ರ ಸಿಂಹಪಾಲು ಗಳಿಸಿದೆ. ಪ್ರಶಸ್ತಿ ಪಡೆದವರಲ್ಲಿ 19 ಮಹಿಳೆಯರು, 14 ಅನಿವಾಸಿ ಭಾರತಿಯರು ಸೇರಿದ್ದಾರೆ.

ರಾಷ್ಟ್ರಪತಿ ಪ್ರತಿಭಾ ಪಾಟೀಲ ಅವರು ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

88 ವರ್ಷದ ಕಲಾವಿದ ಕೆ.ಜಿ.ಸುಬ್ರಮಣ್ಯನ್, ಮಾಜಿ ರಾಜ್ಯಪಾಲ ಟಿ.ವಿ.ರಾಜೇಶ್ವರ್, ಅಣ್ಣಾ ಹಜಾರೆ ಅವರು ಈಚೆಗೆ ಚಿಕಿತ್ಸೆ ಪಡೆದ ಪುಣೆಯ ಸಂಚೇತಿ ಆಸ್ಪತ್ರೆಯ ಎಲುಬು, ಕೀಲು ತಜ್ಞ ಡಾ. ಕಾಂತಿಲಾಲ್ ಸಂಚೇತಿ ಅವರನ್ನು ಪದ್ಮವಿಭೂಷಣಕ್ಕೆ ಆಯ್ಕೆ ಮಾಡಲಾಗಿದೆ.  

 ಚಿತ್ರನಟ ಹಾಗೂ ಬಿಜೆಪಿಯ ಮಾಜಿ ಸಂಸದ ಧರ್ಮೇಂದ್ರ, ಶಬಾನಾ ಅಜ್ಮಿ, `ಸಲಾಂ ಬಾಂಬೆ~ ಖ್ಯಾತಿಯ ನಿರ್ದೇಶಕಿ ಮೀರಾ ನಾಯರ್  ಪದ್ಮಭೂಷಣ, ಅನೂಪ್ ಜಲೋಟಾ, ಮಲೆಯಾಳಂ ಚಲನಚಿತ್ರ ನಿರ್ದೇಶಕ ಪ್ರಿಯದರ್ಶನ್ ಪದ್ಮಶ್ರೀಗೆ ಪಾತ್ರರಾದವರಲ್ಲಿ ಸೇರಿದ್ದಾರೆ.

ಇದೇ ಮೊದಲ ಬಾರಿಗೆ ಸೆರಾಮಿಕ್ ಉದ್ದಿಮೆ ಕ್ಷೇತ್ರಕ್ಕೆ ಮೊದಲ ಬಾರಿಗೆ ಪದ್ಮ ಪ್ರಶಸ್ತಿ ಒಲಿದು ಬಂದಿರುವುದು ವಿಶೇಷ. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಸ್ವಪನ್ ಗುಹಾ ಅವರು ಕಳೆದ ಮೂರು ದಶಕಗಳಲ್ಲಿ ರಾಜಸ್ತಾನದ ಮೂರು ಗ್ರಾಮಗಳಲ್ಲಿ ಸೆರಾಮಿಕ್ ಕೈಗಾರಿಕೆ ಸ್ಥಾಪಿಸಿ 1200 ಸ್ಥಳೀಯರಿಗೆ ಉದ್ಯೋಗ ನೀಡಿದ ಹೆಗ್ಗಳಿಕೆ ಹೊಂದಿದ್ದಾರೆ.

ಪದ್ಮಭೂಷಣ ಪಡೆದ ಪ್ರಮುಖರು: ರಂಗಭೂಮಿಯ ಖಾಲಿದ್ ಚೌಧರಿ, ವರ್ಣಚಿತ್ರ ವಿಭಾಗದಲ್ಲಿ ಜತಿನ್ ದಾಸ್, ಸರೋದ್ ವಾದಕ ಪಂಡಿತ್ ಬುದ್ಧದೇವ್ ದಾಸ್ ಗುಪ್ತ, ಶಾಸ್ತ್ರೀಯ ಗಾಯಕ ಡಾ. ತ್ರಿಪುಣಿತ್ತರ ವಿಶ್ವನಾಥನ್ ಗೋಪಾಲಕೃಷ್ಣನ್, ವಯೊಲಿನ್ ವಾದಕ ಎಂ.ಎಸ್.ಗೋಪಾಲಕೃಷ್ಣನ್, ಇಂಗ್ಲೆಂಡ್‌ನ ಶಿಲ್ಪಿ ದಿ. ಅನಿಷ್ ಕಪೂರ್, ಸಂಸದರನ್ನು `ತಲೆಇಲ್ಲದ ಕೋಳಿಗಳು~ ಎಂದು ಟೀಕಿಸುವ ಮೂಲಕ ಬಿರುಗಾಳಿ ಎಬ್ಬಿಸಿದ್ದ ಸಮಾಜ ಸೇವಕ ಸತ್ಯನಾರಾಯಣ ಗೋಯಂಕಾ, ನ್ಯಾಯಾಧೀಶ ಡಾ. ಪಾಟಿಬಂದ್ಲಾ ಚಂದ್ರಶೇಖರ್ ರಾವ್, ಪ್ರೊ. ಶಶಿಕುಮಾರ್ ಚಿಟ್ರಿ, ಡಾ. ಎಂ.ಎಸ್.ರಘುನಾಥನ್, ವಾಣಿಜ್ಯೋದ್ಯಮಿಗಳಾದ ಸುಬ್ಬಯ್ಯ ವೆಲ್ಲಾಯನ್, ಬಾಲಸುಬ್ರಮಣಿಯನ್ ಮುತ್ತುರಾಮನ್, ಡಾ. ಸುರೇಶ್ ಎಚ್.ಅಡ್ವಾಣಿ, ಡಾ. ನೋಶಿರ್ ಎಚ್. ವಾಡಿಯಾ, ಶಿಕ್ಷಣ ತಜ್ಞ ಪ್ರೊ. ಶಾಂತಾರಾಂ ಬಲ್ವಂತ್ ಮಜುಮ್‌ದಾರ್, ಅಮೆರಿಕದ ಶಿಕ್ಷಣ ತಜ್ಞರಾದ ಪ್ರೊ. ವಿದ್ಯಾ ದೆಹೆಜಿಯಾ, ಪ್ರೊ. ಅರವಿಂದ್ ಪನಗಾರಿಯ, ಡಾ. ಜೋಸ್ ಪೆರೇರಿಯಾ, ಇಂಗ್ಲೆಂಡ್‌ನ ಡಾ. ಹೋಮಿ ಕೆ.ಬಾಬಾ, ನಾಗರಿಕ ಸೇವೆಗಾಗಿ ಕೇರಳದ ಎನ್.ವಿಠ್ಠಲ್, ಪಶ್ಚಿಮ ಬಂಗಾಳದ ರಾಜತಾಂತ್ರಿಕ ರೊನೆನ್ ಸೆನ್.

ಪದ್ಮಶ್ರೀ ಪಡೆದ ಪ್ರಮುಖರು: ಸಂಗೀತ ನಿರ್ದೇಶಕರಾದ ವನ್‌ರಾಜ್ ಭಾಟಿಯಾ, ಜಿಯಾ ಫರೀದುದ್ದೀನ್ ದಾಗರ್, ಸಿತಾರ್ ವಾದಕ ಶಾಹಿದ್ ಪರ್ವೇಜ್ ಖಾನ್, ರಾಜಸ್ತಾನಿ ಜನಪದ ಸಂಗೀತಕಾರ ಸಕಾರ್‌ಖಾನ್ ಮಾಂಗನೀಯರ್, ಒಡಿಶಾದ ಶಾಸ್ತ್ರೀಯ ನೃತ್ಯಗಾರ್ತಿ ಡಾ. ಮಿನಾತಿ ಮಿಶ್ರಾ, ತಮಿಳುನಾಡು ರಂಗಭೂಮಿ ಕಲಾವಿದ ನಟೇಶನ್ ಮುತ್ತುಸ್ವಾಮಿ, ಕೇರಳದ ಚಲನಚಿತ್ರ ನಿರ್ದೇಶಕ ಸೋಮನ್ ನಾಯರ್ ಪ್ರಿಯದರ್ಶನ್, ಕ್ರೀಡಾ ಕ್ಷೇತ್ರದಲ್ಲಿ ಅಜಿತ್ ಬಜಾಜ್ , ಜುಲಾನ್ ಗೋಸ್ವಾಮಿ (ಮಹಿಳಾ ಕ್ರಿಕೆಟ್), ಭಾರತದ ಹಾಕಿ ತಂಡದ ಮಾಜಿ ನಾಯಕ ಉತ್ತರ ಪ್ರದೇಶದ ಜಾಫರ್ ಇಕ್ಬಾಲ್, ದೇವೇಂದ್ರ ಜಾಜ್ರಿಜಾ (ಅಥ್ಲೆಟಿಕ್ಸ್, ಪ್ಯಾರಾಒಲಿಂಪಿಕ್ಸ್- ರಾಜಸ್ತಾನ), ಲಿಂಬಾ ರಾಮ್ (ಆರ್ಚರಿ- ರಾಜಸ್ತಾನ), ಸೈಯದ್ ಮೊಹಮ್ಮದ್ ಆರಿಫ್ (ಬ್ಯಾಡ್ಮಿಂಟನ್- ಆಂಧ್ರಪ್ರದೇಶ), ಪ್ರೊ. ರವಿ ಚತುರ್ವೇದಿ (ಕಾಮೆಂಟರಿ- ದೆಹಲಿ), ಪ್ರಭಾಕರ್ ವೈದ್ಯ (ದೈಹಿಕ ಕ್ರೀಡಾ ಶಿಕ್ಷಣ- ಮಹಾರಾಷ್ಟ್ರ), ಡಾ. ಕಾರ್ತಿಕೇಯ ವಿ.ಸಾರಾಭಾಯಿ (ಪರಿಸರ ಶಿಕ್ಷಣ- ಗುಜರಾತ್)   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.