ADVERTISEMENT

ದೇಶದಾದ್ಯಂತ ಸಂಭ್ರಮದಿಂದ ದೀಪಾವಳಿ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ಮುಂಬೈ (ಪಿಟಿಐ/ಐಎಎನ್‌ಎಸ್): ದೀಪಾವಳಿ ರಂಗು ದೇಶದ ವಿವಿಧೆಡೆ ಸಂಭ್ರಮ ಸಡಗರದಿಂದ ಮೇಳೈಸಿತ್ತು. ಅಮಾವಾಸ್ಯೆಯ ದಿನವಾದ ಬುಧವಾರ ಲಕ್ಷ್ಮಿ ಪೂಜೆಯನ್ನು ಜನರು ವಿಜೃಂಭಣೆಯಿಂದ ಆಚರಿಸಿದರು.

ಮುಂಬೈ, ದೆಹಲಿ, ಅಮೃತಸರ, ಚೆನ್ನೈನಂತಹ ಮಹಾನಗರ ಸೇರಿ ಎಲ್ಲೆಡೆ ಸ್ಥಳೀಯ ಸಂಪ್ರದಾಯ ಹಬ್ಬಕ್ಕೆ ರಂಗು ತುಂಬಿದ್ದವು. ಬಾಲಿವುಡ್‌ನಲ್ಲಂತೂ ನಟ ನಟಿಯರ ದಂಡು ಜಾತಿ ಧರ್ಮಗಳ ಗಡಿ ದಾಟಿ ದೀಪಾವಳಿ ಸಡಗರದಲ್ಲಿ ಮಿಂದೆದ್ದಿತು. ಸಿಹಿ ವಿನಿಮಯ, ಪರಿಸರ ಸ್ನೇಹಿ ಪಟಾಕಿ ಸುಡುವಿಕೆ ಮತ್ತು ಟ್ವಿಟ್ಟರ್‌ಗಳಲ್ಲಿ ಸಂದೇಶ ರವಾನೆಗಳ ಭರಾಟೆ ಎದ್ದು ಕಾಣುತಿತ್ತು.

ದೆಹಲಿ ವರದಿ: ರಾಜಧಾನಿಯಲ್ಲಿ ಮನೆಗಳ ಮುಂದೆ ಅಂದ ಚೆಂದದ ರಂಗೋಲಿ, ಹೂವುಗಳ ಅಲಂಕಾರ, ದೀಪಗಳ ಶೃಂಗಾರಗಳೊಂದಿಗೆ ಆಹ್ಲಾದಕರ ವಾತಾವರಣ ಕಂಡುಬಂದಿತು. ಸದರ್ ಬಜಾರ್, ಬೆಂಗಾಲಿ ಮಾರುಕಟ್ಟೆಗಳಲ್ಲಿ ಸಿಹಿ ಮತ್ತು ಪಟಾಕಿಗಳ ಮಾರಾಟ ಬಿರುಸಾಗಿದ್ದಿತು. ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ರಂಗುರಂಗಿನ ರಂಗೋಲಿಯದೇ ವಿಶೇಷ.

ಅಮೃತಸರ ವರದಿ: ಸಿಖ್ಖರ ಪವಿತ್ರ ಸ್ಥಳವಾದ ಇಲ್ಲಿನ ಸ್ವರ್ಣದೇಗುಲದ  ಬಳಿ ಈ ಬಾರಿ ಪಟಾಕಿ ಮತ್ತು ಬಾಣ ಬಿರುಸುಗಳ ಪ್ರದರ್ಶನಕ್ಕೆ ಕಡಿವಾಣ ಹಾಕುವಂತೆ ಪರಿಸರವಾದಿಗಳು ಹಾಗೂ ಪಂಜಾಬ್ ಪರಿಸರ ನಿಯಂತ್ರಣ ಮಂಡಳಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ) ಯನ್ನು ಆಗ್ರಹಿಸಿರುವುದು ವಿಶೇಷ.

ಅಮೂಲ್ಯವಾದ ಈ ಸ್ಮಾರಕದ ಬಳಿ ಪಟಾಕಿಗಳನ್ನು ಸುಡುವುದರಿಂದ ಕಟ್ಟಡಕ್ಕೆ ಹಾನಿಯುಂಟಾಗುವ ಭೀತಿ ಇದೆ.  ಆದ್ದರಿಂದ ಈ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಅವು ಒತ್ತಾಯಿಸಿವೆ.

ಈ ಮನವಿಗೆ ಸ್ಪಂದಿಸಿರುವ ಎಸ್‌ಜಿಪಿಸಿ ಈ ಬಾರಿ ದೀಪಾವಳಿಯ ದಿನದಂದು ಬಾಣಬಿರುಸುಗಳ ಪ್ರದರ್ಶನವನ್ನು 30 ರಿಂದ 20 ನಿಮಿಷಕ್ಕೆ ತಗ್ಗಿಸಲು ಸಮ್ಮತಿಸಿದೆ. ಸಿಖ್ಖರ ಸಂಪ್ರದಾಯದಲ್ಲಿ ದೀಪಾವಳಿಯನ್ನು `ಬಂದಿ ಛೋಡ್ ದಿವಸ~ ಎಂದು ಮಹತ್ವಪೂರ್ಣ ದಿನವನ್ನಾಗಿ ಆಚರಿಸಲಾಗುತ್ತದೆ.

 ಚೆನ್ನೈ ವರದಿ: ತಮಿಳುನಾಡಿನಲ್ಲಿ ಬುಧವಾರ ಎಣ್ಣೆ ಸ್ನಾನ ವಿಶೇಷವಾಗಿತ್ತು. ಜನರು ಸ್ನಾನ, ಪೂಜೆ ಬಳಿಕ ದೇವಸ್ಥಾನಗಳಿಗೆ ತೆರಳಿ ನಮನ ಸಲ್ಲಿಸಿದರು. ಬೆಳಿಗ್ಗೆ ಚೆನ್ನೈನಲ್ಲಿ ಅಲ್ಲಲ್ಲಿ ತುಂತುರು ಮಳೆ ಹನಿಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.