ನವದೆಹಲಿ (ಪಿಟಿಐ): ದೇಶದ ಅಣು ವಿದ್ಯುತ್ ಸ್ಥಾವರಗಳು ವಿವಿಧ ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆ ಎದುರಿಸುತ್ತಿವೆ ಎಂದು ಸರ್ಕಾರ ಮಂಗಳವಾರ ಹೇಳಿದೆ. ‘ಕೇಂದ್ರ ಭದ್ರತಾ ಸಂಸ್ಥೆಗಳು ಈ ಸ್ಥಾವರಗಳ ಭದ್ರತೆಯನ್ನು ಕಾಲಕಾಲಕ್ಕೆ ಪರಾಮರ್ಶಿಸುತ್ತಲೇ ಇರುತ್ತವೆ. ಅಗತ್ಯ ಬಂದಲ್ಲಿ ಭದ್ರತೆ ಹೆಚ್ಚಳಕ್ಕೆ ಶಿಫಾರಸು ಮಾಡುತ್ತವೆ’ ಎಂದು ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಮುಲ್ಲಪಲ್ಲಿ ರಾಮಚಂದ್ರನ್ ಲೋಕಸಭೆಗೆ ತಿಳಿಸಿದರು.
ಘಟಕಗಳ ಹಿರಿಯ ಅಧಿಕಾರಿಗಳಿಗೆ ಸಂಸ್ಥೆಗಳು ಸಂವೇದನಶೀಲ ಕಾರ್ಯಕ್ರಮಗಳನ್ನು ಸಹ ಆಗಾಗ್ಗೆ ನಡೆಸುತ್ತವೆ.ಯಾವುದೇ ಅಪಾಯದ ಮುನ್ಸೂಚನೆ ಕಂಡುಬಂದರೂ ಅಣು ಶಕ್ತಿ ಇಲಾಖೆ ಮತ್ತು ರಾಜ್ಯ ಸರ್ಕಾರಗಳ ಗಮನಕ್ಕೆ ತಂದು ಚರ್ಚಿಸುತ್ತವೆ ಎಂದು ಹೇಳಿದ್ದಾರೆ. ಎಲ್ಲ ಸೂಕ್ಷ್ಮ ಸ್ಥಾವರಗಳಲ್ಲೂ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಸಿಐಎಸ್‌ಎಫ್‌ಗೆ ಆದೇಶಿಸಲಾಗಿದೆ. ಭದ್ರತೆಗೆ ಸಂಬಂಧಿಸಿದಂತೆ ಅದಕ್ಕೆ ನೆರವಾಗಲು ಇಲಾಖೆಯ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.