ADVERTISEMENT

ದೈತ್ಯ ರಾಕೆಟ್‌ನ ಉಡಾವಣೆ ಯಶಸ್ವಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹೊಸ ಮೈಲಿಗಲ್ಲು

ಪಿಟಿಐ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ದೈತ್ಯ ರಾಕೆಟ್‌ನ ಉಡಾವಣೆ ಯಶಸ್ವಿ
ದೈತ್ಯ ರಾಕೆಟ್‌ನ ಉಡಾವಣೆ ಯಶಸ್ವಿ   

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಎತ್ತರಕ್ಕೆ ಜಿಗಿದಿದೆ. ದೇಶದ ಅತ್ಯಂತ ಭಾರದ ರಾಕೆಟ್‌ ಜಿಎಸ್‌ಎಲ್‌ವಿ ಮಾರ್ಕ್‌–3ಡಿ1 ಮೂಲಕ ಜಿಸ್ಯಾಟ್‌ 19 ಉಪಗ್ರಹವನ್ನು ಸೋಮವಾರ ಯಶಸ್ವಿಯಾಗಿ ಬಾಹ್ಯಾಕಾಶ ಕಕ್ಷೆಗೆ ಸೇರಿಸಿದೆ.

ಗರಿಷ್ಠ ನಾಲ್ಕು ಟನ್‌ಗಳಷ್ಟು ಭಾರದ ಉಪಗ್ರಹಗಳನ್ನು ಹೊತ್ತುಕೊಂಡು ನಭಕ್ಕೆ ಚಿಮ್ಮಬಲ್ಲ ಸಾಮರ್ಥ್ಯವಿರುವ ಈ ರಾಕೆಟ್‌, 3,136 ಕೆಜಿ ತೂಕದ ಜಿಸ್ಯಾಟ್‌–19 ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ಸೇರಿಸಿತು.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ 2ನೇ ಉಡಾವಣಾ ಕಟ್ಟೆಯಿಂದ (ಲಾಂಚ್‌ ಪ್ಯಾಡ್‌) ಆಗಸಕ್ಕೆ ನೆಗೆದ ರಾಕೆಟ್‌, 16 ನಿಮಿಷಗಳಲ್ಲಿ ಉಪಗ್ರಹವನ್ನು ನಿಗದಿತ ಕಕ್ಷೆಯಲ್ಲಿ ಇರಿಸಿತು.

ADVERTISEMENT

ಐತಿಹಾಸಿಕ ದಿನ: ಯಶಸ್ವಿ ಉಡಾವಣೆಯ ನಂತರ ಮಾತನಾಡಿದ ಇಸ್ರೊ ಅಧ್ಯಕ್ಷ ಎ.ಎಸ್‌. ಕಿರಣ್‌ಕುಮಾರ್‌, ‘ಇದೊಂದು ಐತಿಹಾಸಿಕ ದಿನ’ ಎಂದು ಬಣ್ಣಿಸಿದರು.

‘ರಾಕೆಟ್‌ ಅನ್ನು 2002ರಲ್ಲಿ ವಿನ್ಯಾಸಗೊಳಿಸಿದ್ದರೂ 15 ವರ್ಷಗಳ ನಂತರ ಇಸ್ರೊ ತಂಡಕ್ಕೆ ಅದನ್ನು ಯಶಸ್ವಿಯಾಗಿ ಉಡಾಯಿಸಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.

ಈ ಯೋಜನೆಗಾಗಿ ಹಗಲಿರುಳು ದುಡಿದ ಇಸ್ರೊ ವಿಜ್ಞಾನಿಗಳ ತಂಡವನ್ನು ಅವರು ಅಭಿನಂದಿಸಿದರು.

ಅನುಭವದ ಫಲ:  ಘನ, ದ್ರವ ಮತ್ತು ಕ್ರಯೊಜೆನಿಕ್‌ ರಾಕೆಟ್‌ ನೋದಕ (ಪ್ರೊಪಲ್ಷನ್‌) ತಂತ್ರಜ್ಞಾನಗಳ ನಿರ್ವಹಣೆಯಲ್ಲಿ ಇಸ್ರೊ ವಿಜ್ಞಾನಿಗಳು ಹೊಂದಿರುವ ಹೇರಳ ಅನುಭವದ ಆಧಾರದಲ್ಲಿ ಜಿಎಸ್‌ಎಲ್‌ವಿ ಮಾರ್ಕ್‌–3 ರಾಕೆಟ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

2014ರ ಡಿಸೆಂಬರ್‌ 18ರಂದು ಈ ರಾಕೆಟ್‌ನ ಉಪಕಕ್ಷೀಯ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಲಾಗಿತ್ತು.

ಅಭಿನಂದನೆಗಳ ಮಹಾಪೂರ: ಈ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸೇರಿದಂತೆ ಹಲವಾರು ಗಣ್ಯರು ಇಸ್ರೊ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಟ್ವಿಟರ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದಿದೆ.

ಬಾಹುಬಲಿ, ವಿಧೇಯ ಹುಡುಗ (ಶ್ರೀಹರಿಕೋಟಾ) (ಪಿಟಿಐ): ಜಿಎಸ್‌ಎಲ್‌ವಿ ಮಾರ್ಕ್‌ 3–ಡಿ1ನ ಯಶಸ್ವಿ  ಉಡಾವಣೆಯಿಂದ ಖುಷಿಯಲ್ಲಿ ತೇಲುತ್ತಿದ್ದ ಇಸ್ರೊ ವಿಜ್ಞಾನಿಗಳು, ಆ ದೈತ್ಯ ರಾಕೆಟ್‌ ಅನ್ನು ‘ಬಾಹುಬಲಿ’ ಮತ್ತು ‘ವಿಧೇಯ  ಹುಡುಗ’ ಎಂಬ ಅಡ್ಡ ಹೆಸರುಗಳಿಂದ ಕರೆದು ಸಂಭ್ರಮಿಸಿದರು.

‘ಇಸ್ರೊ, ಬಾಹುಬಲಿಗೆ ಜನ್ಮ ನೀಡಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ’ ಎಂದು ಯೋಜನೆ ನಿಯಂತ್ರಣ ಕೇಂದ್ರದಲ್ಲಿ ಹೊರಹೊಮ್ಮಿದ ಹರ್ಷೋದ್ಗಾರಗಳ ನಡುವೆಯೇ ಸ್ಪೇಸ್‌ ಅಪ್ಲಿಕೇಷನ್ಸ್‌ ಸೆಂಟರ್‌ನ ನಿರ್ದೇಶಕ ತಪನ್‌ ಮಿಶ್ರಾ ಹೇಳಿದರು.

‘ಇದು ಕ್ರಾಂತಿಕಾರಕ ರಾಕೆಟ್‌, ಹಾರ್ಡ್‌ವೇರ್‌ಗಳ ವಿಚಾರದಲ್ಲಿ ಇದು ಭಾರಿ ಮುನ್ನಡೆ ಸಾಧಿಸಿದೆ. ಹೆಚ್ಚಿನ ಹಾರ್ಡ್‌ವೇರ್‌ಗಳನ್ನು ದೇಶೀಯವಾಗಿ ತಯಾರಿಸಲಾಗಿದೆ’ ಎಂದು ಇಸ್ರೊ ಪ್ರೊಪಲ್ಷನ್‌ ಕಾಂಪ್ಲೆಕ್ಸ್‌ ನಿರ್ದೇಶಕ ಪಿ.ವಿ. ವೆಂಕಟ ಕೃಷ್ಣನ್‌ ಹೇಳಿದರು.

‘ಇವನೊಬ್ಬ ಜಾಣ ಮತ್ತು ವಿಧೇಯ ಹುಡುಗ’ ಎಂದು ಕ್ರಯೊಜೆನಿಕ್‌ ಎಂಜಿನ್‌ ಹಂತದ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದ ಹಿರಿಯ ವಿಜ್ಞಾನಿಯೊಬ್ಬರು ಬಣ್ಣಿಸಿದರು.

ಗರಿಬಿಚ್ಚಿದ ಕನಸು
ದೈತ್ಯ ರಾಕೆಟ್‌ನ ಉಡಾವಣೆ ಯಶಸ್ವಿಯಾಗಿರುವುದರಿಂದ, ಅಂತರಿಕ್ಷಕ್ಕೆ ಮಾನವನನ್ನು ಕಳುಹಿಸುವ ಇಸ್ರೊದ ಬಹು ವರ್ಷಗಳ ಕನಸು ಗರಿಗೆದರಿದೆ.
ಆಳ ಬಾಹ್ಯಾಕಾಶಕ್ಕೆ ತೆರಳಲು ಹೆಚ್ಚು ಭಾರ ಹೊರುವ ಸಾಮರ್ಥ್ಯದ ರಾಕೆಟ್‌ನ ಅವಶ್ಯಕತೆ ಇದೆ. 2020ರಲ್ಲಿ ಮಾನವನನ್ನು  ಅಂತರಿಕ್ಷಕ್ಕೆ ಕಳುಹಿಸುವ ಗುರಿಯನ್ನು ಇಸ್ರೊ ಇಟ್ಟುಕೊಂಡಿದೆ. ಆ ಯೋಜನೆಗೆ ಈ ರಾಕೆಟ್‌ ಬಳಸುವ ಲೆಕ್ಕಾಚಾರವನ್ನು ಇಸ್ರೊ ಹಾಕಿಕೊಂಡಿದೆ

ಜಿಸ್ಯಾಟ್‌–19ನಲ್ಲಿ ಏನೇನಿದೆ?
ಬ್ಯಾಂಡ್‌ ಸಂವಹನ ಟ್ರಾನ್ಸ್‌ಪಾಂಡರ್‌ಗಳು, ಭೂಸ್ಥಿರ ವಿಕಿರಣ ಸ್ಪೆಕ್ಟ್ರೋಮೀಟರ್‌ (ಜಿಆರ್‌ಎಎಸ್‌ಪಿ), ಲೀಥಿಯಂ ಅಯಾನ್‌ ಬ್ಯಾಟರಿ, ಅತ್ಯಾಧುನಿಕ ವೈಮಾಂತರಿಕ್ಷ ತಂತ್ರಜ್ಞಾನಗಳಾದ ಚಿಕ್ಕದಾದ ಉಷ್ಣ ಕೊಳವೆ, ಫೈಬರ್‌ ಆಪ್ಟಿಕ್‌ ಗೈರೊ, ಮೈಕ್ರೊ–ಎಲೆಕ್ಟ್ರೊ ಮೆಕ್ಯಾನಿಕಲ್‌ ಸಿಸ್ಟಮ್‌ (ಎಂಇಎಂಎಸ್‌) ಆ್ಯಕ್ಸೆಲೆರೊಮೀಟರ್‌, ಕು–ಬ್ಯಾಂಡ್‌ ಟಿಟಿಸಿ ಟ್ರಾನ್ಸ್‌ಪಾಂಡರ್‌
ಹತ್ತು ವರ್ಷಗಳ ಕಾಲ ಈ ಉಪಗ್ರಹ ಕಾರ್ಯನಿರ್ವಹಿಸಲಿದೆ.

* ಜಿಎಸ್‌ಎಲ್‌ವಿ ಮಾರ್ಕ್‌ 3 ಯಶಸ್ವಿ ಉಡಾವಣೆಯಿಂದಾಗಿ ಮುಂದಿನ ಪೀಳಿಗೆಯ ರಾಕೆಟ್‌ ಮತ್ತು ಉಪಗ್ರಹಗಳ ಅಭಿವೃದ್ಧಿ ಭಾರತಕ್ಕೆ ಇನ್ನಷ್ಟು ಸುಲಭವಾಗಲಿದೆ

ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.