ADVERTISEMENT

ಧರ್ಮ ಎಂಬುದು ಪತಿ, ರಾಜಕಾರಣ ಪತ್ನಿ; ಹರಿಯಾಣ ವಿಧಾನಸಭೆಯಲ್ಲಿ ಜೈನ ಮುನಿ ಪ್ರವಚನ

ಪಿಟಿಐ
Published 27 ಆಗಸ್ಟ್ 2016, 10:17 IST
Last Updated 27 ಆಗಸ್ಟ್ 2016, 10:17 IST
ಜೈನ ಮುನಿ ತರುಣ ಸಾಗರ ಮಹಾರಾಜ್
ಜೈನ ಮುನಿ ತರುಣ ಸಾಗರ ಮಹಾರಾಜ್   

ಚಂಡೀಗಢ: ದಿಗಂಬರ ಜೈನ ಮುನಿ ತರುಣ ಸಾಗರ ಮಹಾರಾಜ್ ಅವರ ಪ್ರವಚನದ ಮೂಲಕ ಹರಿಯಾಣ ವಿಧಾನಸಭೆಯ ಚಳಿಗಾಲದ ಅಧಿವೇಶನ ವಿಶಿಷ್ಟವಾಗಿ ಆರಂಭವಾಗಿದೆ. ಶುಕ್ರವಾರ ಚಂಡೀಗಢದ ವಿಧಾನ ಸಭೆಯ ಸಭಾಂಗಣದಲ್ಲಿ ತರುಣ ಸಾಗರ ಅವರ ಕಡ್ವೆ ಪ್ರವಚನ (ಕಟು ಪ್ರವಚನ) ನಡೆದಿದ್ದು, ಜೈನ ಮುನಿ ಸಚಿವ ಶಾಸಕರನ್ನುದ್ದೇಶಿಸಿ ಸುಮಾರು 40 ನಿಮಿಷಗಳ ಪ್ರವಚನ ನೀಡಿದ್ದಾರೆ.

ಪ್ರವಚನದಲ್ಲಿ ಜೈನ ಮುನಿ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿಯವರ ಬೇಟಿ ಬಚಾವೊ ಬೇಟಿ ಪಡಾವೊ ಘೋಷಣೆಯನ್ನು ಪ್ರಸ್ತಾಪಿಸುವ ಮೂಲಕವೇ  ಪ್ರವಚನ ಆರಂಭಿಸಿದ ತರುಣ ಸಾಗರ ಅವರು, ರಿಯೊದಲ್ಲಿ ದೇಶದ ಹೆಣ್ಮಕ್ಕಳು ಸಾಕ್ಷಿ ಮಲಿಕ್ ಮತ್ತು ಪಿವಿ ಸಿಂಧು ಭಾರತಕ್ಕೆ ಕೀರ್ತಿ ತಂದಿದ್ದಾರೆ .

ಲಿಂಗಾನುಪಾತದ ಬಗ್ಗೆ ಮಾತನಾಡಿದ ಅವರು, ನಮ್ಮಲ್ಲಿ ಮದುವೆಯಾಗಲು ಹೆಣ್ಣೇ ಸಿಗುತ್ತಿಲ್ಲ. ಹೆಣ್ಣು ಮಕ್ಕಳ ಸಂಖ್ಯೆ ಅಷ್ಟೊಂದು ಕಡಿಮೆ ಇದೆ. ನೋಡಿ, ನಮ್ಮ ಖಟ್ಟರ್ ಮತ್ತು ಕ್ರೀಡಾ ಸಚಿವ ಅನಿಲ್ ವಿಜ್ ಅವರು ಅವಿವಾಹಿತರಾಗಿಯೇ ಇದ್ದಾರೆ. ಹೆಣ್ಣು ಮಕ್ಕಳಿರುವ ರಾಜಕಾರಣಿಗಳಿಗೆ ಆದ್ಯತೆ ನೀಡಬೇಕು. ಅದಲ್ಲದೆ ಹೆಣ್ಣು ಮಕ್ಕಳಿಲ್ಲದ ಸಂಸಾರಕ್ಕೆ ನಿಮ್ಮ ಹೆಣ್ಮಕ್ಕಳನ್ನು ಮದುವೆ ಮಾಡಿಕೊಡಬಾರದು, ಧಾರ್ಮಿಕ ನಂಬಿಕೆ ಇರುವ ಜನರು ಹೆಣ್ಣು ಮಕ್ಕಳಿಲ್ಲದ ಮನೆಯಿಂದ ದಾನವನ್ನೂ ಪಡೆಯಬಾರದು.

ಪಾಕಿಸ್ತಾನದ ಬಗ್ಗೆಯೂ ಉಲ್ಲೇಖಿಸಿದ ಅವರು,  ಅದು ನಮ್ಮ ಪಕ್ಕದ ದೇಶ, ಅದು ಎಲ್ಲರಿಗೂ ಗೊತ್ತಿರುವ ವಿಷಯವೇ. ಭಯೋತ್ಪಾದನೆಗೆ ಉತ್ತೇಜನ ನೀಡುವುದು, ಭಾರತಕ್ಕೆ ತೊಂದರೆ ಕೊಡುವುದಕ್ಕಾಗಿಯೇ ಬ್ರಹ್ಮಾಸುರರನ್ನು ಹುಟ್ಟಿಸುತ್ತಿದ್ದೆ. ಒಂದು ದಿನ ಪಾಕಿಸ್ತಾನ ತಮಗಾಗಿಯೇ ಬ್ರಹ್ಮಾಸುರರನ್ನು ತಯಾರು ಮಾಡಲಿದೆ.  ಉದ್ದೇಶಪೂರ್ವಕ ಅಲ್ಲದೇ ತಪ್ಪು ಮಾಡಿದರೆ ಅಗ್ಯಾನ್  (ಅಜ್ಞಾನಿ), ಎರಡನೇ ಬಾರಿ ಅದೇ ತಪ್ಪು ಮಾಡಿದರೆ ನಾದಾನ್ (ಅವಿವೇಕಿ), ಎರಡಕ್ಕಿಂತ ಹೆಚ್ಚು ಬಾರಿ ಮಾಡಿದರೆ ಶೈತಾನ್ (ದೆವ್ವ), ನಿರಂತರವಾಗಿ ಮಾಡುತ್ತಲೇ ಇದ್ದರೆ ಪಾಕಿಸ್ತಾನ್, ಸದಾ ಕ್ಷಮಿಸುತ್ತಲೇ ಇರುವುದು ಹಿಂದೂಸ್ತಾನ್!

ಧರ್ಮ ಎಂಬುದು ಗಂಡನಂತೆ, ರಾಜಕಾರಣ ಹೆಂಡತಿ. ತನ್ನ ಹೆಂಡತಿಯನ್ನು ರಕ್ಷಿಸಬೇಕಾದ ಕರ್ತವ್ಯ ಗಂಡನಿಗೆ ಇರುತ್ತದೆ. ಗಂಡನಿಗೆ ಶಿಸ್ತುಬದ್ಧವಾಗಿ ನಡೆದುಕೊಳ್ಳುವುದು ಹೆಂಡತಿಯ ಕರ್ತವ್ಯ. ರಾಜಕಾರಣದ  ಮೇಲೆ ಧರ್ಮದ ಅಂಕುಶ ಇಲ್ಲದೇ ಇದ್ದರೆ ಅದು ಪುಂಡಾನೆಯ ರೀತಿ ಆಗಿ ಬಿಡುತ್ತದೆ.

ಋಷಿಕೇಶದಲ್ಲಿ ಗಂಗಾ ಶುದ್ಧೀಕರಣ ಮಾಡಿದರೆ, ಹರಿದ್ವಾರ ಮತ್ತು ಅದರ ಕೆಳಗಿರುವ ಘಾಟ್ ಗಳೆಲ್ಲಾ ತನ್ನಿಂದ ತಾನೇ ಸ್ವಚ್ಛವಾಗಿ  ಬಿಡುತ್ತವೆ. ಈ ಅಧಿವೇಶನದ ಮೊದಲನೇ ದಿನವೇ  ಧರ್ಮವನ್ನು ನೀವು ವಿಧಾನಸಭೆಯಲ್ಲಿರಿಸಿದರೆ, ರಾಜಕಾರಣದ ಎಲ್ಲ ಘಾಟ್‍ಗಳೂ ತನ್ನಿಂದ ತಾನೇ ಶುದ್ಧೀಕರಣವಾಗಿ ಬಿಡುತ್ತವೆ. ಖಟ್ಟರ್ ಅವರ ಸರಕಾರ ಕೇಸರೀಕರಣ ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬರಬಹುದು. ಆದರೆ ಇದ್ಯಾವುದೂ ಕೇಸರೀಕರಣ ಅಲ್ಲ, ಇದು ರಾಜಕಾರಣದ ಶುದ್ಧೀಕರಣ ಎಂದು ಹೇಳಲು ನಾನು ಇಚ್ಛಿಸುತ್ತೇನೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT