ನವದೆಹಲಿ: ಚುನಾವಣೆಯಲ್ಲಿ ಧರ್ಮದ ಆಧಾರದಲ್ಲಿ ಮತ ಯಾಚನೆ ನಡೆಸಿದರೆ, ಅಂಥ ಚುನಾವಣೆಯನ್ನೇ ಅನೂರ್ಜಿತಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ಸೋಮವಾರ ತೀರ್ಪು ನೀಡಿದೆ.
‘ಅಭ್ಯರ್ಥಿಯ, ಆತನ ಚುನಾವಣಾ ಏಜೆಂಟರ, ಮತದಾರರ ಅಥವಾ ಅಭ್ಯರ್ಥಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿಯ ಧರ್ಮದ ಆಧಾರದಲ್ಲಿ ಮತ ಯಾಚನೆ ತಪ್ಪು’ ಎಂದು ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಬಹುಮತದ ತೀರ್ಪಿನ ಮೂಲಕ ಪ್ರಜಾಪ್ರಾತಿನಿಧ್ಯ ಕಾಯ್ದೆಯ ವ್ಯಾಪ್ತಿಯನ್ನು ಹಿಗ್ಗಿಸಿದೆ. ಇದುವರೆಗೆ ‘ಅಭ್ಯರ್ಥಿಯ ಧರ್ಮ ಅಥವಾ ಅಂತಹ ಇತರ ಅಂಶಗಳ ಆಧಾರದಲ್ಲಿ ಮತ ಕೇಳುವುದು’ ಚುನಾವಣಾ ಭ್ರಷ್ಟಾಚಾರ ಆಗುತ್ತಿತ್ತು.
ಆದರೆ, ಈ ತೀರ್ಪಿನಿಂದಾಗಿ ಅಭ್ಯರ್ಥಿಯ ಧರ್ಮ ಅಥವಾ ಇತರ ಸಂಕುಚಿತ ಅಸ್ಮಿತೆಗಳ ಆಧಾರದಲ್ಲಿ ಮತಯಾಚನೆ ಮಾತ್ರವಲ್ಲದೆ, ಅಭ್ಯರ್ಥಿಯ ಏಜೆಂಟ್ ಹಾಗೂ ಎದುರಾಳಿಯ ಧರ್ಮದ ಆಧಾರದಲ್ಲಿ ಮತ ಕೇಳುವುದು ಕೂಡ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಅಡಿ ಚುನಾವಣಾ ಭ್ರಷ್ಟಾಚಾರ ಎಂದು ಪರಿಗಣಿತವಾಗಲಿದೆ.
ಕಾಯ್ದೆಯ ಸೆಕ್ಷನ್ 123(3)ಯನ್ನು ವ್ಯಾಖ್ಯಾನಿಸಿರುವ ಸಂವಿಧಾನ ಪೀಠ, ‘ಪಂಥ, ಭಾಷೆ ಅಥವಾ ಜಾತಿಯ ಆಧಾರದಲ್ಲಿ ಮತ ಯಾಚನೆ ಬಹಿಷ್ಕರಿಸುವ ಉದ್ದೇಶದಿಂದಲೇ ಈ ಸೆಕ್ಷನ್ ರೂಪಿಸಲಾಗಿದೆ’ ಎಂದು ಹೇಳಿದೆ.
ಅಭ್ಯರ್ಥಿ ಅಥವಾ ಅಭ್ಯರ್ಥಿಯ ಏಜೆಂಟ್ ‘ಆತನ’ ಧರ್ಮ, ಜನಾಂಗ, ಜಾತಿ, ಸಮುದಾಯ ಅಥವಾ ಭಾಷೆಯ ನೆಲೆಯಲ್ಲಿ ಮತ ಯಾಚಿಸುವುದು ಅಥವಾ ಮತ ಚಲಾಯಿಸದಂತೆ ಮನವಿ ಮಾಡುವುದು ಚುನಾವಣಾ ಭ್ರಷ್ಟಾಚಾರ ಎಂದು ಸೆಕ್ಷನ್ 123(3)ಯಲ್ಲಿ ಹೇಳಲಾಗಿದೆ.
ಬಹುಮತದ ತೀರ್ಪು ಬರೆದಿರುವ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್, ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್, ಎಸ್.ಎ. ಬೋಬಡೆ ಮತ್ತು ಎಲ್. ನಾಗೇಶ್ವರ ರಾವ್ ಅವರು, ‘ಕಾಯ್ದೆಯ ಈ ಸೆಕ್ಷನ್‌ನಲ್ಲಿ ಬಳಸಿರುವ ಆತನ ಎಂಬ ಪದವು, ಅಭ್ಯರ್ಥಿಯನ್ನು, ಅವನ ಏಜೆಂಟನನ್ನು, ಮತದಾರರನ್ನು ಹಾಗೂ ಅಭ್ಯರ್ಥಿಯ ಸಮ್ಮತಿಯೊಂದಿಗೆ ಧರ್ಮದ ಬಗ್ಗೆ ಪ್ರಸ್ತಾಪಿಸುವ ಯಾವುದೇ ವ್ಯಕ್ತಿಯನ್ನು ಒಳಗೊಳ್ಳುತ್ತದೆ’ ಎಂದು ಹೇಳಿದ್ದಾರೆ.
‘ಧರ್ಮ, ಜನಾಂಗ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದಲ್ಲಿ ಮತ ಯಾಚನೆಗೆ ಈ ಕಾಯ್ದೆಯಡಿ ಅವಕಾಶವೇ ಇಲ್ಲ. ಅಂಥ ಕೆಲಸ ಮಾಡಿದರೆ, ಅದು ಚುನಾವಣಾ ಭ್ರಷ್ಟಾಚಾರ ಆಗುತ್ತದೆ. ಅಭ್ಯರ್ಥಿ, ಆತನ ಏಜೆಂಟ್, ಎದುರಾಳಿ ಅಥವಾ ಮತದಾರರ ಧರ್ಮದ ಆಧಾರದಲ್ಲಿ ಮತ ಯಾಚನೆ ಆಗಿದ್ದರೆ, ಚುನಾವಣೆಯನ್ನು ರದ್ದು ಮಾಡಬಹುದು’ ಎಂದು ನಾಲ್ವರು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.
‘ಪ್ರಭುತ್ವವು ಜಾತ್ಯತೀತವಾಗಿರುವ ಕಾರಣ, ಅದು ಯಾವುದೇ ಧರ್ಮದ ಜೊತೆ ಗುರುತಿಸಿಕೊಳ್ಳಲಾಗದು. ಸಂಸತ್ತು, ವಿಧಾನಸಭೆಗಳು ಅಥವಾ ಯಾವುದೇ ಸಂಸ್ಥೆಗೆ ನಡೆಯುವ ಚುನಾವಣೆಗಳು ಜಾತ್ಯತೀತ ಕ್ರಿಯೆಗಳಾಗಿರಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಠಾಕೂರ್ ಪ್ರತ್ಯೇಕ ತೀರ್ಪು ಬರೆದಿದ್ದಾರೆ.
ನ್ಯಾಯಮೂರ್ತಿಗಳಾದ ಎ.ಕೆ. ಗೋಯಲ್, ಯು.ಯು. ಲಲಿತ್ ಮತ್ತು ಡಿ.ವೈ. ಚಂದ್ರಚೂಡ್ ಅವರು ಪ್ರತ್ಯೇಕ ತೀರ್ಪು ಬರೆದಿದ್ದು, ‘ಆತನ ಧರ್ಮ ಎಂಬ ಪದಗಳು ಧರ್ಮದ ಆಧಾರದಲ್ಲಿ ಮತ ಯಾಚಿಸುವ ಅಭ್ಯರ್ಥಿಯ ಹಾಗೂ ಧರ್ಮದ ಆಧಾರದಲ್ಲಿ ಮತ ನೀಡಬೇಡಿ ಎನ್ನುವಾಗ ಎದುರಾಳಿಯ ಧರ್ಮವನ್ನು ಮಾತ್ರ ಒಳಗೊಳ್ಳುತ್ತವೆ. ಮತದಾರರ ಧರ್ಮ ಈ ಪದಗಳ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಹೇಳಿದ್ದಾರೆ.
‘ಆತನ ಧರ್ಮ’ ಎಂದರೆ ಯಾರ ಧರ್ಮ ಎಂಬ ಪ್ರಶ್ನೆ ಮುಖ್ಯವಾಗಿದ್ದ ಕಾರಣ, ಈ ಬಗ್ಗೆ ಪೀಠ ವಿವರಿಸಿದೆ.