ADVERTISEMENT

ಧಾರ್ಮಿಕ ಟ್ರಸ್ಟ್‌ಗಳ ವಿರುದ್ಧ ಐಟಿ ತನಿಖೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST

ನವದೆಹಲಿ (ಪಿಟಿಐ): ತೆರಿಗೆ ವಂಚನೆ ವಿರುದ್ಧ ಎಚ್ಚೆತ್ತಿರುವ ಆದಾಯ ತೆರಿಗೆ ಇಲಾಖೆ ತೆರಿಗೆ ವಿನಾಯಿತಿ ಸೌಲಭ್ಯ ಪಡೆದು, ವಂಚಿಸುತ್ತಿರುವ ಸಂಸ್ಥೆಗಳು, ದತ್ತಿ ಮತ್ತು ಧಾರ್ಮಿಕ ಟ್ರಸ್ಟ್, ಸಂಘಗಳ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದೆ.

ತೆರಿಗೆ ವಿನಾಯಿತಿ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡು ಸಾರ್ವಜನಿಕರಿಂದ ಪಡೆದ ದೇಣಿಗೆ ಹಣವನ್ನು ವ್ಯವಹಾರಕ್ಕೆ ಬಳಸಿಕೊಳ್ಳುತ್ತಿರುವ ದತ್ತಿ ಮತ್ತು ಧಾರ್ಮಿಕ ಟ್ರಸ್ಟ್‌ಗಳ ಬಗ್ಗೆ ದೇಶಾದ್ಯಂತ ತನಿಖೆ ನಡೆಸಲು ಆದಾಯ ತೆರಿಗೆ (ಐಟಿ) ಇಲಾಖೆ ಸಿದ್ಧತೆ ನಡೆಸಿದೆ.

ಇಲಾಖೆ ಸಿದ್ಧಪಡಿಸಿರುವ ವರ್ಗೀಕೃತ ವರದಿಯ ಪ್ರಕಾರ ದೊಡ್ಡ ಸಂಖ್ಯೆಯ ದತ್ತಿ ಮತ್ತು ಧಾರ್ಮಿಕ ಟ್ರಸ್ಟ್‌ಗಳು ಮತ್ತು ಸಂಘಗಳು ತೆರಿಗೆ ವಿನಾಯಿತಿ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದು, ದೇಣಿಗೆ ಹಣವನ್ನು ದಾನ, ಧರ್ಮ, ಸೇವಾ ಕಾರ್ಯಗಳಿಗೆ ಬದಲಾಗಿ ವಾಣಿಜ್ಯ, ವ್ಯವಹಾರ, ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ.

ಸಾರ್ವಜನಿಕರಿಂದ ಸಂಗ್ರಹಿಸಿದ ದೇಣಿಗೆಗೆ ತೆರಿಗೆ ವಿನಾಯಿತಿ ಸೌಲಭ್ಯ ಪಡೆದು, ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದರ ವಿರುದ್ಧ ಆದಾಯ ತೆರಿಗೆ ಕಾಯಿದೆ 2009-10ಕ್ಕೆ ಕೆಲವು ಷರತ್ತುಗಳನ್ನು ವಿಧಿಸಿತ್ತು.

ಈ ನಿಬಂಧನೆ ಪ್ರಕಾರ ಯಾವುದೇ ದತ್ತಿ ಮತ್ತು ಧಾರ್ಮಿಕ ಟ್ರಸ್ಟ್ ಸಾರ್ವಜನಿಕರಿಂದ ಪಡೆದ ದೇಣಿಗೆಯನ್ನು ಅನ್ಯ ಉದ್ದೇಶಕ್ಕೆ ಬಳಸಿದರೆ, ಅಂತಹ ಟ್ರಸ್ಟ್‌ಗಳು ತೆರಿಗೆ ವಿನಾಯ್ತಿಗೆ ಒಳಪಡುವುದಿಲ್ಲ. ಆದರೆ ಈಗ ಇಲಾಖೆ ಸಿದ್ಧಪಡಿಸಿರುವ ವರ್ಗೀಕೃತ ವರದಿಯಿಂದ, ದತ್ತಿ ಮತ್ತು ಧಾರ್ಮಿಕ ಟ್ರಸ್ಟ್‌ಗಳು ಸಾರ್ವಜನಿಕರಿಂದ ಸಂಗ್ರಹಿಸಿದ ನಿಧಿಯನ್ನು ದಾನ, ಧರ್ಮ, ಸೇವಾ ಕಾರ್ಯಗಳಿಗೆ ಹೊರತಾಗಿ ಅನ್ಯ ಕಾರಣಕ್ಕೆ, ವ್ಯವಹಾರ, ವಾಣಿಜ್ಯ, ವ್ಯಾಪಾರಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ. ಹಾಗಾಗಿ ಈ ಎಲ್ಲಾ ಪ್ರಕರಣಗಳನ್ನು ಈಗ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಎಷ್ಟು ಟ್ರಸ್ಟ್‌ಗಳು ತೆರಿಗೆ ವಿನಾಯ್ತಿ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಅವುಗಳ ಗುರುತು ಹಾಗೂ ಆ ತೆರಿಗೆಯ ಪ್ರಮಾಣದ ಬಗ್ಗೆ ಮಾಹಿತಿ ನೀಡಲು ಮೂಲಗಳು ನಿರಾಕರಿಸಿದ್ದು, ತನಿಖೆ ನಡೆಯುತ್ತಿರುವುದರಿಂದ ಈ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದರು.

ತೆರಿಗೆ ವಿನಾಯ್ತಿ ಸೌಲಭ್ಯದ ಮೇಲ್ವಿಚಾರಣೆ ನೋಡಿಕೊಳ್ಳುವ ಇಲಾಖೆಯ ಶಾಖೆ ಈಗ ಯಾವ ಯಾವ ಟ್ರಸ್ಟ್‌ಗಳು ತಮಗೆ ನೀಡಿದ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡಿವೆ ಎಂದು ಪತ್ತೆ ಮಾಡುತ್ತಿದ್ದು, ತನಿಖೆಯನ್ನೂ ನಡೆಸಲಾಗುವುದು. 

ನಿಗಾ ವಹಿಸಲು ಸೂಚನೆ: ಧಾರ್ಮಿಕ ಟ್ರಸ್ಟ್ ಎಂದು ನೋಂದಣಿ ಮಾಡಿಸಿಕೊಂಡಿರುವ ಟ್ರಸ್ಟ್‌ಗಳೂ ಸೇರಿದಂತೆ ಇಂತಹ ಟ್ರಸ್ಟ್‌ಗಳನ್ನು ಪತ್ತೆ ಮಾಡಿ ನಿಗಾ ಇಡಲು ದೇಶಾದ್ಯಂತ ಆದಾಯ ತೆರಿಗೆ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ.

 ತೆರಿಗೆ ವಿನಾಯಿತಿ ಪಡೆಯುವ ಸಲುವಾಗಿ ಈ ಟ್ರಸ್ಟ್‌ಗಳು ಆದಾಯ ತೆರಿಗೆ ಕಾಯಿದೆ ಸೆಕ್ಷನ್ 11(ದತ್ತಿ ಮತ್ತು ಧಾರ್ಮಿಕ ಉದ್ದೇಶದಿಂದ ಹೊಂದಿರುವ ಆಸ್ತಿಯಿಂದ ಬಂದಿರುವ ಆದಾಯ) ಮತ್ತು ಸೆಕ್ಷನ್ 12ರ (ಟ್ರಸ್ಟ್ ಅಥವಾ ಸಂಸ್ಥೆಗಳು ಸಾರ್ವಜನಿಕರಿಂದ ಪಡೆದ ದೇಣಿಗೆ) ಅನ್ವಯ ನೋಂದಣಿ ಮಾಡಿಕೊಂಡು, ಸಾರ್ವಜನಿಕರಿಂದ ಅಪಾರ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಿ, ಅದನ್ನು ಅಪಾರ ಪ್ರಮಾಣದಲ್ಲಿ ವಾಣಿಜ್ಯ, ವ್ಯಾಪಾರದ ಉದ್ದೇಶಕ್ಕೆ ಬಳಸುತ್ತಿವೆ ಎನ್ನುವುದನ್ನು ವರದಿಯಲ್ಲಿ ತಿಳಿಸಲಾಗಿದೆ.

ತೆರಿಗೆ ಉಲ್ಲಂಘನೆಗೆ ಶಿಕ್ಷೆ: ತೆರಿಗೆ ವಿನಾಯಿತಿ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣಗಳ ಪರಿಶೀಲನೆ ಮತ್ತು ತನಿಖೆ ನಡೆಸಿದ ನಂತರ ತೆರಿಗೆ ಉಲ್ಲಂಘನೆಗೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಲು ಅಂತಹ ಟ್ರಸ್ಟ್‌ಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ತೆರಿಗೆ ವಿನಾಯ್ತಿ ಸೌಲಭ್ಯವನ್ನು ಪಡೆದು ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಮೂಲಕ ವಂಚಿಸಿರುವ ತೆರಿಗೆ ಹಣ ಕೋಟ್ಯಂತರ ರೂಪಾಯಿಗಳಾಗಬಹುದು ಎಂದು ಇಲಾಖೆ ಅಂದಾಜು ಮಾಡಿದೆ. ಪೂರ್ಣ ತನಿಖೆ ನಂತರವೇ ಒಟ್ಟು ಮೊತ್ತದ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.