ADVERTISEMENT

ನಕಲಿ ಎನ್‌ಕೌಂಟರ್: ಬಿಜೆಪಿ ಶಾಸಕನ ಬಂಧನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಜೈಪುರ (ಪಿಟಿಐ): 2006ರಲ್ಲಿ ನಡೆದ ಸ್ಥಳೀಯ ಮದ್ಯ ಕಳ್ಳ ಸಾಗಣೆದಾರ ದಾರಾ ಸಿಂಗ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಬಿಜೆಪಿ ಶಾಸಕ ರಾಜೇಂದ್ರ ರಾಥೋರ್ ಅವರನ್ನು ಬಂಧಿಸಿದೆ.

ತಾರಾನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಾಥೋರ್ ಅವರನ್ನು ಅವರ ನಿವಾಸದಲ್ಲಿ ಬೆಳಿಗ್ಗೆ ಬಂಧಿಸಿ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಯಿತು.

ಈ ಪ್ರಕರಣದಲ್ಲಿ ಎಡಿಜಿಪಿ ಎ.ಕೆ. ಜೈನ್ ಪಾತ್ರದ ಬಗ್ಗೆಯೂ ಸಿಬಿಐಗೆ ವಿವರ ಬೇಕಿದ್ದು, ಅವರು ಈಗಾಗಲೇ ವಿಶೇಷ ನ್ಯಾಯಾಲಯದ ಎದುರು ಶರಣಾಗತರಾಗಿದ್ದಾರೆ.

ಸಾಂದರ್ಭಿಕ ಸಾಕ್ಷ್ಯಗಳ ಪ್ರಕಾರ, ಹಗೆತನದ ಹಿನ್ನೆಲೆಯಲ್ಲಿಯೇ ವಿಶೇಷ ಕಾರ್ಯಾಚರಣೆ ದಳ (ಎಸ್‌ಒಜಿ) ಸಿಬ್ಬಂದಿಯಿಂದ ದಾರಾ ಹತ್ಯೆಯಾಗಿದ್ದಾರೆ. ಈ ಬಗ್ಗೆ ಎಡಿಜಿಪಿ ಎ.ಕೆ. ಜೈನ್, ಎಸ್‌ಒಜಿ ಎಸ್‌ಪಿ ಎ. ಪಂಚಮುಖಿ ಮತ್ತು ಹೆಚ್ಚುವರಿ ಎಸ್‌ಪಿ ಅರ್ಶದ್ ಅಲಿ  ಸೇರಿದಂತೆ ಇತರ ಅಧಿಕಾರಿಗಳು ನಿಗಾ ವಹಿಸಿದ್ದರು. ಈ ಅವಧಿಯಲ್ಲಿ ಶಾಸಕ ರಾಥೋರ್ ಅವರು ಈ ಅಧಿಕಾರಿಗಳೊಂದಿಗೆ ನಿರಂತರವಾಗಿ  ದೂರವಾಣಿ ಸಂಪರ್ಕದಲ್ಲಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ.

ಎಸ್‌ಒಜಿ ಸಿಬ್ಬಂದಿ ದಾರಾನನ್ನು ಅಕ್ರಮವಾಗಿ ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಹಲವು ದಿನಗಳ ಕಾಲ ಒತ್ತೆಯಾಳಾಗಿ ಇಟ್ಟುಕೊಂಡು ನಂತರ ವ್ಯವಸ್ಥಿತವಾಗಿ ಕೊಲೆ ಮಾಡಿದ್ದಾರೆ ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ನಮೂದಿಸಿದೆ. ಬಂಧನಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ರಾಥೋರ್, ಕಾಂಗ್ರೆಸ್ ಸರ್ಕಾರ ವಿನಾಕಾರಣ ತಮ್ಮನ್ನು ಈ ಘಟನೆಯೊಂದಿಗೆ ತಳುಕು ಹಾಕುತ್ತಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.