ADVERTISEMENT

ನಕ್ಸಲರ ಬಳಿ ಕೈಗಾರಿಕೆಗಳ ಸ್ಫೋಟಕ ?

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ನವದೆಹಲಿ, (ಪಿಟಿಐ): ಬಿಹಾರ, ಜಾರ್ಖಂಡ್, ಛತ್ತೀಸ್‌ಗಡ ಮತ್ತು ಒಡಿಶಾದ ಕೈಗಾರಿಕೋದ್ಯಮ ಬಳಸುವ ಸ್ಫೋಟಕಗಳು ನಕ್ಸಲೀಯರ ಕೈಸೇರುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ರಕ್ಷಣಾ ಸಂಸ್ಥೆಗಳು, ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿವೆ.

ನಕ್ಸಲೀಯರ ಪ್ರಭಾವ ಇರುವ ಈ ರಾಜ್ಯಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ನೆಲಬಾಂಬ್ ಸ್ಫೋಟ ಪ್ರಕರಣಗಳು ಪೊಲೀಸರು ಮತ್ತು ರಕ್ಷಣಾ ಸಂಸ್ಥೆಗಳ ನಿದ್ದೆಗೆಡಿಸಿವೆ. ಸ್ಫೋಟಕ ಸಾಮಗ್ರಿ ಸರಬರಾಜು ಆಗುತ್ತಿರುವ ಮೂಲವನ್ನು ಪೊಲೀಸರು ಜಾಲಾಡಿದಾಗ ಅವರ ಅನೇಕ ದಿನಗಳ ಗುಮಾನಿ ಒಂದು ರೂಪವನ್ನು ಪಡೆದಿದೆ.  

ಕೈಗಾರಿಕಾ ಉದ್ದೇಶಗಳಿಗೆ ಈ ಭಾಗದ ಅನೇಕ ಉದ್ಯಮಗಳು ನಾಗಪುರದ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಾ ಸಂಸ್ಥೆಯಿಂದ (ಪಿಇಎಸ್‌ಒ) ಪರವಾನಗಿ ಪಡೆದು  ಸ್ಫೋಟಕಗಳನ್ನು ಖರೀದಿಸುತ್ತವೆ. ಆ ಸ್ಫೋಟಕಗಳು ನೇರವಾಗಿ ನಕ್ಸಲೀಯರ ಕೈಸೇರುತ್ತಿವೆ ಎಂಬ ಗುಮಾನಿ ಅನೇಕ ದಿನಗಳಿಂದ ರಕ್ಷಣಾ ಸಂಸ್ಥೆಗಳಿಗಿದೆ.

ನಕ್ಸಲೀಯರು ಈ ಸ್ಫೋಟಕಗಳನ್ನು ಕದ್ದು ಸಾಗಾಟ ಮಾಡುತ್ತಿರಬಹುದು ಅಥವಾ ಉದ್ಯಮಿಗಳನ್ನು ಬೆದರಿಸಿ ಕೊಂಡೊಯ್ಯುತ್ತಿರಬಹುದು. ಹಾಗೆ ಕದ್ದ ಸ್ಫೋಟಕಗಳನ್ನೇ ನಕ್ಸಲ್ ನಿಗ್ರಹ ಕಾರ್ಯಾಚರಣೆ ಪಡೆಯ ಪೊಲೀಸರ ವಿರುದ್ಧ ಬಳಸಲಾಗುತ್ತಿದೆ ಎನ್ನಲಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದು ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಗಣಿಗಾರಿಕೆ ಸೇರಿದಂತೆ ಇನ್ನೂ ಅನೇಕ ಉದ್ಯಮಗಳಲ್ಲಿ ಎಷ್ಟು ಪ್ರಮಾಣದ ಸ್ಫೋಟಕಗಳನ್ನು ಬಳಸಲಾಗುತ್ತಿದೆ ಎಂಬ ಕರಾರುವಕ್ಕಾದ ಅಂಕಿ, ಸಂಖ್ಯೆಗಳನ್ನು ಪತ್ತೆಹಚ್ಚುವುದು ಕಠಿಣವಾದ ಕೆಲಸ ಎನ್ನುತ್ತಾರೆ ಅಧಿಕಾರಿಗಳು.

ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಸ್ಫೋಟಕಗಳನ್ನು ಖರೀದಿಸುವ ಕೈಗಾರಿಕೋದ್ಯಮಿಗಳು, ಬಳಸದೆ ಉಳಿದ ಹೆಚ್ಚುವರಿ ಸ್ಫೋಟಕಗಳನ್ನು ನಕ್ಸಲೀಯರಿಗೆ ನೀಡುತ್ತಾರೆ ಎಂಬ ವಾದವೂ ಇದೆ. ಇನ್ನೂ ಹಲವು ಪ್ರಸಂಗಗಳಲ್ಲಿ ನಕ್ಸಲೀಯರೇ ಸ್ಫೋಟಕ ಸಾಮಗ್ರಿಗಳ ಅಂಗಡಿಗಳಿಗೆ ನೇರವಾಗಿ ನುಗ್ಗಿ ಕದ್ದಿರುವ ಉದಾಹರಣೆಗಳಿವೆ.

ನಕ್ಸಲೀಯರ ಗುಂಪುಗಳಿಗೆ ಆರ್ಥಿಕ ನೆರವು ಒದಗಿಸುವ ಆರೋಪದ ಮೇಲೆ ಉದ್ಯಮ ಸಮೂಹವೊಂದರ ಹಿರಿಯ ಅಧಿಕಾರಿಯನ್ನು ಕಳೆದ ತಿಂಗಳು ಛತ್ತೀಸ್‌ಗಡ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಹಲವರ ವಿಚಾರಣೆ ನಡೆಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.