ADVERTISEMENT

ನಟ ದಿಲೀಪ್‌ಗೆ ಕೇರಳ ಹೈಕೋರ್ಟ್‌ ಜಾಮೀನು

ಏಜೆನ್ಸೀಸ್
Published 3 ಅಕ್ಟೋಬರ್ 2017, 11:12 IST
Last Updated 3 ಅಕ್ಟೋಬರ್ 2017, 11:12 IST
ದಿಲೀಪ್‌ (ಸಂಗ್ರಹ ಚಿತ್ರ)
ದಿಲೀಪ್‌ (ಸಂಗ್ರಹ ಚಿತ್ರ)   

ಕೊಚ್ಚಿ: ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜುಲೈನಲ್ಲಿ ಬಂಧನಕ್ಕೊಳಗಾಗಿದ್ದ ಮಲೆಯಾಳ ನಟ ದಿಲೀಪ್‌ಗೆ ಕೇರಳ ಹೈಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ.

ದಿಲೀಪ್‌ ಈ ಹಿಂದೆ ಸಲ್ಲಿಸಿದ್ದ ನಾಲ್ಕು ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಳ್ಳಿ ಹಾಕಿತ್ತು. ಈ ಪೈಕಿ ಎರಡು ಅರ್ಜಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮತ್ತು ಇನ್ನೆರಡು ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದವು.

ಪಾಸ್‌ಪೋರ್ಟ್‌ ವಾಪಸ್‌ ಮಾಡುವುದು, ಒಂದು ಲಕ್ಷ ರೂಪಾಯಿ ಠೇವಣಿ ಮತ್ತು ಇದೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತೆ ನೀಡಬೇಕು ಎಂಬುದೂ ಸೇರಿ ಕಠಿಣ ನಿರ್ಬಂಧಗಳನ್ನು ಮುಂದಿಟ್ಟು ನ್ಯಾಯಮೂರ್ತಿ ಸುನಿಲ್‌ ಥಾಮಸ್‌ ಅವರು ಜಾಮೀನು ನೀಡಿದರು. ಸಾಕ್ಷ್ಯಗಳನ್ನು ನಾಶ ಮಾಡಬಾರದು ಮತ್ತು ಕರೆದಾಗಲೆಲ್ಲ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂಬ  ಷರತ್ತನ್ನೂ ವಿಧಿಸಲಾಗಿದೆ. ‘ದಿಲೀಪ್‌ ವಿರುದ್ಧದ ತನಿಖೆ ಅಂತಿಮ ಹಂತದಲ್ಲಿದೆ. ಆದ್ದರಿಂದ ಅವರನ್ನು ವಶದಲ್ಲಿಟ್ಟುಕೊಳ್ಳುವುದು ಅಗತ್ಯವಿಲ್ಲ’ ಎಂದು ನ್ಯಾಯಮೂರ್ತಿ ಹೇಳಿದರು.

ADVERTISEMENT

ಜುಲೈ 10 ರಂದು ಬಂಧಿಸಲಾಗಿದ್ದ ದಿಲೀಪ್‌ ಅವರನ್ನು ಅಲುವಾ ಉಪ ಕಾರಾಗೃಹದಲ್ಲಿ 85 ದಿನಗಳಿಂದ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.