ADVERTISEMENT

ನಟ ಸೈಫ್ ಆಲಿ ಖಾನ್ ವಿರುದ್ಧ ಆರೋಪ ಪಟ್ಟಿ

ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿ ಮೇಲಿನ ಹಲ್ಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಮುಂಬೈ (ಪಿಟಿಐ): ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿ ಮತ್ತು ಆತನ ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಇಬ್ಬರು ಸಹಚರರ ವಿರುದ್ಧ ಮುಂಬೈ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.

ಉದ್ಯಮಿ ಇಕ್ಬಾಲ್ ಮೀರ್ ಶರ್ಮ ಮತ್ತು ಅವರ ಚಿಕ್ಕಪ್ಪ ರಮಣ್ ಪಟೇಲ್ ಅವರ ಮೇಲೆ ಸೈಫ್ ಮತ್ತು ಸಹಚರರು ಹಲ್ಲೆ ಮಾಡಿದ್ದರು. ಈ ಬಗ್ಗೆ  ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಐಪಿಸಿ ಕಲಂ 325ರ ಅಡಿ (ಹಲ್ಲೆ) ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಇಲ್ಲಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪ ಪಟ್ಟಿಯಲ್ಲಿ 29 ಮಂದಿಯ ಹೇಳಿಕೆಯನ್ನು ದಾಖಲಿಸಲಾಗಿದೆ' ಎಂದು ವಲಯ ಡಿಸಿಪಿ ರವೀಂದ್ರ ಶಿಶ್ವೆ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ಫೆಬ್ರುವರಿ 22ರಲ್ಲಿ ಘಟನೆ ನಡೆದಿದ್ದು, ನಟ ಸೈಫ್ ಅವರು, ನಟಿ ಕರೀನಾ ಕಪೂರ್, ಆಕೆಯ ಸಹೋದರಿ ಕರೀಷ್ಮಾ, ಮಲೈಕಾ ಅರೋರಾ ಖಾನ್, ಅಮೃತಾ ಅರೋರಾ ಸೇರಿದಂತೆ ಇತರ ಸ್ನೇಹಿತರೊಂದಿಗೆ ತಾಜ್ ಹೋಟೇಲ್‌ನ ರೆಸ್ಟೋರೆಂಟ್‌ನಲ್ಲಿ ಸೇರಿದ್ದರು.

ಆಗ ಸೈಫ್ ಸ್ನೇಹಿತರು ಗದ್ದಲ ಮಾಡಿದಾಗ ಉದ್ಯಮಿ ಶರ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಸಿಟ್ಟಿಗೆದ್ದ ಸೈಫ್ ಮತ್ತು  ಅವರ ಇಬ್ಬರು ಸ್ನೇಹಿತರಾದ ಶಕೀಲ್ ಲಡಕ್ ಮತ್ತು ಬಿಲಾಲ್ ಅಮ್ರಹಿ ಅವರು ಶರ್ಮ ಮತ್ತು ಅವರ ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.