ADVERTISEMENT

ನಡುಗಿದ ಉತ್ತರ ಭಾರತ; ಸಿಕ್ಕಿಂ ತತ್ತರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 20:20 IST
Last Updated 18 ಸೆಪ್ಟೆಂಬರ್ 2011, 20:20 IST
ನಡುಗಿದ ಉತ್ತರ ಭಾರತ; ಸಿಕ್ಕಿಂ ತತ್ತರ
ನಡುಗಿದ ಉತ್ತರ ಭಾರತ; ಸಿಕ್ಕಿಂ ತತ್ತರ   

ಗ್ಯಾಂಗ್ಟಕ್, ನವದೆಹಲಿ (ಪಿಟಿಐ): ದೇಶದ ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಭಾನುವಾರ ಸಂಜೆ ಭೂಕಂಪನವಾಗಿದ್ದು ಸುಮಾರು 18ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿದ್ದಾರೆ.

ಸಿಕ್ಕಿಂನಿಂದ 50 ಕಿ.ಮೀ. ದೂರದಲ್ಲಿ ನೇಪಾಳದ ಗಡಿ ಬಳಿಯ ಮ್ಯಾಂಗಾನ್ ಮತ್ತು ಸಾಕ್ಯೋಂಗ್ ಪ್ರದೇಶದಲ್ಲಿ ಕೇಂದ್ರ ಬಿಂದು ಹೊಂದಿದ್ದ  ಭೂಕಂಪ ಸಂಜೆ 6.10ಕ್ಕೆ ಸಂಭವಿಸಿದೆ. ನೇಪಾಳ, ಸಿಕ್ಕಿಂ, ಈಶಾನ್ಯ ರಾಜ್ಯಗಳೇ ಅಲ್ಲದೆ ದೆಹಲಿ, ಲಖನೌ ಸೇರಿದಂತೆ ನೂರಾರು ಊರುಗಳಲ್ಲಿ ಭೂಮಿ ಕಂಪಿಸಿದ್ದು ಸಾವಿರಾರು ಮಂದಿ ಆತಂಕದಿಂದ ಮನೆಯಿಂದ ಹೊರಗೆ ಬಂದು ರಸ್ತೆಗಳಲ್ಲಿ ನಿಂತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.

ಕಳೆದ ಎರಡು ದಶಕಗಳಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ಅತಿ ದೊಡ್ಡ ಪ್ರಮಾಣದ ಭೂಕಂಪನ ಇದಾಗಿದೆ. ಸಿಕ್ಕಿಂನಲ್ಲಿ ಭಾನುವಾರ ಎರಡು ಸಲ ಭೂಮಿ ಕಂಪಿಸಿದ್ದು ಮೊದಲ ಬಾರಿಗೆ ರಿಕ್ಟರ್‌ಮಾಪಕದಲ್ಲಿ 6.8ರಷ್ಟು ತೀವ್ರತೆ ಇದ್ದರೆ, ಎರಡನೇ ಸಲ ಅದು 5.3ರಷ್ಟಿತ್ತು ಎಂದು ಭಾರತೀಯ ಪವನಶಾಸ್ತ್ರ ಇಲಾಖೆಯ ಮೂಲಗಳು ಖಚಿತ ಪಡಿಸಿವೆ.

ಗ್ಯಾಂಗ್ಟಕ್ ಮತ್ತು ಡಾರ್ಜಿಲಿಂಗ್‌ಗಳಲ್ಲಿ ಬಹು ಅಂತಸ್ತಿನ ನೂರಾರು ಕಟ್ಟಡಗಳಲ್ಲಿ ಬಿರುಕು ಕಂಡು ಬಂದಿವೆ. ಪೆಗಾಂಗ್ ಪ್ರದೇಶದಲ್ಲಿ ಇಂಡೊ ಟಿಬೆಟನ್ ಗಡಿ ಭದ್ರತಾ ದಳಕ್ಕೆ ಸೇರಿದ ಎರಡು ಕಟ್ಟಡಗಳು ಸಂಪೂರ್ಣ ಕುಸಿದು ಬಿದ್ದಿವೆ. ಆದರೆ ಪ್ರಾಣಹಾನಿಯ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ.

ಈ ಪ್ರದೇಶದಲ್ಲೆಲ್ಲಾ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿದು ಹೋಗಿದ್ದು ಎಲ್ಲೆಲ್ಲೂ ಕಗ್ಗತ್ತಲು ಕವಿದಿದೆ. ಮೊಬೈಲ್ ಟವರ್‌ಗಳೆಲ್ಲಾ ಜಖಂಗೊಂಡಿರುವುದರಿಂದ ಈಶಾನ್ಯ ರಾಜ್ಯಗಳು ಮತ್ತು ನೇಪಾಳದ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಜತೆಗೆ ಧಾರಾಕಾರ ಮಳೆಯೂ ಸುರಿಯುತ್ತಿದ್ದು ಪರಿಹಾರ ಕಾರ್ಯಗಳಿಗೆ ಇನ್ನಿಲ್ಲದ ಅಡಚಣೆ ಉಂಟಾಗಿದೆ.

ಈ ನಡುವೆ ಇಂಡೊ ಟಿಬೆಟನ್ ಗಡಿ ಭದ್ರತಾ ದಳದ ಯೋಧರು 15 ಮಂದಿ ಪ್ರವಾಸಿಗರು ಮತ್ತು 150 ಗ್ರಾಮಸ್ಥರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಅಸ್ಸಾಂ, ಮೇಘಾಲಯ, ತ್ರಿಪುರ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ರಾಜಸ್ತಾನ, ಚಂಡಿಗಡ, ದೆಹಲಿ ಸೇರಿದಂತೆ ಉತ್ತರ ಮತ್ತು ಈಶಾನ್ಯ ಭಾರತದ ಬಹುತೇಕ ಕಡೆ ಕಂಪನದ ಅನುಭವವಾಗಿದೆ. ಪಶ್ಚಿಮ ಬಂಗಾಳದ ಉತ್ತರ ಭಾಗದ ನೂರಾರು ಮನೆಗಳು ಕುಸಿದಿವೆ. ಆದರೆ ಗಾಯಾಳುಗಳ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.

ಸಿಕ್ಕಿಂದಾದ್ಯಂತ 30ಸೆಕೆಂಡ್‌ನಿಂದ ಒಂದು ನಿಮಿಷದವರೆಗೆ ಭೂಮಿ ನಡುಗಿದ ಅನುಭವವಾಗಿದೆ ಎಂದು ಕೇಂದ್ರ ಸರ್ಕಾರದ ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಶೈಲೇಶ್ ನಾಯಕ್ ತಿಳಿಸಿದ್ದಾರೆ.


ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ ನಾಲ್ಕು ತಂಡಗಳು ಸಿಕ್ಕಿಂಗೆ ತೆರಳಿವೆ. ಭಾರತೀಯ ವಾಯುಪಡೆಯ ಐದು ವಿಮಾನಗಳು ರಕ್ಷಣಾ ಕಾರ್ಯಕ್ಕಾಗಿ ದುರ್ಘಟನೆ ನಡೆದ ಸ್ಥಳದತ್ತ ಹಾರಿದವು.

ಘಟನೆಯ ಬಗ್ಗೆ ಮಾಹಿತಿ ಬರುತ್ತಿದ್ದಂತೆಯೇ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಿಕ್ಕಿಂ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಸರ್ವ ರೀತಿಯ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ.
 

ಇಬ್ಬರು ಯೋಧರ ಸಾವು
ನವದೆಹಲಿ (ಪಿಟಿಐ): ಭೂಕಂಪನದ ವೇಳೆ ಸೇನೆಗೆ ಸೇರಿದ ಕಟ್ಟಡ ಕುಸಿದಿದ್ದು ಉತ್ತರ ಸಿಕ್ಕಿಮ್‌ನಲ್ಲಿ ಇಬ್ಬರು ಯೋಧರು ಮೃತ ಪಟ್ಟಿದ್ದಾರೆಂದು ಸೇನಾ ಮೂಲಗಳು ತಿಳಿಸಿವೆ.

ಸೇನೆಗೆ ಸೇರಿದ ಸುಮಾರು ಮೂರು ವಾಹನಗಳು ಕಾಣೆಯಾಗಿದ್ದು, ಅವುಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಆರಂಭಿಸಲಾಗಿದೆ. ಈ ವಾಹನಗಳಲ್ಲಿ ಸೈನಿಕರು ಪ್ರಯಾಣಿಸುತ್ತಿದ್ದರೆನ್ನಲಾಗಿದೆ.

ಸೇನಾಪಡೆಯು ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಗ್ಯಾಂಗ್ಟಕ್, ಡಾರ್ಜಿಲಿಂಗ್ ಮತ್ತು ಕಾಲಿಂಗ್‌ಪಾಂಗ್‌ಗಳಲ್ಲಿ ಸಾವಿರಾರು ಮಂದಿ ನಾಗರಿಕರು ಸೇನಾ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.

ಭೂಕಂಪನ ಸಂಭವಿಸಿದ ನಂತರ ಗ್ಯಾಂಗ್ಟಕ್-ಸಿಲಿಗುರಿ ನಡುವಣ ರಸ್ತೆಯ ಮೇಲೆ ಗುಡ್ಡ ಕುಸಿದಿದ್ದು, ಸಂಚಾರಕ್ಕೆ ಸಂಪೂರ್ಣ ಅಡ್ಡಿ ಉಂಟಾಗಿದೆ. ಸೇನೆಯ ತಾಂತ್ರಿಕ ವಿಭಾಗದವರು ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ್ದಾರೆ.


ಸಿಕ್ಕಿಂನಲ್ಲಿ ಏಳು ಮಂದಿ ಸತ್ತಿದ್ದಾರೆ ಎಂದು ಅಲ್ಲಿನ ಮುಖ್ಯ ಕಾರ್ಯದರ್ಶಿ ಕರ್ಮ ಗ್ಯಾಟ್ಸೊ ಖಚಿತ ಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 4 ಮಂದಿ ಸತ್ತಿದ್ದಾರೆ ಎಂದು ಆ ರಾಜ್ಯದ ಮುಖ್ಯ ಕಾರ್ಯದರ್ಶಿ ಸಮರ್ ಘೋಷ್ ತಿಳಿಸಿದ್ದಾರೆ. ಬಿಹಾರದ ನಳಂದ ಮತ್ತು ದರ್ಬಾಂಗಾ ಜಿಲ್ಲೆಗಳಲ್ಲಿ  ಇಬ್ಬರು ಸತ್ತಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅವರ ಆದೇಶದ ಮೇರೆಗೆ ದೆಹಲಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆದಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪ್ರಧಾನಿಯವರೇ ಖುದ್ದು ಎಲ್ಲದರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಕೇಂದ್ರದ ಸಂಪುಟ ಕಾರ್ಯದರ್ಶಿ ಅಜಿತ್ ಕುಮಾರ್ ಸೇಥ್ ತಿಳಿಸಿದ್ದಾರೆ. ಇದೀಗ ಸಿಕ್ಕಿಂ ಭೂಕಂಪನವು ದೇಶದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿಯೇ ನಡೆದ ನಾಲ್ಕನೇ ಭೂಕಂಪನವಾಗಿದೆ ಎಂದು ಭಾರತ ಪವನ ವಿಜ್ಞಾನ ಇಲಾಖೆಯು ತಿಳಿಸಿದೆ. ಸೆಪ್ಟೆಂಬರ್ 4ರಂದು ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ (4.2 ತೀವ್ರತೆ), ಸೆ.7ರಂದು ಹರಿಯಾಣದ ಪಾಣಿಪತ್ ಪ್ರದೇಶದಲ್ಲಿ (4.2 ತೀವ್ರತೆ), ಸೆ.11ರಂದು ಗುಜರಾತ್‌ನ ಕಛ್ ಪ್ರದೇಶದಲ್ಲಿ (3.4 ತೀವ್ರತೆ) ಭೂಕಂಪನದ ಅನುಭವವಾಗಿದೆ.

ಈಶಾನ್ಯ ರಾಜ್ಯಗಳಲ್ಲಿ ಭೂಕಂಪ ಪದೇ ಪದೇ ಸಂಭವಿಸುತ್ತಲೇ ಇದೆ. 2009ರಲ್ಲಿ ಆ ಪ್ರದೇಶಗಳಲ್ಲಿ ಸುಮಾರು 34 ಸಲ ಲಘುವಾಗಿ ಭೂಮಿ ಕಂಪಿಸಿದ್ದು ದಾಖಲಾಗಿದೆ. ಇದಕ್ಕೂ ಮೊದಲು 2007 ಮತ್ತು 2008ರಲ್ಲಿ 26 ಸಲ ಭೂಮಿ ಲಘುವಾಗಿ ಕಂಪಿಸಿತ್ತೆಂದು ಭೂಕಂಪ ಅಧ್ಯಯನ ಕೇಂದ್ರವು ತಿಳಿಸಿದೆ.
ಈ ವರ್ಷ ಫೆ. 4ರಂದು ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.4 ತೀವ್ರತೆಯ ಭೂಕಂಪವಾಗಿತ್ತು. 

ಭೂತಾನ್‌ನಲ್ಲಿ 2009ರ ಸೆಪ್ಟೆಂಬರ್ 21ರಂದು ಸಂಭವಿಸಿದ 6.2ರ ತೀವ್ರತೆಯ ಭೂಕಂಪನದ ವೇಳೆ 6ಮಂದಿ ಸಾವನ್ನಪ್ಪಿದ್ದರು, ಹಲವು ಕಟ್ಟಡಗಳು ಕುಸಿದಿದ್ದವು.
 

ADVERTISEMENT

ರೈಲ್ವೆಗೆ ಹಾನಿ ಇಲ್ಲ
ನವದೆಹಲಿ (ಪಿಟಿಐ):ಭೂಕಂಪದ ಘಟನೆಯಿಂದಾಗಿ ರೈಲ್ವೆ ಇಲಾಖೆಯು ಬಂಗಾಳದ ಉತ್ತರ ಭಾಗ, ಬಿಹಾರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಚಲಿಸುವ ರೈಲುಗಳೆಲ್ಲವೂ ಗಂಟೆಗೆ 30ರಿಂದ 40 ಕಿ.ಮೀ. ವೇಗ ಮಿತಿಯಲ್ಲಿಯೇ ಸಾಗಬೇಕೆಂದು ಭಾನುವಾರ ರಾತ್ರಿ ಆದೇಶ ಹೊರಡಿಸಿದೆ.

ಅಸ್ಸಾಂ: ಭೂಕಂಪ ಪರಂಪರೆ : ಅಸ್ಸಾಂ ರಾಜ್ಯಕ್ಕೆ ಭೂಕಂಪದ ಅನುಭವ ಇದೇ ಮೊದಲೇನಲ್ಲ. 1897ರ ಜೂನ್ 12ರಂದು ರಿಕ್ಟರ್‌ಮಾಪಕದಲ್ಲಿ 8.1ರ ತೀವ್ರತೆಯ ಭೂಕಂಪವಾಗಿತ್ತು. ಆಗ ಸುಮಾರು 1,500ಕ್ಕೂ ಹೆಚ್ಚು ಮಂದಿ ಸತ್ತಿದ್ದರು. ಆ ನಂತರ 1950ರ ಆಗಸ್ಟ್ 15ರಂದು ಸಂಭವಿಸಿದ ಭೂಕಂಪ (8.6ರ ತೀವ್ರತೆ) ದಲ್ಲಿ ಕೂಡಾ ಅಷ್ಟೇ ಪ್ರಮಾಣದ ಸಾವು ನೋವುಗಳಾಗಿದ್ದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.