ADVERTISEMENT

ನಾಗರಿಕ ತಂಡದ ವಿರುದ್ಧ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಪಟ್ನಾ (ಐಎಎನ್‌ಎಸ್): ಅಣ್ಣಾ ಹಜಾರೆ ಅವರ ಹೋರಾಟವನ್ನು ಬೆಂಬಲಿಸಿ ದೆಹಲಿಯಲ್ಲಿ ಆತ್ಮಾಹುತಿಗೆ ಯತ್ನಿಸಿ ಬಳಿಕ ಮೃತಪಟ್ಟ ದಿನೇಶ್ ಯಾದವ್ ಕುಟುಂಬದವರು ನಾಗರಿಕ ಸಮಾಜದ ಕಾರ್ಯಕರ್ತರಿಗಿಂತ ರಾಜಕಾರಣಿಗಳೇ ಮೇಲು ಎಂಬ ಭಾವನೆ ತಾಳಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ.ಪಿ.ಠಾಕೂರ್ ಅವರು ಯಾದವ್ ಗ್ರಾಮವಾದ ಸರ್ಫುದ್ದೀನ್‌ಪುರಕ್ಕೆ ಭೇಟಿ ನೀಡಿದ್ದು ಯಾರ ಗಮನಕ್ಕೂ ಬಂದಿಲ್ಲ. ಆದರೆ ನಾಗರಿಕ ಸಮಾಜದ ಸದಸ್ಯರ‌್ಯಾರೂ ಯಾದವ್ ಮನೆಗೆ ಭೇಟಿ ನೀಡದೇ ಇರುವುದು ಪ್ರಮುಖವಾಗಿ ಗಮನ ಸೆಳೆಯುತ್ತಿದೆ.

`ಠಾಕೂರ್ ಅವರು ದಿನೇಶ್ ಪತ್ನಿ ಮಲ್ಮತಿಯ ದೇವಿ ಅವರಿಗೆ  ಸರ್ಕಾರಿ ಕೆಲಸಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಅಣ್ಣಾ ಹಜಾರೆಯವರಾಗಲೀ, ಅವರ ತಂಡದವರಾಗಲೀ ನಮ್ಮ ಮನೆ ಕಡೆ ಸುಳಿದಿಲ್ಲ. ನಿಜಕ್ಕೂ ಇದು ದುರದೃಷ್ಟಕರ~ ಎಂದು ದಿನೇಶ್ ತಂದೆ ಬಿಂದಾ ಯಾದವ್ ತಿಳಿಸಿದ್ದಾರೆ.

ಇಡೀ ಕುಟುಂಬವನ್ನು ಪೊರೆಯುತ್ತಿದ್ದ ದಿನೇಶ್ ತಮ್ಮ ಅಜ್ಜಿ, ಹೆತ್ತವರು, ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ. ಆ. 23ರಂದು ದೆಹಲಿಯ ರಾಜ್‌ಘಾಟ್‌ನಲ್ಲಿ ಅವರು ಅಣ್ಣಾ ಪರ ಘೋಷಣೆ ಕೂಗುತ್ತ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಶೇ 70-80ರಷ್ಟು ಸುಟ್ಟಗಾಯಗಳಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ 29ರಂದು  ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.