ADVERTISEMENT

ನಿಪಾ ವೈರಸ್‌ಗೆ ಕೇರಳದಲ್ಲಿ 10 ಸಾವು, 12 ಜನರ ಸ್ಥಿತಿ ಗಂಭೀರ

ಏಜೆನ್ಸೀಸ್
Published 21 ಮೇ 2018, 10:26 IST
Last Updated 21 ಮೇ 2018, 10:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ನಿಪಾ ವೈರಸ್‌ಗೆ ಉತ್ತರ ಕೇರಳದಲ್ಲಿ ಸೋಮವಾರ ಬೆಳಿಗ್ಗೆ ಮತ್ತೇರಡು ಜನ ಮೃತಪಟ್ಟಿದ್ದಾರೆ. ಹಾಗಾಗಿ ಈ ವೈರಸ್‌ಗೆ ಎರಡು ವಾರಗಳಲ್ಲಿ ಬಲಿಯಾದವರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ.

ಈ ವೈರಸ್‌ನ ಸೋಂಕು ಹರಡದಂತೆ ತಡೆಯಲು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಸಹ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಿದೆ.

‘ಸದ್ಯ ಈ ವೈರಸ್‌ ತಗುಲಿರುವ 12 ಜನರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇನ್ನು 20 ಜನರ ಮೇಲೆ ನಾವು ನಿಗ ಇರಿಸಿದ್ದೇವೆ. ವೈರಸ್‌ ಪೀಡಿದ ಪ್ರದೇಶದ ಸುತ್ತಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದೇವೆ’ ಎಂದು ಕೇರಳದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಈ ಅಪಾಯಕಾರಿ ವೈರಸ್‌ ತಡೆಯಲು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವೈರಸ್‌ನ ಗುಣಲಕ್ಷಣಗಳನ್ನು ತಿಳಿಸಲು, ಅದರಿಂದ ಸುರಕ್ಷತೆ ಕಾಯ್ದುಕೊಳ್ಳಲು ಸಹಾಯವಾಣಿ ಸಹ ಆರಂಭಿಸಿದೆ.

ಈ ವೈರಸ್‌ ಪೀಡಿತ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಿದ್ದ ಲಿನಾ ಎಂಬ ನರ್ಸ್‌ ಒಂದು ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಸೋಮವಾರ ಬೆಳಿಗ್ಗೆ ಲಿನಾ ಮೃತಪಟ್ಟರು.

‘ಸೋಂಕು ತಡೆಯಲು ಬೇಕಾದ ಸೂಕ್ತ ರಕ್ಷಣಾ ಪರಿಕರಗಳನ್ನು ಇಲಾಖೆ ನೀಡಿಲ್ಲ. ಲಿನಾರ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸದೆ, ವಿದ್ಯುತ್‌ ಚಿತಾಗಾರದಲ್ಲಿ ದಹಿಸಲಾಗಿದೆ’ ಎಂದು ಆಸ್ಪತ್ರೆಯ ಸಿಬ್ಬಂದಿ ಮತ್ತು ಸಂಬಂಧಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಕೇರಳದ ಪೆರಂಬ್ರ ಎಂಬ ಹಳ್ಳಿಯ ಒಂದೇ ಕುಟುಂಬದ ಮೂವರ ಮೃತಪಟ್ಟ ಬಳಿಕ ಈ ವೈರಸ್‌ ಬೆಳಕಿಗೆ ಬಂದಿತ್ತು. ‘ಸಾಕು ಪ್ರಾಣಿಗಳ ಸಾವಿನ ಬಳಿಕ ರೋಗ ಹರಡುತ್ತಿದೆ. ಇದನ್ನು ಸ್ಥಳೀಯ ಅಧಿಕಾರಿಗಳ ಗಮನಕ್ಕೂ ತಂದಿದ್ದೆವು. ಅವರ ನಿರ್ಲಕ್ಷದಿಂದಾಗಿ ಈಗ ಸೋಂಕು ಹೆಚ್ಚುತ್ತಿದೆ’ ಎಂದು ಸ್ಥಳೀಯರು ದೂರಿದ್ದಾರೆ.

ಮಲೇಷ್ಯಾದ ನಿಪಾ ಎಂಬಲ್ಲಿ ಈ ವೈರಸ್‌ 1998ರಲ್ಲಿ ಮೊದಲ ಬಾರಿಗೆ ಕಂಡುಬಂದಿತ್ತು. ಬಾವುಲಿ, ಹಂದಿ ಮತ್ತು ಸಾಕು ಪ್ರಾಣಿಗಳಿಂದ ಹರಡುವ ಈ ವೈರಸ್‌ ಕೇರಳದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಇದರಿಂದ ಹರಡುವ ಕಾಯಿಲೆಗೆ ನಿರ್ದಿಷ್ಟವಾದ ಔಷಧಿ ಇಲ್ಲ. ಈ ವೈರಸ್‌ಗೆ ತುತ್ತಾದವರು ತೀವ್ರತರದ ಸುಸ್ತು, ಜ್ವರ, ತಲೆನೋವು, ನಿದ್ರಾಹೀನತೆಯಿಂದ ಬಳಲುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.