ನವದೆಹಲಿ (ಪಿಟಿಐ): ಬಂಡವಾಳ ಹೂಡಿಕೆ ಮತ್ತು ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಅವಕಾಶ ನೀಡುವ ನೂತನ ವಿದ್ಯುತ್ ದರ ನೀತಿಗೆ ಕೇಂದ್ರ ಸಚಿವ ಸಂಪುಟ ಸಂಪುಟ ಒಪ್ಪಿಗೆ ನೀಡಿದೆ.
ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರಲು ಮುಂದಾಗಿರುವ ಸರ್ಕಾರ, ವಿದ್ಯುತ್ ಉತ್ಪಾದನಾ ವೆಚ್ಚ ಮತ್ತು ತೆರಿಗೆಗಳನ್ನು ಗ್ರಾಹಕರ ಮೇಲೆ ವರ್ಗಾಯಿಸಲು ನೂತನ ನೀತಿಯಲ್ಲಿ ಅವಕಾಶ ಕಲ್ಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆ ನೂತನ ವಿದ್ಯುತ್ ನೀತಿಗೆ ಅನುಮೋದನೆ ನೀಡಿದೆ. ಹಾಲಿ ಇರುವ ವಿದ್ಯುತ್ ಉತ್ಪಾದನಾ ಘಟಕಗಳನ್ನು ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ. ಅಲ್ಲದೆ ತಾಜ್ಯದಿಂದ ಉತ್ಪಾದಿಸುವ ವಿದ್ಯುತ್ ಅನ್ನು ರಾಜ್ಯ ಸರ್ಕಾರಗಳು ಕಡ್ಡಾಯವಾಗಿ ಖರೀದಿಸಬೇಕಾಗುತ್ತದೆ.
ನೂತನ ನೀತಿಯಲ್ಲಿನ ಪ್ರಮುಖ ಅಂಶಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಇಂಧನ ಸಚಿವ ಪೀಯೂಷ್ ಗೋಯಲ್, ‘ಎಲ್ಲರಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಹೊಸ ನೀತಿ ಸಹಕಾರಿಯಾಗಲಿದೆ’ ಎಂದರು.
ಪರಿಸರ ಸಂರಕ್ಷಣೆ ಜೊತೆಗೆ, ಯೋಜನೆಗಳ ಅನುಷ್ಠಾನ ಸಂದರ್ಭದಲ್ಲಿ ತಲೆದೋರುವ ವಿವಾದಗಳನ್ನು ಕಡಿಮೆ ಮಾಡಲು ಮತ್ತು ಹೂಡಿಕೆಯನ್ನು ಆಕರ್ಷಿಸಲು ಹೊಸ ನೀತಿಯಲ್ಲಿ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ವಿದ್ಯುತ್ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತರುವ ಉದ್ದೇಶದಿಂದ 2006ರ ವಿದ್ಯುತ್ ನೀತಿಗೆ ತಿದ್ದುಪಡಿ ತರಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
‘ಇಂಧನ ಕ್ಷೇತ್ರದಲ್ಲಿ ದಕ್ಷತೆ, ಪರಿಸರ ಸಂರಕ್ಷಣೆ, ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವಿದ್ಯುತ್ ಲಭ್ಯತೆ ಮತ್ತು ಎಲ್ಲರಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ’ ಎಂದರು.
ಹೊಸನೀತಿಯಲ್ಲಿ ಏನಿದೆ?
* ಎಲ್ಲ ವರ್ಗದ ಗ್ರಾಹಕರಿಗೆ ದಿನದ 24 ಗಂಟೆ ವಿದ್ಯುತ್ ಪೂರೈಕೆ
* ಇದುವರೆಗೆ ವಿದ್ಯುತ್ ಕಾಣದ ಕುಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು
* 2022ರ ವೇಳೆಗೆ ಶೇ 8ರಷ್ಟು ಸೌರವಿದ್ಯುತ್ ಬಳಕೆ
* ಘನ ತ್ಯಾಜ್ಯಗಳಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ
* ವಿದ್ಯುತ್ ಘಟಕಗಳನ್ನು ವಿಸ್ತರಿಸುವ ಮೂಲಕ ಗ್ರಾಹಕರಿಗೆ ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ
* ವಿದ್ಯುತ್ ಉತ್ಪಾದನಾ ವೆಚ್ಚ ಕಡಿಮೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ
* ವಿದ್ಯುತ್ ಕಳ್ಳತನ ತಡೆಗೆ ಸ್ಮಾರ್ಟ್ ಮೀಟರ್‌ಗಳನ್ನು ತ್ವರಿತವಾಗಿ ಅಳವಡಿಸುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.