ADVERTISEMENT

ನಿರೀಕ್ಷಿತ ಸುಧಾರಣೆ ತರಲು ಸಿಂಗ್ ವಿಫಲ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 19:30 IST
Last Updated 7 ಜುಲೈ 2012, 19:30 IST

ನವದೆಹಲಿ: `ಸ್ವತಃ ಅರ್ಥಶಾಸ್ತ್ರಜ್ಞರಾಗಿರುವ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ್ ಅಧಿಕಾರಾವಧಿಯ ಕಳೆದ ಮೂರು ವರ್ಷಗಳಲ್ಲಿ ಭಾರತ ಹೆಚ್ಚಿನದೇನೂ ಸಾಧಿಸಲಾಗಿಲ್ಲ, ಉದಾರೀಕರಣದ ಗಾಳಿ ಮೊದಲಿನಷ್ಟು ಈಗ ತೀವ್ರವಾಗಿಲ್ಲ, ಅವರ ಸಂಪುಟದ ಸಹೊದ್ಯೋಗಿಗಳನ್ನೇ ನಿಯಂತ್ರಿಸಲಾಗದಷ್ಟು ಅವರು ಕುಂದಿಹೋಗಿದ್ದಾರೆ~.

ಹೀಗೆ ಭಾರತದ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಕಳಪೆ ಸಾಮರ್ಥ್ಯವನ್ನು ಟೀಕಿಸಿರುವುದು ಅಮೆರಿಕದ ಪ್ರತಿಷ್ಠಿತ `ಟೈಮ್~ ಪತ್ರಿಕೆಯ ಜುಲೈ ಸಂಚಿಕೆಯ ಮುಖಪುಟ ಲೇಖನದಲ್ಲಿ. ಡಾ. ಸಿಂಗ್ ಅವರ ಕಾರ್ಯವೈಖರಿಯನ್ನು ವಿಮರ್ಶೆಗೆ ಒಳಪಡಿಸಿರುವ ಪತ್ರಿಕೆ, ಸಿಂಗ್ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ತರುವಲ್ಲಿ ವಿಫಲವಾಗಿದ್ದಾರೆ ಎಂದು ಹೇಳಿದೆ.

ಕಳೆದ ಮೂರು ವರ್ಷಗಳ ಹಿಂದೆ ಇದೇ ಪತ್ರಿಕೆ ಡಾ. ಸಿಂಗ್ ಅವರನ್ನು, ಕೋಟಿ ಕೋಟಿ ಜನರ ಬದುಕು ಬದಲಿಸುವ ಶಕ್ತಿ ಹೊಂದಿರುವ ಸುಧಾರಕ ಎಂದು ಬಣ್ಣಿಸಿತ್ತು. ನಿಗದಿತ ಸಮಯದೊಳಗೆ ಸುಧಾರಣೆ ಕೈಗೊಳ್ಳಲಾಗದ ಸಿಂಗ್ ಅವರನ್ನು ಪ್ರಶ್ನಿಸಿರುವ ಪತ್ರಿಕೆ ಭಾರತದ ಆರ್ಥಿಕತೆ ಕುಸಿಯುತ್ತಿದ್ದು ಉದ್ಯಮಾಧಾರಿತ ಸುಧಾರಣಾ ಕ್ರಮಗಳು ರಾಜಕೀಯವಾಗಿ ಜನಪ್ರಿಯವಾಗುತ್ತಿಲ್ಲ ಎಂದೂ ತಿಳಿಸಿದೆ.

`ಕಳೆದ ಮೂರು ವರ್ಷಗಳಲ್ಲಿ ಸಿಂಗ್ ಬರಿ ಕಾಲಹರಣ ಮಾಡಿದ್ದು, ಭಾರತಕ್ಕೀಗ ರೋಬೊಟ್‌ನಂತಹ ವ್ಯಕ್ತಿಯೊಬ್ಬರ ಅಗತ್ಯವಿದೆ. ಪ್ರಧಾನಿ ಡಾ. ಸಿಂಗ್‌ಗೆ ಈ ಅರ್ಹತೆ ಇದೆಯೇ ?~ ಎಂದು ಪ್ರಶ್ನಿಸಿರುವ ಪತ್ರಿಕೆಯ ನಿಲುವು ಶನಿವಾರ ದೇಶಾದ್ಯಂತ ಸಂಚಲನ ಮೂಡಿಸಿದೆ.

ಅಮೆರಿಕದ ನೀತಿಗೆ ಪೂರಕ ಎನ್ನುವಂತೆ ಆರ್ಥಿಕ ಸುಧಾರಣಾ ಪ್ರಕ್ರಿಯೆಗಳನ್ನು ತೀವ್ರಗತಿಯಲ್ಲಿ ಜಾರಿಗೆ ತರುವ ಸಂಕಲ್ಪ ತೊಟ್ಟಿದ್ದ ಡಾ. ಸಿಂಗ್ ಅವರ ಆಶಯ ನಿರೀಕ್ಷಿತ ಮಟ್ಟದಲ್ಲಿ ಈಡೇರದ ಪರಿಣಾಮ ಪತ್ರಿಕೆಯಿಂದ ಇಂತಹ ಟೀಕೆ ವ್ಯಕ್ತವಾಗಿದೆ ಎನ್ನಲಾಗಿದೆ.

ಭಾರತ ಮತ್ತೆ ಬೆಳಗುವಂತಾಗಲು ಪ್ರಧಾನಿ ರಾಜಕೀಯ ಕತ್ತಲೆಯಿಂದ ಹೊರಬರಬೇಕಾಗಿದೆ. ಪ್ರಣವ್ ಮುಖರ್ಜಿ ನಿರ್ಗಮನದ ನಂತರ ಹಣಕಾಸು ಖಾತೆಯನ್ನೂ ಹೊಂದಿರುವ ಡಾ. ಸಿಂಗ್ ಆರ್ಥಿಕ ಸುಧಾರಣಾ ಕ್ರಮಗಳನ್ನು ಬಿರುಸುಗೊಳಿಸಲು ಇದೀಗ ಸಕಾಲವಾಗಿದೆ ಎಂಬ ಸಲಹೆಯನ್ನೂ `ಟೈಮ್~ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.