ADVERTISEMENT

ನಿವೃತ್ತರೂ ನ್ಯಾಯಮೂರ್ತಿಗಳಾಗಬಹುದು: ‘ಸುಪ್ರೀಂ’

‘ಶಿಫಾರಸಿನ ದಿನ ಮುಖ್ಯವೇ ವಿನಾ ನೇಮಕದ ದಿನವಲ್ಲ’

ಸುಚೇತನಾ ನಾಯ್ಕ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸುಗೊಂಡ ಅಧೀನ ಕೋರ್ಟ್‌ ನ್ಯಾಯಾಧೀಶರು ಸೇವೆಯಿಂದ ನಿವೃತ್ತರಾದರೂ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಅರ್ಹತೆ ಹೊಂದಿರುತ್ತಾರೆ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್‌ ನೀಡಿದೆ.

‘ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಒಮ್ಮೆ ಹೆಸರು ಶಿಫಾರಸುಗೊಂಡರೆ, ರಾಷ್ಟ್ರಪತಿಗಳಿಂದ ಅಂತಿಮ ಆದೇಶ ಹೊರಡುವ ವೇಳೆ ಅವರು ನಿವೃತ್ತ
ರಾಗಿದ್ದರೂ ಅದು ಲೆಕ್ಕಕ್ಕೆ ಬರುವುದಿಲ್ಲ, ಅವರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡಬಹುದು’ ಎಂದು ಕೋರ್ಟ್‌ ಹೇಳಿದೆ. ಈ ಹುದ್ದೆಗೆ ಹೆಸರು ಶಿಫಾರಸು ಮಾಡಿದ ದಿನ ಮುಖ್ಯವೇ ವಿನಾ ನೇಮಕಾತಿಯ ಅಂತಿಮ ಆದೇಶದ ದಿನವಲ್ಲ ಎನ್ನುವುದು ಕೋರ್ಟ್‌ ಅಭಿಪ್ರಾಯ.

ಅಧೀನ ಕೋರ್ಟ್‌ಗಳ ನ್ಯಾಯಾಧೀಶರ ನಿವೃತ್ತಿ ವಯಸ್ಸು 60 ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳದ್ದು 62. ಆದ್ದರಿಂದ ಈ ಅವಧಿಯ ಒಳಗೆ ಯಾವಾಗ ಅಂತಿಮ ಆದೇಶ ಹೊರಬಿದ್ದರೂ ನೇಮಕಕ್ಕೆ ಅವರು ಅರ್ಹತೆ ಹೊಂದಿರುತ್ತಾರೆ. ನಿವೃತ್ತರು ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ
ನೇಮಕಗೊಳ್ಳಲು ಸಾಧ್ಯವಿಲ್ಲ ಎಂಬ ಬಹುವರ್ಷಗಳ ವಿವಾದಕ್ಕೆ ಈ ತೀರ್ಪಿನಿಂದ ಈಗ ತೆರೆ ಬಿದ್ದಿದೆ. ನೇಮಕಾತಿಗೆ ಸಂಬಂಧಿಸಿದಂತೆ ‘ಅರ್ಹತೆ’ಯ ವಿಷಯದಲ್ಲಿ ಕೆಲ ಕೋರ್ಟ್‌ಗಳು ನೀಡಿರುವ ತೀರ್ಪು ಹಾಗೂ ಸಂವಿಧಾನದಲ್ಲಿ ಉಲ್ಲೇಖಿತವಾಗಿರುವ ಕೆಲವೊಂದು ಅಂಶಗಳಿಂದ ಉಂಟಾಗಿರುವ ಗೊಂದಲವನ್ನು ಸುಪ್ರೀಂಕೋರ್ಟ್‌ ಹೋಗಲಾಡಿಸಿದೆ. ಈ ಸ್ಥಾನಕ್ಕೆ ಹೆಸರು ಶಿಫಾರಸು ಮಾಡುವ ಪ್ರಕ್ರಿಯೆಯಿಂದ ಹಿಡಿದು ಅದು ಅಂತಿಮ ಸ್ವರೂಪ ಪಡೆಯುವವರೆಗೆ ಆಗುತ್ತಿರುವ ವಿಳಂಬದಿಂದ ಅರ್ಹ ಅಭ್ಯರ್ಥಿಗಳ ಹಕ್ಕನ್ನು ಅನ್ಯಾಯವಾಗಿ ಕಸಿದುಕೊಳ್ಳುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿದೆ.

ADVERTISEMENT

ರಾಜಸ್ಥಾನ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ವೀರೇಂದ್ರ ಕುಮಾರ್‌ ಮಾಥೂರ್‌ ಮತ್ತು ರಾಮಚಂದ್ರ ಸಿಂಗ್‌ ಝಾಲಾ ಅವರ ನೇಮಕಾತಿಯನ್ನು ಪ್ರಶ್ನಿಸಿ ವಕೀಲ ಸುನಿಲ್‌ ಸಮ್ದಾರಿಯಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಹಾಗೂ ಅಶೋಕ್‌ ಭೂಷಣ್‌ ಅವರಿದ್ದ ವಿಭಾಗೀಯ ಪೀಠ ವಜಾ ಮಾಡಿ ಈ ತೀರ್ಪು ನೀಡಿದೆ.

ನಿವೃತ್ತಿ ವಯಸ್ಸಿನ ವಿವಾದ: ನಿವೃತ್ತಿಯ ವಯಸ್ಸಿನ ಕುರಿತಾಗಿ ಇರುವ ಗೊಂದಲದ ಬಗ್ಗೆಯೂ ಸುಪ್ರೀಂಕೋರ್ಟ್‌ ಇದೇ ತೀರ್ಪಿನಲ್ಲಿ ಸ್ಪಷ್ಟನೆ ನೀಡಿದೆ. ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳಾಗಿ ನೇಮಕಗೊಂಡರೆ ಅವರು ಅಲ್ಲಿ ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸುವಷ್ಟು ವಯೋಮಾನವನ್ನು ಹೊಂದಿರಬೇಕು ಎನ್ನುವುದು ಅರ್ಜಿದಾರರ ವಾದವಾಗಿತ್ತು. 60ವರ್ಷಕ್ಕಿಂತ ಕಡಿಮೆ ವಯೋಮಾನದವರು ಮಾತ್ರ ನ್ಯಾಯಮೂರ್ತಿಯಾಗಿ ನೇಮಕ
ಗೊಳ್ಳಲು ಅರ್ಹರು ಎಂಬ ಬಗ್ಗೆ ಹಲವಾರು ತೀರ್ಪುಗಳನ್ನು ಅರ್ಜಿದಾರರು ನೀಡಿದ್ದರು. ಇದೇ ವಾದವನ್ನು ಇಟ್ಟುಕೊಂಡು ಈ ಎರಡು ನ್ಯಾಯಮೂರ್ತಿಗಳ ನೇಮಕಾತಿಯನ್ನು ಅನೂರ್ಜಿತಗೊಳಿಸಬೇಕು ಎಂದೂ ಅವರು ಕೋರಿದ್ದರು.

ಆದರೆ ಈ ವಾದವನ್ನೂ ಕೋರ್ಟ್‌ ಮಾನ್ಯ ಮಾಡಲಿಲ್ಲ. ನೇಮಕಾತಿಗೆ ಶಿಫಾರಸು ಮಾಡುವ ದಿನದಿಂದ ಅನ್ವಯ ಆಗುವಂತೆ ವಯಸ್ಸನ್ನು ಪರಿಗಣಿಸಬೇಕು ಎಂದಿದೆ.

ಸಂವಿಧಾನದ ವಿಧಿಗಳ ಬಗ್ಗೆ ಸ್ಪಷ್ಟಪಡಿಸಿದ ನ್ಯಾಯಮೂರ್ತಿಗಳು, ‘ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಹೆಸರು ಸೂಚಿಸುವ ಸಮಯದಲ್ಲಿ ಅಭ್ಯರ್ಥಿಗಳು ಕನಿಷ್ಠ 10 ವರ್ಷಗಳ ಕಾಲ ನ್ಯಾಯಾಂಗ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕು ಎಂದು ಸಂವಿಧಾನದಲ್ಲಿ ಉಲ್ಲೇಖಗೊಂಡಿರುವುದು ನಿಜ. ಆದರೆ ನೇಮಕಾತಿಯ ವೇಳೆ ಅಭ್ಯರ್ಥಿಗಳು ಕರ್ತವ್ಯದಲ್ಲಿ ಇರಬೇಕು ಎಂದು ಸಂವಿಧಾನದಲ್ಲಿ ಹೇಳಲಿಲ್ಲ. ಇದೇ ಅಂಶ ನಿವೃತ್ತಿ ವಯಸ್ಸಿಗೂ ಅನ್ವಯ ಆಗುತ್ತದೆ. ಈ ಪ್ರಕರಣದಲ್ಲಿ, ಹೆಸರು ಶಿಫಾರಸುಗೊಂಡಾಗ ಇಬ್ಬರಿಗೂ 58 ವರ್ಷ6 ತಿಂಗಳಾಗಿತ್ತು. ಆದ್ದರಿಂದ ನ್ಯಾಯಮೂರ್ತಿಗಳಾಗಲು ಆ ವೇಳೆ ಅವರು ಅರ್ಹರಾಗಿದ್ದರು. ಆದ್ದರಿಂದ ಎಲ್ಲವೂ ಕಾನೂನಿನ ಅನ್ವಯವೇ ಆಗಿದೆ’ ಎಂದಿದ್ದಾರೆ.

ಏನಿದು ವಿವಾದ?
ರಾಜಸ್ಥಾನದ ಜಿಲ್ಲೆಯೊಂದರ ನ್ಯಾಯಾಧೀಶರಾಗಿದ್ದ ವೀರೇಂದ್ರ ಕುಮಾರ್‌ ಮಾಥೂರ್‌ ಹಾಗೂ ರಾಮಚಂದ್ರ ಸಿಂಗ್‌ ಝಾಲಾ ಕ್ರಮವಾಗಿ 2016ರ ಸೆ.30 ಹಾಗೂ ಜುಲೈ 31ರಂದು ಸೇವೆಯಿಂದ ನಿವೃತ್ತರಾಗಿದ್ದರು (ಅಧೀನ ಕೋರ್ಟ್‌ಗಳ ನ್ಯಾಯಾಧೀಶರ ನಿವೃತ್ತಿಯ ವಯಸ್ಸು 60). ನಿವೃತ್ತಿಗೂ ಮುನ್ನ ಅವರ ಹೆಸರುಗಳನ್ನು ಹೆಚ್ಚುವರಿ ನ್ಯಾಯಮೂರ್ತಿ ಸ್ಥಾನಕ್ಕೆ ರಾಜಸ್ಥಾನ ಹೈಕೋರ್ಟ್‌ ಶಿಫಾರಸು ಮಾಡಿ ಕಳುಹಿಸಿತ್ತು. ಮುಂದಿನ ಎಲ್ಲಾ ಪ್ರಕ್ರಿಯೆ ಮುಗಿದು ನೇಮಕಾತಿಯ ಅಂತಿಮ ಆದೇಶ ಹೊರಬಿದ್ದದ್ದು 2017ರ ಮೇ ತಿಂಗಳಿನಲ್ಲಿ.

ಅದಾಗಲೇ ಇಬ್ಬರೂ ನಿವೃತ್ತರಾಗಿದ್ದರಿಂದ ಸಂವಿಧಾನದ 217(2)(ಎ) ವಿಧಿಯ ಪ್ರಕಾರ ಇಬ್ಬರೂ ನ್ಯಾಯಮೂರ್ತಿಗಳಾಗಲು ಅನರ್ಹರು ಎನ್ನುವುದು ಅರ್ಜಿದಾರರ ವಾದವಾಗಿತ್ತು. ಅಷ್ಟೇ ಅಲ್ಲದೇ, ನೇಮಕಾತಿ ವೇಳೆ 60ವರ್ಷ ಮೀರುವಂತಿಲ್ಲ. ಆದರೆ ಇಬ್ಬರಿಗೂ 61 ವರ್ಷ ಮೀರಿದ್ದರಿಂದ ಅವರ ನೇಮಕಾತಿಯು ಸಂವಿಧಾನಬಾಹಿರ ಎಂದಿದ್ದರು. ಇದೇ ಕಾನೂನನ್ನು ಇಟ್ಟುಕೊಂಡು ಹಿಂದೆ ಹಲವಾರು ಕೋರ್ಟ್‌ಗಳು ನೀಡಿರುವ ತೀರ್ಪುಗಳನ್ನು ಅವರು ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.