ADVERTISEMENT

ನಿಶೆಯೇರಿದ ನಿಶಾಗೆ ಅಮಾನತು ಶಿಕ್ಷೆ

ಸಮವಸ್ತ್ರದಲ್ಲಿದ್ದಾಗಲೇ ಕುಡಿದ ಮಹಿಳಾ ಕಾನ್‌ಸ್ಟೆಬಲ್‌

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST

ಚೆನ್ನೈ: ಸಮವಸ್ತ್ರದಲ್ಲಿರುವಾಗಲೇ ‘ಗುಂಡು’ ಹಾಕಿದ್ದು ಮಹಿಳಾ ಕಾನ್‌ಸ್ಟೆಬಲ್‌ ಒಬ್ಬರ ಅಮಾನತಿಗೆ ಕಾರಣವಾಗಿದೆ.

ಸಮವಸ್ತ್ರದಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್‌ ಜೈನಾಬ್‌ ನಿಶಾ ವಾಹನವೊಂದರಲ್ಲಿ ಕುಳಿತು ಮದ್ಯ ಕುಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣ, ವಾಟ್ಸ್‌ಆ್ಯಪ್‌ನಲ್ಲಿ ವೈರಲ್‌ ಆಗಿದೆ. ವಿಡಿಯೊ ಅಸಲಿ ಎಂಬುದನ್ನು ದೃಢಪಡಿಸಿಕೊಂಡ ತಕ್ಷಣವೇ ಜೈನಾಬ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

‘ಮಹಿಳಾ ಕಾನ್‌ಸ್ಟೇಬಲ್ ಸಮವಸ್ತ್ರದಲ್ಲಿ ಇರುವಾಗಲೇ ಮದ್ಯ ಕುಡಿದ ಕಾರಣ ತಕ್ಷಣವೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ಅವರ ವಿರುದ್ಧ ವಿಚಾರಣೆ ಆರಂಭಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಜೈನಾಬ್ ಲೋಟ ಹಿಡಿದು ತಮ್ಮ ಸಹೋದ್ಯೋಗಿ ಜತೆ ‘ಕುಡಿತದ’ ಕುರಿತು ಮಾತನಾಡುತ್ತಾ ಇರುವುದರೊಂದಿಗೆ ಆರಂಭವಾಗುವ ವಿಡಿಯೊದ ಅವಧಿ ಒಂದು ನಿಮಿಷಕ್ಕೂ ಹೆಚ್ಚು. ಆದರೆ ಜತೆಗಿರುವ ಸಹೋದ್ಯೋಗಿ ಕಾಣಿಸುವುದಿಲ್ಲ. ವಿಡಿಯೊದ ಕೊನೆಯಲ್ಲಿ ಜೈನಾಬ್ ಮದ್ಯ ಹೀರುತ್ತಿದ್ದಾರೆ. ಕುಳಿತಲ್ಲೇ ತೂರಾಡುತ್ತಿರುವ ಇವರಿಗೆ ‘ಮದ್ಯದ ‍ಪ್ರಭಾವದಿಂದಾಗಿ’ ಕಣ್ಣು ತೆರೆಯಲು ಸಹ ಆಗದೆ ಇರುವುದು ವಿಡಿಯೊದಲ್ಲಿ ಕಾಣುತ್ತದೆ. ಬಹುಶಃ ಗಸ್ತು ವಾಹನದಲ್ಲಿ ಈ ವಿಡಿಯೊ ಸೆರೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ವಿಡಿಯೊ ಬಹಿರಂಗವಾದ ಕೆಲವೇ ನಿಮಿಷಗಳಲ್ಲಿ ವಾಟ್ಸ್‌ಆ್ಯಪ್ ಗ್ರೂಪ್‌ಗಳು, ಯೂಟ್ಯೂಬ್ ಹಾಗೂ ಫೇಸ್‌ಬುಕ್‌ಗಳಲ್ಲಿ ಸಾವಿರಾರು ಜನ ಇದನ್ನು ಶೇರ್ ಮಾಡಿದ್ದಾರೆ. ವಿಡಿಯೊ ಸೆರೆಹಿಡಿದಿರುವುದು ಯಾವಾಗ ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.