ADVERTISEMENT

ನಿಸರ್ಗದ ರೊಚ್ಚು, ಮಾನವನ ದುರಾಸೆ

ಸುದ್ದಿ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 19:59 IST
Last Updated 23 ಜೂನ್ 2013, 19:59 IST
ನಿಸರ್ಗದ ರೊಚ್ಚು, ಮಾನವನ ದುರಾಸೆ
ನಿಸರ್ಗದ ರೊಚ್ಚು, ಮಾನವನ ದುರಾಸೆ   

ಉತ್ತರಾಖಂಡದ ನಾಲ್ಕು ಪವಿತ್ರ ಯಾತ್ರಾ ಸ್ಥಳಗಳನ್ನೆಲ್ಲ ಸ್ಮಶಾನ ಸದೃಶವನ್ನಾಗಿ ಮಾಡಿರುವ ಪ್ರಕೃತಿಯ ಮುನಿಸು ಎಣಿಕೆಗೆ ನಿಲುಕದ ಹಾನಿ ಉಂಟು ಮಾಡಿದೆ.

ಈ ನೈಸರ್ಗಿಕ ಪ್ರಕೋಪಕ್ಕೆ  ಮಾನವನ ದುರಾಸೆಯೂ ಕೈಜೋಡಿಸಿರುವುದೇ ಅನಾಹುತದ ತೀವ್ರತೆ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಮೂಲ ಸೌಕರ್ಯಗಳ ಕೊರತೆ, ದುರ್ಬಲ ಕಟ್ಟಡ ನಿರ್ಮಾಣ ಕಾಮಗಾರಿ, ಆಡಳಿತ ಯಂತ್ರದ ನಿರಾಸಕ್ತಿ ಮುಂತಾದವೂ ಸಾಕಷ್ಟು ಕೊಡುಗೆ ನೀಡಿವೆ.

ಕುಂಭದ್ರೋಣ ಮಳೆ, ಪ್ರವಾಹ, ಬೆಟ್ಟ, ರಸ್ತೆ, ಸೇತುವೆ ಕುಸಿತ ಮತ್ತಿತರ ಕಾರಣಕ್ಕೆ ಯಾತ್ರಾರ್ಥಿಗಳೂ ಸೇರಿದಂತೆ ನೂರಾರು ಜನರ ಸಾವು - ನಾಪತ್ತೆ ಘಟನೆಗಳಂತಹ  ಪ್ರಕೃತಿಯ ಮುನಿಸನ್ನು ಮಾನವ  ಅಸಹಾಯಕತೆಯಿಂದ ನೋಡುವುದನ್ನು ಬಿಟ್ಟರೆ ಮತ್ತೇನೂ ಮಾಡಲು ಸಾಧ್ಯವಿರಲಿಲ್ಲ.

ಅಣೆಕಟ್ಟೆ, ವಿದ್ಯುತ್ ಉತ್ಪಾದನಾ ಸ್ಥಾವರಗಳಿಂದಾಗಿ ನದಿಗಳು ಭಾರಿ ಮಳೆಗೆ ತುಂಬಿ ಹರಿದು ಅಂದಾಜಿಗೆ ಸಿಗದ ಪ್ರಮಾಣದಲ್ಲಿ ನಷ್ಟಕ್ಕೆ ಕಾರಣವಾಗಿವೆ. ಅಭಿವೃದ್ಧಿ ಹೆಸರಿನಲ್ಲಿ ಆಸೆಬುರುಕ ನಾಗರಿಕ ಸಮಾಜ ನಿಸರ್ಗಕ್ಕೆ ಹಾನಿ ಉಂಟು ಮಾಡಿದ್ದಕ್ಕೆ ಈಗ ತಕ್ಕ ಶಾಸ್ತಿಗೆ ಒಳಗಾಗಿದೆ.

ಇಲ್ಲದ ಪರಿಸರ ಕಾಳಜಿ
ಪರಿಸರ ನಿಯಮಗಳನ್ನೆಲ್ಲ ಗಾಳಿಗೆ ತೂರಿ  ನದಿ ದಂಡೆಗುಂಟ ವಸತಿ ಸೌಲಭ್ಯಗಳನ್ನು ನಿರ್ಮಿಸಿದ್ದೇ ಪ್ರಕೃತಿ ಮುನಿಸಿಕೊಳ್ಳಲು ಮುಖ್ಯ ಕಾರಣ. ಎಂಟು ವರ್ಷಗಳಲ್ಲಿ ಉತ್ತರಾಖಂಡದಲ್ಲಿ ವಾಹನಗಳ ಸಂಚಾರ ಶೇ 1000ರಷ್ಟು ಹೆಚ್ಚಳಗೊಂಡಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿದಷ್ಟೂ ಭೂಕುಸಿತ ಪ್ರಮಾಣ ಹೆಚ್ಚಿದೆ. ಪರ್ವತ ಪ್ರದೇಶದ ಪರಿಸರ ಸಮತೋಲನವನ್ನು  ಸ್ಥಳೀಯ ಮಾಫಿಯಾ ಮತ್ತು ರಾಜಕಾರಣಿಗಳು ಹಾಳು ಮಾಡಿದ್ದಾರೆ.

500 ರಸ್ತೆಗಳು ಮತ್ತು 200 ಸೇತುವೆಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವುದರಿಂದ ಪರಿಹಾರ ಕಾರ್ಯಾಚರಣೆಗೆ ತೀರ ಧಕ್ಕೆ ಉಂಟಾಗಿದೆ.

ಪರ್ವತ ಪ್ರದೇಶದ ಸಣ್ಣ - ಪುಟ್ಟ ಊರುಗಳಲ್ಲಿ ಅತಿಥಿಗೃಹ, ಹೋಟೆಲ್ ನಿರ್ಮಾಣ, ನದಿ ದಂಡೆಗುಂಟ ಅತಿಕ್ರಮಣ  ಮತ್ತಿತರ ಚಟುವಟಿಕೆಗಳಿಂದ  ಯದ್ವಾತದ್ವಾ ಅಭಿವೃದ್ಧಿಯಾಗಿದ್ದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಇದ್ದೇ ಇತ್ತು. ಉತ್ತರಾಖಂಡ ಸರ್ಕಾರಕ್ಕೆ ವಾಣಿಜ್ಯ ಲಾಭದ ಮುಂದೆ `ಸೂಕ್ಷ್ಮ ಪರಿಸರ ಸಂರಕ್ಷಣೆ' ಗೌಣವಾಗಿತ್ತು ಎನ್ನುವುದು ಈಗ ಸಾಬೀತಾಗಿದೆ.

ಸೂಕ್ಷ್ಮ ಪರಿಸರ ವಲಯ
ಗಂಗೋತ್ರಿಯಿಂದ ಉತ್ತರಕಾಶಿವರೆಗಿನ ಭಾಗೀರಥಿ ನದಿಗುಂಟ 100 ಕಿ. ಮೀ ಉದ್ದದ ಪ್ರದೇಶವನ್ನು `ಸೂಕ್ಷ್ಮ ಪರಿಸರ ವಲಯ' ಎಂದು ಕೇಂದ್ರ ಸರ್ಕಾರ ಘೋಷಿಸಿ, ಅಭಿವೃದ್ಧಿ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿತ್ತು.

ಈ ಅಧಿಸೂಚನೆ ವಾಪಸ್ ಪಡೆಯಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಕೇಳಿಕೊಂಡಿತ್ತು. ಈ ನಿರ್ಬಂಧದ ಫಲವಾಗಿ, ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದೇ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿ ಪ್ರವಾಸೋದ್ಯಮಕ್ಕೆ ಹೊಡೆತ ನೀಡಲಿದೆ ಎಂದು ವಾದಿಸಲಾಗಿತ್ತು.

ಚೀನಾ ಗಡಿಗೆ ಹೊಂದಿಕೊಂಡಿರುವ ರಾಜ್ಯದಲ್ಲಿ ಮೂಲ ಸೌಕರ್ಯಗಳು ಸಮರ್ಪಕವಾಗಿ ಇರದಿದ್ದರೆ, ಸೇನೆಯ ಚಲನವಲನಕ್ಕೂ ಅಡಚಣೆ ಉಂಟಾಗಲಿದೆ ಎಂದೂ ರಾಜ್ಯ ಸರ್ಕಾರ ವಾದಿಸಿತ್ತು.

ಅನಾಹುತದ ನಂತರ...
ಉತ್ತರಾಖಂಡದ ಪ್ರಕೋಪದ ನಂತರ ಕೇಂದ್ರ ಸರ್ಕಾರ ಈಗ `ನೈಸರ್ಗಿಕ ವಿಪತ್ತು ನಿರ್ವಹಣಾ ಕಾಯ್ದೆ'ಯಲ್ಲಿ ಬದಲಾವಣೆ ತರಲು ಮುಂದಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (National Disaster Management Authority  - NDMA)  ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದ್ದರೂ ಅವುಗಳ ಜಾರಿ ಮೇಲೆ ನಿಗಾ ಇಡುವ ವ್ಯವಸ್ಥೆ ಇಲ್ಲ.

ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಕ್ಕೆ ಭೇಟಿ ನೀಡುವ ಅಸಂಖ್ಯ ಪ್ರವಾಸಿಗರ ಅನುಕೂಲಕ್ಕೆ ನಿರ್ಮಿಸಿದ ರಸ್ತೆಗಳು ಮತ್ತು ಜಲ ವಿದ್ಯುತ್ ಸ್ಥಾವರಗಳೇ ಯಾತ್ರಾರ್ಥಿಗಳ ಪಾಲಿಗೆ `ಸಾವಿನ ಹೆದ್ದಾರಿ'ಗಳಾಗಿ ಪರಿಣಮಿಸಿವೆ ಎಂದು ಪರಿಸರ ತಜ್ಞರು ದೂರಿದ್ದಾರೆ.

ಸಿಎಜಿ ಎಚ್ಚರಿಕೆ
ಸಂಭವನೀಯ ವಿಪತ್ತು ಪ್ರದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜಲ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವುದಕ್ಕೆ ಮಹಾಲೇಖಪಾಲರು (ಸಿಎಜಿ) ಮೂರು ವರ್ಷಗಳ ಹಿಂದೆಯೇ ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲ ವಿದ್ಯುತ್ ಸ್ಥಾವರಗಳು ರಾಜ್ಯದ ಪರಿಸರಕ್ಕೆ ಅಪಾಯ ತಂದೊಡ್ಡಲಿವೆ ಎಂದೂ ವರದಿಯಲ್ಲಿ ಎಚ್ಚರಿಸಲಾಗಿತ್ತು.

ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದ ನಂತರ ಇದುವರೆಗೆ ಒಂದು ಬಾರಿಯೂ ಸಭೆ ಸೇರಿಲ್ಲ ಎಂದೂ ಏಪ್ರಿಲ್ ತಿಂಗಳಿನಲ್ಲಷ್ಟೇ ಗಮನ ಸೆಳೆದಿತ್ತು.

ಚಾರ್‌ಧಾಮ್ ಯಾತ್ರೆ
ಇದೊಂದು  ಅತ್ಯಂತ ಪವಿತ್ರ ಧಾರ್ಮಿಕ ಯಾತ್ರೆಯಾಗಿದೆ. ಈ ನಾಲ್ಕು ಪವಿತ್ರ ಯಾತ್ರಾ ಸ್ಥಳಗಳಿಗೆ (ಚಾರ್‌ಧಾಮ್) ಜೀವನದಲ್ಲಿ ಒಮ್ಮೆಯಾದರೂ ಭೇಟಿಕೊಡಬೇಕೆಂಬ ನಂಬಿಕೆ ಹಿಂದೂಗಳಲ್ಲಿ ಬಲವಾಗಿ ಇದೆ. ಆದಿ ಶಂಕರಾಚಾರ್ಯರೇ ಈ ಯಾತ್ರೆಯ ಮೂಲ ಪುರುಷರು.

ಈ ಯಾತ್ರೆಯು ಹರಿದ್ವಾರದಿಂದ ಆರಂಭಗೊಂಡು ಉತ್ತರಕಾಶಿ, ಯಮುನೋತ್ರಿ ತಲುಪಿ ಚಮೋಲಿಯಲ್ಲಿನ ಬದರಿನಾಥ ಮಂದಿರದಲ್ಲಿ ಕೊನೆಗೊಳ್ಳುತ್ತದೆ. ಮೇ ತಿಂಗಳಿನಿಂದ ಜೂನ್ ಮತ್ತು ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರೆಗೆ ಯಾತ್ರೆ ನಡೆಯುತ್ತದೆ. ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳು ಹಿಮಾಲಯದ ತಪ್ಪಲಿನಲ್ಲಿ ಇವೆ.

ಮೇಘಸ್ಫೋಟ
ಸೀಮಿತ ಪ್ರದೇಶದಲ್ಲಿ ಅತ್ಯಲ್ಪ ಅವಧಿಯಲ್ಲಿ  ಹಠಾತ್ತಾಗಿ ಭಾರಿ ಪ್ರಮಾಣದಲ್ಲಿ ಮಳೆಯಾಗುವುದಕ್ಕೆ ಮೇಘಸ್ಫೋಟ ಎನ್ನುತ್ತಾರೆ. ಮೋಡ ಸ್ಫೋಟಗೊಂಡ ಸಂದರ್ಭದಲ್ಲಿ ಪ್ರತಿ ಗಂಟೆಗೆ 10 ಸೆಂಟಿಮೀಟರ್‌ಗಿಂತ ಹೆಚ್ಚಿನ ಪ್ರಮಾಣದ ಮಳೆಸುರಿಯುತ್ತದೆ.

ಆಕಾಶದಿಂದ ಬಕೆಟ್‌ನಿಂದ ನೀರು ಸುರಿದಂತೆ ಮಳೆಯಾಗುತ್ತದೆ. ಹೀಗಾಗಿ ದಿಢೀರನೆ ಪ್ರವಾಹ ಪರಿಸ್ಥಿತಿ ಉದ್ಭವಿಸುತ್ತದೆ. 2005 ಜುಲೈ 26ರಂದು ಮುಂಬೈನಲ್ಲಿ ಮತ್ತು 2010ರ ಆಗಸ್ಟ್ 6ರಂದು ಜಮ್ಮು - ಕಾಶ್ಮೀರದ ಲೇಹ್‌ನಲ್ಲಿ `ಮೋಡ ಸ್ಫೋಟ'ಗೊಂಡು ಭಾರಿ ಪ್ರಮಾಣದ ಹಾನಿಗೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.