ADVERTISEMENT

ನೀತಿಸಂಹಿತೆ ಉಲ್ಲಂಘನೆ: ಖುರ್ಷಿದ್ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST

ಲಖನೌ: ಚುನಾವಣಾ ಆಯೋಗ ತಮ್ಮನ್ನು ನೇಣಿಗೆ ಹಾಕಿದರೂ, ಪಸಮಂದ (ಹಿಂದುಳಿದ) ಮುಸ್ಲಿಂ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಶೇ 9ರಷ್ಟು ಒಳಮೀಸಲಾತಿ ಕಲ್ಪಿಸಲು ತಾವು ಬದ್ಧ ಎಂದು ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಹೇಳಿಕೆ ನೀಡಿದ ಬೆನ್ನ ಹಿಂದೆಯೇ ಆಯೋಗವು ಸಚಿವರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಿದೆ.

ಸಚಿವರು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ರಾಷ್ಟ್ರಪತಿಗಳಿಗೆ ಶನಿವಾರ ರಾತ್ರಿ ಪತ್ರ ಬರೆದಿರುವ ಆಯೋಗ `ತಕ್ಷಣ ಮಧ್ಯ ಪ್ರವೇಶಿಸಬೇಕು~ ಎಂದು ಆಗ್ರಹಿಸಿದೆ.

ಖುರ್ಷಿದ್ ಪತ್ನಿ ಲೂಯಿ ಖುರ್ಷಿದ್ ಸ್ಪರ್ಧಿಸಿರುವ ಫಾರೂಖಾಬಾದ್‌ನಲ್ಲಿ ಶುಕ್ರವಾರ ರಾತ್ರಿ ಚುನಾವಣಾ ರ‌್ಯಾಲಿಯಲ್ಲಿ ಮಾತನಾಡಿದ್ದ ಅವರು  ಮೀಸಲಾತಿ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದರು. ಚುನಾವಣಾ ಆಯೋಗ ಛೀಮಾರಿ ಹಾಕಿರುವ ಬಗ್ಗೆ ಹೇಳುತ್ತಾ ಪಸಮಂದ ಮುಸ್ಲಿಂ ಸಮುದಾಯದ ಬಗ್ಗೆ ತಾವು ಯಾವುದೇ ಹೇಳಿಕೆ ನೀಡಲು ಆಯೋಗ ಬಿಡುತ್ತಿಲ್ಲ. ನ್ಯಾಯಸಮ್ಮತವಾಗಿ ಅವರಿಗೆ (ಪಸಮಂದ) ಸಲ್ಲಬೇಕಾದ ಹಕ್ಕುಗಳ ಬಗ್ಗೆಯೂ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ನನ್ನ ಜೀವ ಇರುವವರೆಗೂ ಹಿಂದುಳಿದ ಮುಸ್ಲಿಂ ಸಮುದಾಯದ ಪರವಾಗಿ ಹೋರಾಟ ಮುಂದು ವರೆಸುತ್ತೇನೆ. ಚುನಾವಣಾ ಆಯೋಗ ಬೇಕಾದರೆ ನನ್ನನ್ನು ನೇಣಿಗೆ ಹಾಕಲಿ, ಬಡ ಸಮುದಾಯದ ಭವಿಷ್ಯ ರೂಪಿಸಲು ಬದ್ಧವಾಗಿದ್ದೇನೆ~ ಎಂದು ಆವೇಶಭರಿತರಾಗಿ ಭರವಸೆ ನೀಡಿದರು.

ಪಸಮಂದ ಮುಸ್ಲಿಂ ಸಮುದಾಯದ ಹಕ್ಕುಗಳ ಬಗ್ಗೆ ಮಾತನಾಡಿದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಅತ್ಯಂತ ಹಿಂದುಳಿದ ಪಸಮಂದ ಮುಸ್ಲಿಂ ಸಮುದಾಯದವರು ಇತರ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಶೇ 9ರಷ್ಟು ಒಳ ಮೀಸಲಾತಿ ಪಡೆಯಲು ಅರ್ಹರಾಗಿದ್ದಾರೆ. ಅವರ ಪರವಾಗಿ ಹೋರಾಟ ಮಾಡಲು ಬದ್ಧ ಹಾಗೂ ಇದಕ್ಕಾಗಿ ಯಾವುದೇ ಶಿಕ್ಷೆಗೆ ಒಳಗಾಗಲೂ ಸಿದ್ಧ ಎಂದರು.

ಯಾವುದೇ ಮೇಲ್ವರ್ಗದ ಅಥವಾ ಶ್ರೀಮಂತರ ಪರವಾಗಿ ತಾವು ಮೀಸಲಾತಿ ಭರವಸೆ ನೀಡುತ್ತಿಲ್ಲ. ಬದಲಾಗಿ ಮೀಸಲಾತಿ ಸೌಲಭ್ಯಕ್ಕೆ ಅರ್ಹವಾಗಿರುವ ಸಮುದಾಯದ ಪರವಾಗಿ ಧ್ವನಿ ಎತ್ತುತ್ತಿರುವುದಾಗಿ ಹೇಳಿದ ಅವರು, ಇದರಲ್ಲಿ ಯಾವುದೇ ತಪ್ಪಾಗಿದೆ ಎಂದು ಅನಿಸುತ್ತಿಲ್ಲ ಎಂದು ಖುರ್ಷಿದ್ ಸಮರ್ಥಿಸಿಕೊಂಡರು.

ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುವ ಮೂಲಕ ಸರ್ಕಾರ ರಚನೆ ಮಾಡಲಿದೆ ಎಂದು ಭವಿಷ್ಯ ನುಡಿದರು.

ಆದರೆ ಇಂತಹ ವಿವಾದಾತ್ಮಕ ಹೇಳಿಕೆಗಳಿಂದ ದೂರ ಇರುವಂತೆ ಖರ್ಷಿದ್‌ಗೆ ಸಲಹೆ ಮಾಡಿರುವುದಾಗಿ ಪಕ್ಷದ ವಕ್ತಾರ ರಶೀದ್ ಅಲ್ವಿ ವಾರಣಾಸಿಯಲ್ಲಿ ತಿಳಿಸಿದ್ದು, ಇದು ಖುರ್ಷಿದ್ ಅವರ ವೈಯಕ್ತಿಕ ಹೇಳಿಕೆಯಾಗಿದೆ ಎಂದೂ ಸ್ಪಷ್ಟಪಡಿಸಿದರು.

ಬಿಜೆಪಿ ಪ್ರತಿಕ್ರಿಯೆ: ಈ ಕುರಿತು  ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಬಿಜೆಪಿ ಘಟಕ, ಕೇಂದ್ರ ಸಚಿವರು `ಓಟ್ ಬ್ಯಾಂಕ್~ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ. ಸಚಿವ ಖುರ್ಷಿದ್ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ಚುನಾವಣಾ ಪ್ರಚಾರದಿಂದ ಅವರನ್ನು ನಿರ್ಬಂಧಿಸಬೇಕು ಎಂದು ಚುನಾವಣಾ ಆಯೋಗವನ್ನು ಒತ್ತಾಯ ಮಾಡಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT