ADVERTISEMENT

ನೀರು ಹಂಚಿಕೆ: ಬಾಂಗ್ಲಾಕ್ಕೆ ಭಾರತ ಭರವಸೆ:ತೀಸ್ತಾ: ಶೀಘ್ರ ರಾಜಕೀಯ ಸಹಮತ

​ಪ್ರಜಾವಾಣಿ ವಾರ್ತೆ
Published 7 ಮೇ 2012, 19:30 IST
Last Updated 7 ಮೇ 2012, 19:30 IST
ನೀರು ಹಂಚಿಕೆ: ಬಾಂಗ್ಲಾಕ್ಕೆ ಭಾರತ ಭರವಸೆ:ತೀಸ್ತಾ: ಶೀಘ್ರ ರಾಜಕೀಯ ಸಹಮತ
ನೀರು ಹಂಚಿಕೆ: ಬಾಂಗ್ಲಾಕ್ಕೆ ಭಾರತ ಭರವಸೆ:ತೀಸ್ತಾ: ಶೀಘ್ರ ರಾಜಕೀಯ ಸಹಮತ   

ನವದೆಹಲಿ (ಪಿಟಿಐ):  ತೀಸ್ತಾ ನದಿ ಒಪ್ಪಂದದ ಕುರಿತು ರಾಜಕೀಯ ಸಹಮತ ಮೂಡಿಸುವಲ್ಲಿ ಉಭಯ ಬಣಗಳೊಂದಿಗೆ ಸಮಾಲೋಚನೆ ಮುಂದುವರಿಯುತ್ತಿರುವುದಾಗಿ ಭಾರತ ಬಾಂಗ್ಲಾದೇಶಕ್ಕೆ ತಿಳಿಸಿದೆ.
ಪ್ರಥಮ ಜಂಟಿ ಸಮಾಲೋಚನಾ ಆಯೋಗದ (ಜೆಸಿಸಿ) ಸಭೆಯಲ್ಲಿಯೇ ಈ ಕುರಿತು ಇತ್ಯರ್ಥಕ್ಕೆ ಬರಬೇಕೆಂದು ಬಾಂಗ್ಲಾದೇಶ ಭಾರತವನ್ನು ಕೋರಿತ್ತು.

ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಮತ್ತು ಬಾಂಗ್ಲಾ ವಿದೇಶಾಂಗ ಸಚಿವರಾದ ದೀಪು ಮೋನಿ ಅವರ ನೇತೃತ್ವದಲ್ಲಿ  ನಡೆದ ಜೆಸಿಸಿ  ಸಭೆಯಲ್ಲಿ ನದಿ ನೀರು ಒಪ್ಪಂದವಲ್ಲದೆ ಗಡಿ ನಿರ್ವಹಣೆ ಹಾಗೂ  ವ್ಯಾಪಾರ ಕುರಿತೂ ಚರ್ಚಿಸಲಾಯಿತು.

`ತೀಸ್ತಾ ನೀರು ಹಂಚಿಕೆ ಕುರಿತು ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳ್ಳುವಲ್ಲಿ ಭಾರತದ ಬದ್ಧತೆಯನ್ನು ದೀಪು ಮೋನಿ ಅವರಿಗೆ ತಿಳಿಸಿದ್ದೇನೆ. ನೀರು ಹಂಚಿಕೆ ಎನ್ನುವುದು ಸೂಕ್ಷ್ಮವಾದ ವಿಚಾರವಾಗಿರುವುದರಿಂದ ಉಭಯ ಬಣಗಳೊಂದಿಗೆ ಸಮಾಲೋಚನೆ ಅಗತ್ಯ~ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೃಷ್ಣ ತಿಳಿಸಿದರು.

ಈ ಮಧ್ಯೆ ಇಬ್ಬರೂ ಸಚಿವರು ಹಸ್ತಾಂತರ ಒಪ್ಪಂದದ ಕುರಿತು ಮಾತುಕತೆ ನಡೆಸಿದರಲ್ಲದೆ ಈ ಕುರಿತು ಹೆಚ್ಚಿನ ಮಾತುಕತೆಗಾಗಿ  ಬಾಂಗ್ಲಾದಿಂದ ನಿಯೋಗವೊಂದು ಶೀಘ್ರದಲ್ಲಿಯೇ ಭಾರತಕ್ಕೆ ಆಗಮಿಸಲಿದೆ ಎಂದು ಮೋನಿ, ಕೃಷ್ಣ ಅವರಿಗೆ ತಿಳಿಸಿದರು.

ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ, ವಿದ್ಯುತ್, ಸಂಪರ್ಕ, ಗಡಿ ನಿರ್ವಹಣೆ, ನೀರಿನ ಸಂಪನ್ಮೂಲ, ಮೂಲ ಸೌಕರ್ಯ, ಸಂಸ್ಕೃತಿ, ಪರಿಸರ ಮತ್ತು ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಕುರಿತು ಪರಿಶೀಲನೆ ನಡೆಸಿರುವುದಾಗಿ ಕೃಷ್ಣ ಅವರು ಇದೇ ವೇಳೆ ಹೇಳಿದರು. 

ಪ್ರಧಾನಿ ಮನಮೋಹನ್ ಸಿಂಗ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ಢಾಕಾಗೆ ಭೇಟಿ ನೀಡಿದ್ದ ವೇಳೆ ಸಹಿ ಹಾಕಿದ್ದ ಒಪ್ಪಂದದ ಪ್ರಕಾರ ಜೆಸಿಸಿಯನ್ನು ರೂಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.