ADVERTISEMENT

ನೂಪುರ್‌ಗೆ ಜಾಮೀನು ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 2 ಮೇ 2012, 19:30 IST
Last Updated 2 ಮೇ 2012, 19:30 IST
ನೂಪುರ್‌ಗೆ ಜಾಮೀನು ನಿರಾಕರಣೆ
ನೂಪುರ್‌ಗೆ ಜಾಮೀನು ನಿರಾಕರಣೆ   

ಘಾಜಿಯಾಬಾದ್ (ಪಿಟಿಐ): ಪುತ್ರಿ ಆರುಷಿ ಹಾಗೂ ಮನೆಕೆಲಸದಾಳು ಹೇಮರಾಜ್ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದಂತವೈದ್ಯೆ ನೂಪುರ್ ತಲ್ವಾರ್‌ಗೆ ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ತಮ್ಮ ಮಗಳು ಹಾಗೂ ಮನೆಕೆಲಸದಾಳನ್ನು ಕೊಂದಿರುವ ಆರೋಪ ಅವರ ಮೇಲಿದೆ. ಜಾಮೀನು ನೀಡಿದಲ್ಲಿ ಅವರು ವಿಚಾರಣೆಗೆ ತಡೆ ಒಡ್ಡುವ ಸಾಧ್ಯತೆಯಿದೆ ಎಂದು ನೂಪುರ್  ಜಾಮೀನು ಅರ್ಜಿ ತಿರಸ್ಕರಿಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಸ್. ಲಾಲ್ ಹೇಳಿದರು.

ನೂಪುರ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನದ ಆದೇಶ ನೀಡಿದ ಕೋರ್ಟ್, ವಿಚಾರಣೆ ವಿಳಂಬಗೊಳಿಸುವ ಉದ್ದೇಶದಿಂದ ಅವರು ನಾಪತ್ತೆಯಾಗುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತಪಡಿಸಿತು. ಕೂಡಲೇ ನೂಪುರ್ ಅವರನ್ನು ದಸ್ನಾ ಜೈಲಿಗೆ ಕರೆದೊಯ್ಯಲಾಯಿತು.

ನೂಪುರ್ ಹಾಗೂ ಆಕೆಯ ರಾಜೇಶ್ ತಲ್ವಾರ್ ಮಿದುಳು ಹಾಗೂ ಮಂಪರು ಪರೀಕ್ಷೆ ಸೇರಿದಂತೆ ಎಲ್ಲ ಬಗೆಯ ವೈಜ್ಞಾನಿಕ ಪರೀಕ್ಷೆಗೂ ಒಳಗಾಗಿದ್ದಾರೆ. ಎಲ್ಲಿಯೂ ಈ ದಂಪತಿಯ ಮೇಲೆ ಆರೋಪ ಸಾಬೀತಾಗಿಲ್ಲ ಎಂದು ನೂಪುರ್ ಪರ ವಕೀಲ ಜಿ.ಪಿ. ಥರೇಜ ವಾದಿಸಿದ್ದರು.

  ಜಾಮೀನು ಅರ್ಜಿ ವಿರೋಧಿಸಿದ್ದ ಸಿಬಿಐ ಅಭಿಯೋಜಕ ಆರ್.ಕೆ. ಸೈನಿ, ನೂಪುರ್ ನ್ಯಾಯಾಲಯದ ಹಿಡಿತದಿಂದ ಪಾರಾಗಲು ಯತ್ನಿಸುತ್ತಿದ್ದರು. ಪದೇ ಪದೇ ವಾರೆಂಟ್ ಹೊರಡಿಸಿದರೂ ಕೋರ್ಟ್ ಮುಂದೆ ಹಾಜರಾಗದ ಅವರು ಸುಪ್ರೀಂಕೋರ್ಟ್ ನಿರ್ದೇಶನದ ಬಳಿಕವೇ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರಾದರು ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.