ನವದೆಹಲಿ (ಐಎಎನ್ಎಸ್): ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಸರ್ಕಾರ ಇಂದಿನಿಂದ (ಶನಿವಾರ) ಬಿಡುಗಡೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಸುಭಾಷ್‌ಚಂದ್ರ ಬೋಸ್ ಅವರ ಜನ್ಮದಿನದಂದೇ (ಜ.23) ಸರ್ಕಾರ ಈ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಇಂದು ಪ್ರತಿಯೊಬ್ಬ ಭಾರತೀಯರ ಪಾಲಿಗೆ ವಿಶೇಷ ದಿನ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ನೇತಾಜಿ ಅವರ ಕಣ್ಮರೆ ರಹಸ್ಯವನ್ನು ಒಳಗೊಂಡಿರುವ, ಡಿಜಿಟಲ್ ಸ್ವರೂಪದಲ್ಲಿರುವ 100 ಕಡತಗಳನ್ನು ಪ್ರಧಾನಿ ಇಂದು ಬಿಡುಗಡೆ ಮಾಡುವರು. ಸದ್ಯ ಈ ಕಡತಗಳು ರಾಷ್ಟ್ರೀಯ ಪತ್ರಾಗಾರದಲ್ಲಿವೆ. ಸಾರ್ವಜನಿಕರ ಬಹುಕಾಲದ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ನೇತಾಜಿ ಸಾವಿನ ಕುರಿತು ಹೆಚ್ಚಿನ ಸಂಶೋಧನೆಗೆ ಕೂಡ ಈ ಕಡತಗಳು ನೆರವಾಗಲಿದೆ ಎಂದು ಸಂಸ್ಕೃತಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಬೋಸ್ ಅವರ ಸೋದರ ಸಂಬಂಧಿಯ ಮೊಮ್ಮಗ ಸೂರ್ಯಕುಮಾರ್ ಬೋಸ್ ಅವರು ಬರ್ಲಿನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ 1945ರ ಆಗಸ್ಟ್ 18ರಂದು ತೈವಾನ್‌ನಿಂದ ಬೋಸ್ ಅವರು ಕಣ್ಮರೆಯಾಗಿರುವುದಕ್ಕೆ ಸಂಬಂಧಿಸಿದ ಮಾಹಿತಿ ಬಹಿರಂಗ ಮಾಡಬೇಕು ಎಂದು ಒತ್ತಾಯಿಸಿದ್ದರು.
ಆ ನಂತರ ಈ ರಹಸ್ಯ ಮಾಹಿತಿ ಬಹಿರಂಗದ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಅಂತರ್ ಸಚಿವಾಲಯ ಸಮಿತಿಯೊಂದನ್ನು ರಚಿಸಿಸಿತ್ತು. ಈ ಸಮಿತಿ ಕಡತಗಳನ್ನು ಬಹಿರಂಗಪಡಿಸುವುದರಿಂದ ಯಾವುದಾದರೂ ದೇಶದೊಂದಿಗೆ ಭಾರತದ ಸಂಬಂಧಕ್ಕೆ ಹಿನ್ನಡೆ ಆಗಲಿದೆಯೇ ಎನ್ನುವುದನ್ನು ಪರಿಶೀಲಿಸಿ ವರದಿ ನೀಡಿತ್ತು.
ಇಂಡಿಯನ್ ನ್ಯಾಷನಲ್ ಆರ್ಮಿಗೆ (ಐಎನ್‌ಎ) ಸಂಬಂಧಿಸಿದ 990 ಕಡತಗಳನ್ನು ರಕ್ಷಣಾ ಇಲಾಖೆ 1997ರಲ್ಲಿ ರಾಷ್ಟ್ರೀಯ ಪತ್ರಾಗಾರಕ್ಕೆ ಹಸ್ತಾಂತರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.