ADVERTISEMENT

ನೇಮಕ: ಸರ್ಕಾರ–‘ಸುಪ್ರೀಂ’ ಜಟಾಪಟಿ

ಪಿಟಿಐ
Published 4 ಮೇ 2018, 19:39 IST
Last Updated 4 ಮೇ 2018, 19:39 IST
ನೇಮಕ: ಸರ್ಕಾರ–‘ಸುಪ್ರೀಂ’ ಜಟಾಪಟಿ
ನೇಮಕ: ಸರ್ಕಾರ–‘ಸುಪ್ರೀಂ’ ಜಟಾಪಟಿ   

ನವದೆಹಲಿ: ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕದ ವಿಚಾರದಲ್ಲಿ ನ್ಯಾಯಾಂಗ ಮತ್ತು ಸರ್ಕಾರದ ನಡುವಣ ಜಟಾಪಟಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸಾಕ್ಷಿಯಾಯಿತು.

ಹೈಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆಗಳು ಭಾರಿ ಸಂಖ್ಯೆಯಲ್ಲಿ ಖಾಲಿ ಇದ್ದರೂ ಕೆಲವೇ ಹೆಸರುಗಳನ್ನು ಶಿಫಾರಸು ಮಾಡುತ್ತಿರುವ ಕೊಲಿಜಿಯಂ ಕ್ರಮದ ವಿರುದ್ಧ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿತು. ಇದಕ್ಕೆ ತಿರುಗೇಟು ನೀಡಿದ ಸುಪ್ರೀಂ ಕೋರ್ಟ್‌, ಕೊಲಿಜಿಯಂ ಶಿಫಾರಸು ಮಾಡಿದರೂ ನೇಮಕಕ್ಕೆ ಅನುಮತಿ ಕೊಡದ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿತು.

‘ಕೊಲಿಜಿಯಂ ಶಿಫಾರಸು ಮಾಡಿದ ಎಷ್ಟು ಹೆಸರುಗಳು ನಿಮ್ಮಲ್ಲಿ ಬಾಕಿ ಇವೆ ತಿಳಿಸಿ’ ಎಂದು ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್‌ ಮತ್ತು ದೀಪಕ್‌ ಗುಪ್ತಾ ಅವರ ಪೀಠ ಪ್ರಶ್ನಿಸಿತು. ‘ಅದನ್ನು ಪರಿಶೀಲಿಸಿ ನೋಡಬೇಕಿದೆ’ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ನೀಡಿದ ಉತ್ತರ ಪೀಠವನ್ನು ಕೆರಳಿಸಿತು.

ADVERTISEMENT

‘ಸರ್ಕಾರದ ವಿಷಯಕ್ಕೆ ಬಂದರೆ ಅದನ್ನು ಪರಿಶೀಲಿಸಿ ನೋಡಬೇಕಿದೆ ಎಂದೇ ನೀವು ಯಾವತ್ತೂ ಹೇಳುತ್ತೀರಿ’ ಎಂದು ಪೀಠ ಹೇಳಿತು. ಮಣಿಪುರ, ಮೇಘಾಲಯ ಮತ್ತು ತ್ರಿಪುರಾ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ಕೊರತೆಗೆ ಸಂಬಂಧಿಸಿದ ವಿಚಾರಣೆ ವೇಳೆ ಈ ಚರ್ಚೆ ನಡೆಯಿತು.

‘ಕೆಲವು ಹೈಕೋರ್ಟ್‌ಗಳಲ್ಲಿ 40ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಮೂರು ಹೆಸರುಗಳು ಮಾತ್ರ ಶಿಫಾರಸಾಗುತ್ತವೆ. ಖಾಲಿ ಹುದ್ದೆ ಭರ್ತಿ ಮಾಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ’ ಎಂದು ವೇಣುಗೋಪಾಲ್‌ ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಮೂರ್ತಿಗಳಾದ ಯಾಕೂಬ್‌ ಮೀರ್‌ ಮತ್ತು ರಾಮಲಿಂಗಂ ಸುಧಾಕರ್‌ ಅವರ ಹೆಸರನ್ನು ಮೇಘಾಲಯ ಮತ್ತು ಮಣಿಪುರ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿ ಹುದ್ದೆಗಳಿಗೆ ಕೊಲಿಜಿಯಂ ಏಪ್ರಿಲ್‌ 19ರಂದು ಶಿಫಾರಸು ಮಾಡಿತ್ತು. ಈ ನೇಮಕ ಇನ್ನೂ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.