ADVERTISEMENT

`ನ್ಯಾಯಮಂಡಳಿಗೆ ನ್ಯಾಯಾಂಗದ ಹಿನ್ನೆಲೆ ಉಳ್ಳವರು ಅಗತ್ಯ'

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ನವದೆಹಲಿ (ಪಿಟಿಐ): ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ನ್ಯಾಯಾಂಗದ ಹಿನ್ನೆಲೆಯುಳ್ಳವರನ್ನೇ ನ್ಯಾಯಮಂಡಳಿಗಳಿಗೆ ನೇಮಿಸಲು ನಿರ್ದೇಶನ ನೀಡಲಾಗಿತ್ತು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ದೇಶದ ಪ್ರಜೆಗಳ ಮೂಲಭೂತ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ವಿಷಯದಲ್ಲಿ ಸಲಹೆ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ನ್ಯಾಯಾಂಗದ ಹಿನ್ನೆಲೆಯುಳ್ಳ ವ್ಯಕ್ತಿಯ ನೇಮಕಾತಿಯು ನ್ಯಾಯಮಂಡಳಿಗಳ ಹೆಚ್ಚುವರಿ ಅಗತ್ಯವಾಗಿದೆ ಎಂದೂ ಸುಪ್ರೀಂಕೋರ್ಟ್ ತಿಳಿಸಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕವಷ್ಟೆ ನ್ಯಾಯಮಂಡಳಿಗಳು ಮತ್ತು ಅರೆ ನ್ಯಾಯಾಂಗ ಸಂಸ್ಥೆಗಳಿಗೆ ನೇಮಕಾತಿ ನಡೆಸಲಾಗುತ್ತದೆ.

ನ್ಯಾಯಮಂಡಳಿಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಮೂಲಕ ಅದರ ಸಮಗ್ರತೆಯನ್ನು ಕಾಪಾಡುವುದೇ ಇದರ ಉದ್ದೇಶ ಎಂದು ನ್ಯಾಯಮೂರ್ತಿಗಳಾದ ಎ. ಕೆ. ಪಟ್ನಾಯಕ್ ಮತ್ತು ಸ್ವತಂತ್ರ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.

ಏಕರೂಪತೆಗೆ  ಆದೇಶ
  ನ್ಯಾಯಮಂಡಳಿಗಳು ಮತ್ತು ಅರೆ -ನ್ಯಾಯಮಂಡಳಿಗಳ ಮುಖ್ಯಸ್ಥರಾಗಿ ನ್ಯಾಯಾಧೀಶರನ್ನು ನೇಮಿಸುವ ಸಂದರ್ಭದಲ್ಲಿ ನೇಮಕಾತಿಯಿಂದ ಹಿಡಿದು ಸೇವಾವಧಿ ಮತ್ತು ಸೌಲಭ್ಯಗಳ ವಿಷಯದಲ್ಲಿ ಏಕರೂಪತೆಯನ್ನು ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಆದೇಶಿಸಿದೆ.

ಒಂದೊಮ್ಮೆ ಇದಕ್ಕೆ ತಪ್ಪಿದಲ್ಲಿ ಅಂಥ ನೇಮಕಾತಿಯನ್ನು ತಡೆಹಿಡಿಯಲಾಗುವುದು ಎಂದೂ ಸುಪ್ರೀಂಕೋರ್ಟ್ ತಿಳಿಸಿದೆ.

ಪ್ರಸ್ತುತ ನ್ಯಾಯಮಂಡಳಿಗಳ ಕಾರ್ಯ ನಿರ್ವಹಣೆಯಲ್ಲಿ ಏಕರೂಪತೆಯ ಕೊರತೆ ಇದೆ ಎಂದು  ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಜಿ. ಎಸ್. ಸಿಂಘ್ವಿ ಮತ್ತು ಎಸ್. ಜೆ. ಮುಖ್ಯೋಪಾಧ್ಯಾಯ ಅವರನ್ನೊಳಗೊಂಡ ವಿಭಾಗೀಯ ಪೀಠ, ಎಂಟು ವಾರಗಳೊಳಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರಕ್ಕೆ ಆದೇಶಿಸಿದೆ.

`ಏಕರೂಪತೆ ಜಾರಿಗೆ ಬರುವವರೆಗೆ ಎಲ್ಲಾ ನೇಮಕಾತಿಯನ್ನ ತಡೆಹಿಡಿಯಲಾಗುವುದು' ಎಂದು ಪೀಠ ಸ್ಪಷ್ಟಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.