ADVERTISEMENT

ಪಕ್ಷ ನಿರ್ಧರಿಸಿದರೆ ಸ್ಪರ್ಧೆಗೆ ಸಿದ್ಧ-ಅಚ್ಯುತಾನಂದನ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST


ತಿರುವನಂತಪುರಂ (ಪಿಟಿಐ): ಇನ್ನೊಂದು ಚುನಾವಣಾ ಯುದ್ಧವನ್ನು ಎದುರಿಸಲು ಪಕ್ಷ ಸೂಚಿಸಿದರೆ, ಕಣಕ್ಕಿಳಿಯಲು ತಾವು ಸಿದ್ಧ ಎಂದು ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಗುರುವಾರ ತಿಳಿಸಿದರು.

ಈ ಸಲದ ಚುನಾವಣೆಯಲ್ಲಿ ಪ್ರಚಾರದ ನೇತೃತ್ವವನ್ನು ಯಾರು ವಹಿಸಿಕೊಳ್ಳಬೇಕು ಎಂದು ಪಕ್ಷ ನಿರ್ಧರಿಸಲಿದೆ. ಒಂದು ವೇಳೆ ಪಕ್ಷ ಪುನಃ ನಾಯಕತ್ವ ವಹಿಸಿಕೊಳ್ಳುವಂತೆ ಆಹ್ವಾನಿಸಿದರೆ ಅದಕ್ಕೆ ಸಿದ್ಧನಿದ್ದೇನೆ ಎಂದರು.

ಪಕ್ಷದಿಂದ ಮತ್ತೊಂದು ಕರೆಯನ್ನು ನಿರೀಕ್ಷಿಸುತ್ತಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ, ‘ಪಕ್ಷ ತನ್ನ ನಿರ್ಧಾರ ಪ್ರಕಟಿಸಿದ ಬಳಿಕ ನಿಮಗೇ ತಿಳಿಯಲಿದೆ’ ಎಂದು ಪ್ರತಿಕ್ರಿಯಿಸಿದರು.

1977ರಿಂದ ಪ್ರತಿ ಚುನಾವಣೆಯಲ್ಲಿಯೂ ಎಲ್‌ಡಿಎಫ್ ಮತ್ತು ಯುಡಿಎಫ್ ಪಕ್ಷಗಳ ಒಂದರ ನಂತರ ಮತ್ತೊಂದು ಅಧಿಕಾರಕ್ಕೆ ಬರುತ್ತಿದ್ದು, ಇದುವರೆಗೂ ಯಾವ ಪಕ್ಷವೂ ಸತತ ಅವಧಿಗಳಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಎಲ್‌ಡಿಎಫ್ ಪುನಃ ಅಧಿಕಾರಕ್ಕೆ ಬರುವ ಮೂಲಕ ಇತಿಹಾಸ ನಿರ್ಮಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿರೋಧಪಕ್ಷದ ನಾಯಕ ಉಮ್ಮನ್ ಚಾಂಡಿ  ತಮ್ಮ ಮತ್ತು ಪುತ್ರ ವಿ.ಎ.ಅರುಣ್ ಕುಮಾರ್ ವಿರುದ್ಧ ಮಾಡಲಾದ ಆರೋಪಗಳ ಪಟ್ಟಿಯನ್ನು ಬುಧವಾರ ತಮಗೆ ಸಲ್ಲಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇದಕ್ಕೆ ಪ್ರತಿಯಾಗಿ ಶೀಘ್ರವೇ ಪತ್ರ ಬರೆಯುತ್ತೇನೆ. ವಿರೋಧಪಕ್ಷಗಳ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅಲ್ಲದೆ ಇದಕ್ಕೆ ಅವರು ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂದರು.

‘ಅರುಣ್ ಕುಮಾರ್ ಭಾರತೀಯ ಪ್ರಜೆಯಾಗಿದ್ದು, ತಮ್ಮ ಮೇಲೆ ಮಾಡಲಾಗಿರುವ ಆರೋಪಗಳ ವಿರುದ್ಧ ಕೋರ್ಟ್‌ಗೆ ಹೋಗಲಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.