
ನವದೆಹಲಿ (ಪಿಟಿಐ): ತಮ್ಮ ಪಟ್ಟು ಸಡಿಲಿಸುವ ಯಾವುದೇ ಲಕ್ಷಣಗಳನ್ನೂ ತೋರಿಸದೇ ರೈಲ್ವೇ ಭವನದ ಬಳಿ ಎರಡನೇ ದಿನ ಧರಣಿ ಮುಂದುವರೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಿಕ್ಕಟ್ಟು ಪರಿಹಾರಕ್ಕಾಗಿ ಕೇಂದ್ರದ ಜೊತೆಗೆ ಸಂಧಾನ ಸಾಧ್ಯತೆಗಳನ್ನು ಮಂಗಳವಾರ ತಳ್ಳಿಹಾಕಿ ಗಣರಾಜ್ಯದಿನ ರಾಜಪಥದಲ್ಲಿ ಲಕ್ಷಾಂತರ ಮಂದಿ ಬೆಂಬಲಿಗರನ್ನು ಜಮಾಯಿಸುವ ಎಚ್ಚರಿಕೆ ನೀಡಿದರು.
ಮಾದಕ ದ್ರವ್ಯ ಮತ್ತು ವೇಶ್ವಾವಾಟಿಕೆ ಜಾಲದ ವಿರುದ್ಧ ದೆಹಲಿ ಸಚಿವರ ನಿರ್ದೇಶನದಂತೆ ದಾಳಿ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೀದಿಗಿಳಿದಿರುವ ದೆಹಲಿ ಮುಖ್ಯಮಂತ್ರಿ ಗಣರಾಜ್ಯ ದಿನದ ಪೆರೇಡ್ ಆರಂಭವಾಗುವ ರೈಸೀನಾ ಹಿಲ್ಸ್ ಸಮೀಪವಿರುವ ರೈಲ್ವೇ ಭವನದ ಬಳಿ ಧರಣಿ ಸ್ಥಳದಲ್ಲೇ ಸೋಮವಾರ ರಾತ್ರಿ ಕಳೆದಿದ್ದಾರೆ.
ಪ್ರತಿಭಟನೆ ಕೊನೆಗೊಳಿಸುವ ನಿಟ್ಟಿನಲ್ಲಿ ಯಾವುದೇ ಸಂಧಾನ ಸಾಧ್ಯತೆಗಳನ್ನು ತಳ್ಳಿ ಹಾಕಿದ ಅವರು ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ಪ್ರಶ್ನೆ ಸಂಧಾನದ ವಿಚಾರವಲ್ಲ ಎಂದು ಹೇಳಿದರು.
'ಇಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರು ಪಾಕಿಸ್ತಾನೀಯರಲ್ಲ ಅಥವಾ ಅಮೆರಿನ್ನರಲ್ಲ. ಅವರು ನಮ್ಮವರೇ. ಶಿಂಧೆಯವರು ನಾವು ಗಣರಾಜ್ಯ ದಿನ ಆಚರಿಸುತ್ತೇವೆ ಎಂದು ಹೇಳುತ್ತಿದ್ದಾರೆ, ಆದರೆ ಯಾರಿಗಾಗಿ? ಅತಿಗಣ್ಯ ವ್ಯಕ್ತಿಗಳು ಪೆರೇಡ್ ಮತ್ತು ಪ್ರದರ್ಶನಗಳನ್ನು ವೀಕ್ಷಿಸುತ್ತಾರೆ. ಅದು ಗಣರಾಜ್ಯ ದಿನವಲ್ಲ' ಎಂದು ಕೇಜ್ರಿವಾಲ್ ನುಡಿದರು.
'ನಾವು ನಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ. ದೆಹಲಿಯಲ್ಲಿ ಹಲವಾರು ಅಪರಾಧಗಳು ಸಂಭವಿಸುತ್ತಿರುವಾಗ ಗೃಹ ಸಚಿವರು (ಸುಶೀಲ್ ಕುಮಾರ್) ಶಿಂಧೆ ಹೇಗೆ ನಿದ್ರಿಸುತ್ತಾರೆ. ನಗರದಲ್ಲಿ ಮಹಿಳೆಯರು ಅಸುರಕ್ಷಿತರಾಗಿದ್ದಾಗ ನಾವು ಸಂಧಾನ ನಡೆಸುವುದಿಲ್ಲ' ಎಂದು ದೆಹಲಿ ಮುಖ್ಯಮಂತ್ರಿ ವರದಿಗಾರರಿಗೆ ತಿಳಿಸಿದರು.
ಮಾದಕ ದ್ರವ್ಯ ಮತ್ತು ವೇಶ್ವಾವಾಟಿಕೆ ಜಾಲದ ವಿರುದ್ಧ ದಾಳಿ ನಡೆಸಲು ನಿರಾಕರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿದ್ದಕ್ಕಾಗಿ ಶಿಂಧೆ ಅವರನ್ನು ತರಾಟೆಗೆ ತೆಗೆದುಕೊಂಡ ಕೇಜ್ರಿವಾಲ್, ತಮ್ಮ ಜನರನ್ನು ಬೆಂಬಲಿಸುವುದು ಬೇಡ, ಭಾರತದ ಜನತೆಯನ್ನು ಬೆಂಬಲಿಸಿ ಎಂದು ಅವರನ್ನು ಒತ್ತಾಯಿಸುವುದಾಗಿ ನುಡಿದರು.
'ಕೆಳಹಂತದ ಪೊಲೀಸರು ನಮ್ಮೊಂದಿಗಿದ್ದಾರೆ. ಒಬ್ಬರು ರಾಜೀನಾಮೆ ನೀಡಿ ನಮ್ಮ ಜೊತೆ ಸೇರಲು ಬಂದಿದ್ದಾರೆ. ಅವರ ಕಣ್ಣಾಲಿಗಳು ತುಂಬಿದ್ದವು. ನಮ್ಮ ಪರ ಘೋಷಣೆ ಕೂಗಿದ್ದಕ್ಕಾಗಿ ಇನ್ನೊಬ್ಬರನ್ನು ಅಮಾನತುಗೊಳಿಸಲಾಗಿದೆ. ದೆಹಲಿ ಪೊಲೀಸ್ ಇಲಾಖೆಯಲ್ಲೂ ದಂಗೆ ನಡೆಯಬಹುದು' ಎಂದು ಕೇಜ್ರಿವಾಲ್ ಪ್ರತಿಪಾದಿಸಿದರು.
ತಮ್ಮ ಪ್ರತಿಭಟನೆಯನ್ನು ಜಂತರ್ ಮಂತರ್ ಗೆ ಸ್ಥಳಾಂತರಿಸುವಂತೆ ದೆಹಲಿ ಪೊಲೀಸರು ಮಾಡಿದ ಸಲಹೆಯನ್ನು ಅವರು ಪ್ರಶ್ನಿಸಿದರು.
'ನನಗೆ ಜಂತರ್ ಮಂತರ್ ನಲ್ಲಿ ಕುಳಿತುಕೊಳ್ಳಿ ಎಂದು ಹೇಳಲಾಗುತ್ತಿದೆ. ನಾನು ಮುಖ್ಯಮಂತ್ರಿ. ನಾನು ಬಯಸುವಲ್ಲಿ ಕುಳಿತುಕೊಳ್ಳಬಹುದು. ಏನು ಮಾಡಬೇಕು ಎಂದು ನಮಗೆ ಹೇಳಲು ಅವರು ಯಾರು? ಅವರು ದೆಹಲಿಯ ಮುಖ್ಯಮಂತ್ರಿಯಲ್ಲ. ದೆಹಲಿಯ ಮುಖ್ಯಮಂತ್ರಿ ಎಲ್ಲಿ ಕುಳಿತುಕೊಳ್ಳಬೇಕು ಎಂದು ಹೇಳಲು ಶಿಂಧೆ ಯಾರು?' ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಆರು ಮಂದಿ ಸಚಿವ ಸಹೋದ್ಯೋಗಿಗಳಲ್ಲದೆ ಮುಖ್ಯಮಂತ್ರಿಯ ಪತ್ನಿ ಕೂಡಾ ಈದಿನ ಧರಣಿ ಸ್ಥಳದಲ್ಲಿ ಕುಳಿತಿದ್ದರು. ಭಾರಿ ಸಂಖ್ಯೆಯಲ್ಲಿ ಆಪ್ ಬೆಂಬಲಿಗರೂ ಜಮಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.