ADVERTISEMENT

ಪತ್ರಕರ್ತರಿಗೆ ವಾರೆಂಟ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:39 IST
Last Updated 5 ಡಿಸೆಂಬರ್ 2012, 19:39 IST

ನವದೆಹಲಿ (ಪಿಟಿಐ): ಜಿಂದಾಲ್ ಸಮೂಹದ ಸುದ್ದಿಯೊಂದರ ಪ್ರಸಾರಕ್ಕೆ ಸಂಬಂಧಿಸಿದಂತೆ ಸಮೂಹದ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ ಅವರಿಗೆ ನೂರು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ತಿಹಾರ್ ಜೈಲಿನಲ್ಲಿರುವ ಝೀ ಸುದ್ದಿವಾಹಿನಿಯ ಇಬ್ಬರು ಸುದ್ದಿ ಸಂಪಾದಕರನ್ನು ಡಿ. 8ರಂದು ತನ್ನ ಎದುರು ಹಾಜರುಪಡಿಸುವಂತೆ ದೆಹಲಿ ಹೈಕೋರ್ಟ್ ಬುಧವಾರ ವಾರೆಂಟ್ ಹೊರಡಿಸಿದೆ.

ಝೀ ಸಮೂಹ ಮತ್ತು ಎಸ್ಸೆಲ್ ಗುಂಪಿನ ಮುಖ್ಯಸ್ಥ ಸುಭಾಶ್ಚಂದ್ರ, ಅವರ ಪುತ್ರ ಹಾಗೂ ಸಮೂಹದ ನಿರ್ದೇಶಕ ಪುನಿತ್ ಗೋಯಂಕಾ ಎದುರು ಹಾಜರುಪಡಿಸಲು ಇಬ್ಬರೂ ಪತ್ರಕರ್ತರನ್ನು ಒಂದು ದಿನದ ಮಟ್ಟಿಗೆ ತಮ್ಮ ವಶಕ್ಕೆ ಒಪ್ಪಿಸುವಂತೆ ದೆಹಲಿ ಅಪರಾಧ ವಿಭಾಗದ ಪೊಲೀಸರು ಮಂಗಳವಾರ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಜೀ ಸುದ್ದಿವಾಹಿನಿ ಮುಖ್ಯಸ್ಥ ಸುಧೀರ್ ಚೌಧರಿ ಮತ್ತು ವಾಣಿಜ್ಯ ಸುದ್ದಿ ವಿಭಾಗದ ಸಂಪಾದಕ ಸಮೀರ್ ಅಹ್ಲುವಾಲಿಯಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ವಾರೆಂಟ್ ಹೊರಡಿಸಿದರು.

ನವೆಂಬರ್ 28 ರಂದು ಇಬ್ಬರೂ ಪತ್ರಕರ್ತರ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಮತ್ತೆ ಜಾಮೀನು ಕೋರಿ ಎರಡನೇ ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿಯೂ ಸೋಮವಾರ ತಿರಸ್ಕೃತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.