ADVERTISEMENT

ಪದಚ್ಯುತಿ ನಿರೀಕ್ಷಿಸಿದ್ದ ಸೈರಸ್‌ ಮಿಸ್ತ್ರಿ

ಪಿಟಿಐ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST
ಪದಚ್ಯುತಿ ನಿರೀಕ್ಷಿಸಿದ್ದ ಸೈರಸ್‌ ಮಿಸ್ತ್ರಿ
ಪದಚ್ಯುತಿ ನಿರೀಕ್ಷಿಸಿದ್ದ ಸೈರಸ್‌ ಮಿಸ್ತ್ರಿ   

ನವದೆಹಲಿ: ‘ನನ್ನನ್ನು ಪದಚ್ಯುತಗೊಳಿಸಲಾಗುತ್ತಿದೆ’ ಎಂದು ಟಾಟಾ ಸನ್ಸ್‌ನ ಅಧ್ಯಕ್ಷರಾಗಿದ್ದ ಸೈರಸ್‌ ಮಿಸ್ತ್ರಿ ಅವರು ನಿರ್ದೇಶಕ ಮಂಡಳಿಯ ಸಭೆಗೆ ತೆರಳುವ ಕೆಲವೇ ಕ್ಷಣಗಳ ಮುಂಚೆ ತಮ್ಮ ಪತ್ನಿ ರೋಹಿಕಾ ಅವರಿಗೆ ಎಸ್‌ಎಂಎಸ್‌ ಸಂದೇಶ ಕಳಿಸಿದ್ದರು.

ಈ ಸಂಗತಿಯನ್ನು ಟಾಟಾ ಸನ್ಸ್‌ನ ಮಾಜಿ ಉನ್ನತ ಅಧಿಕಾರಿಯೊಬ್ಬರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಕಳೆದ ವರ್ಷದ ಅಕ್ಟೋಬರ್‌ 24ರಂದು ಟಾಟಾ ಸನ್ಸ್‌ ನಿರ್ದೇಶಕ ಮಂಡಳಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಮುಂಚೆಯೇ ತಮ್ಮನ್ನು ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿಗೊಳಿಸುವುದು ಸೈರಸ್‌ ಮಿಸ್ತ್ರಿ ಅವರಿಗೆ ಸ್ಪಷ್ಟವಾಗಿತ್ತು.

ADVERTISEMENT

‘ಟಾಟಾ ಟ್ರಸ್ಟ್‌ ನಿಮ್ಮಲ್ಲಿ ವಿಶ್ವಾಸ ಕಳೆದುಕೊಂಡಿದೆ. ರಾಜೀನಾಮೆ ನೀಡಿ ಇಲ್ಲವೆ ಪದಚ್ಯುತಿ ಎದುರಿಸಿ ಎಂದು ಅವರನ್ನು ಕೇಳಿಕೊಳ್ಳಲಾಗಿತ್ತು. ನಿರ್ದೇಶಕ ಮಂಡಳಿಯ ಸಭೆಗೂ ಮುಂಚೆ ರತನ್‌ ಟಾಟಾ ಮತ್ತು ಇನ್ನೊಬ್ಬ ನಿರ್ದೇಶಕ ನಿತಿನ್‌ ನೋಹ್ರಿಯಾ ಅವರು  ನಿರ್ದೇಶಕ ಮಂಡಳಿಯ ನಿಲುವನ್ನು ಸೈರಸ್‌ ಅವರ ಗಮನಕ್ಕೆ ತಂದಿದ್ದರು’ ಎಂದು ಟಾಟಾ ಸನ್ಸ್‌ನ ಕಾರ್ಯನಿರ್ವಾಹಕ ಮಂಡಳಿಯ ನಿರ್ದೇಶಕರಾಗಿದ್ದ ನಿರ್ಮಲ್ಯ ಕುಮಾರ್‌ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

‘ಸೈರಸ್‌, ನಿಮ್ಮ ಮತ್ತು ರತನ್‌ ಟಾಟಾ ಅವರ ನಡುವಣ ಬಾಂಧವ್ಯ ಸುಮಧುರವಾಗಿಲ್ಲ ಎನ್ನುವುದು ನಿಮಗೆ ಗೊತ್ತಿದೆ. ಆ ಕಾರಣಕ್ಕೆ ಟಾಟಾ ಸನ್ಸ್‌ನಿಂದ ನಿಮ್ಮನ್ನು ಹೊರ ಹಾಕಲು ಟಾಟಾ ಟ್ರಸ್ಟ್‌ ನಿರ್ಧರಿಸಿದೆ’ ಎಂದು ನಿತಿನ್‌ ಹೇಳಿದ್ದರು.

‘ವಿದ್ಯಮಾನಗಳು ಈ ಹಂತಕ್ಕೆ ಬಂದು ನಿಂತಿರುವುದಕ್ಕೆ ನನಗೂ ವಿಷಾದ ಇದೆಯೆಂದು ರತನ್‌ ಟಾಟಾ ಹೇಳಿದ್ದರು’  ಎಂದೂ ಕುಮಾರ್‌ ಬರೆದುಕೊಂಡಿದ್ದಾರೆ.

ಸೈರಸ್‌ ಪ್ರತಿಕ್ರಿಯೆ: ಇದಕ್ಕೆ ಸೈರಸ್‌ ಅವರು ಸಮಾಧಾನದಿಂದಲೇ ಪ್ರತ್ಯುತ್ತರ ನೀಡಿದ್ದರು. ‘ನೀವು ಈ ವಿಷಯವನ್ನು ನಿರ್ದೇಶಕ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಿ ನಿರ್ಧಾರಕ್ಕೆ ಬನ್ನಿ. ನಾನು ಏನು ಮಾಡಬೇಕೊ ಅದನ್ನು ಮಾಡುವೆ’ ಎಂದು ಪ್ರತಿಕ್ರಿಯಿಸಿದ್ದರು.

ಆನಂತರ ತಮ್ಮ ಪತ್ನಿಗೆ ಸಂದೇಶ ಕಳಿಸಿ, ನಿರ್ದೇಶಕ ಮಂಡಳಿ ಸಭೆಯಲ್ಲಿ ಭಾಗವಹಿಸಲು ತೆರಳಿದ್ದರು. ಪದಚ್ಯುತಿ ಗೊತ್ತುವಳಿ ಅಂಗೀಕರಿಸುವ ಮುನ್ನ 15 ದಿನಗಳ ನೋಟಿಸ್‌ ನೀಡಬೇಕಾಗಿತ್ತು ಎಂದು ಸೈರಸ್‌ ಅವರು ಸಭೆಯಲ್ಲಿ ಪ್ರತಿಪಾದಿಸಿದ್ದರು.

ಅಂತಹ ನೋಟಿಸ್‌ನ ಅಗತ್ಯ ಇಲ್ಲ ಎಂದು ಟಾಟಾ ಟ್ರಸ್ಟ್‌ನ ನಾಮಕರಣ ಸದಸ್ಯ ಅಮಿತ್‌ ಚಂದ್ರ ಅವರು ಸಭೆಯ ಗಮನಕ್ಕೆ ತಂದಿದ್ದರು. ಕೆಲವೇ ನಿಮಿಷಗಳಲ್ಲಿ ಪದಚ್ಯುತಿ ನಿರ್ಧಾರ ಮುಗಿದು ಹೋಗಿತ್ತು. ತಮ್ಮ ನಿಲುವು ಸ್ಪಷ್ಟಪಡಿಸಲು ಸೈರಸ್‌ ಅವರಿಗೆ ಅವಕಾಶವೇ ಸಿಗಲಿಲ್ಲ.

ಒಂದು ವರ್ಷದವರೆಗೆ ನಡೆದಿದ್ದ ಆಯ್ಕೆ ಪ್ರಕ್ರಿಯೆ ನಂತರ ಸೈರಸ್‌ (46) ಅವರನ್ನು ಅಧ್ಯಕ್ಷ ಹುದ್ದೆಗೆ ನೇಮಿಸಲಾಗಿತ್ತು. 20 ರಿಂದ 30 ವರ್ಷಗಳವರೆಗೆ ಅವರು ಆ ಹುದ್ದೆಯಲ್ಲಿ ಮುಂದುವರೆಯುವ ಸಾಧ್ಯತೆ ಇತ್ತು ಎಂದು ಕುಮಾರ್‌  ಬರೆದುಕೊಂಡಿದ್ದಾರೆ.

ಸದ್ಯಕ್ಕೆ ನೈರ್ಮಲ್ಯ ಕುಮಾರ್‌ ಅವರು ಸಿಂಗಪುರದ ಮ್ಯಾನೇಜ್‌ಮೆಂಟ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.