ADVERTISEMENT

ಪದ್ಮಾವತಿ ಚಿತ್ರ ಬಿಡುಗಡೆ ನಿಷೇಧಿಸಿದ ಮಧ್ಯ ಪ್ರದೇಶ ಸರ್ಕಾರ

ಏಜೆನ್ಸೀಸ್
Published 20 ನವೆಂಬರ್ 2017, 13:41 IST
Last Updated 20 ನವೆಂಬರ್ 2017, 13:41 IST
ಪದ್ಮಾವತಿ ಚಿತ್ರ ಬಿಡುಗಡೆ ನಿಷೇಧಿಸಿದ ಮಧ್ಯ ಪ್ರದೇಶ ಸರ್ಕಾರ
ಪದ್ಮಾವತಿ ಚಿತ್ರ ಬಿಡುಗಡೆ ನಿಷೇಧಿಸಿದ ಮಧ್ಯ ಪ್ರದೇಶ ಸರ್ಕಾರ   

ಭೋಪಾಲ್‌: ಚಿತ್ರದಲ್ಲಿ ರಜಪೂತ ರಾಣಿ ಪದ್ಮಿನಿಯನ್ನು ಆಕ್ಷೇಪಾರ್ಹವಾಗಿ ಚಿತ್ರಿಸಿ, ಇತಿಹಾಸವನ್ನೇ ತಿರುಚಲಾಗಿದೆ ಎಂದು ರಜಪೂತ ಸಮುದಾಯ ಸೇರಿ ಹಲವು ಸಂಘಟನೆಗಳು ಪದ್ಮಾವತಿ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಮಧ್ಯಪ್ರದೇಶದಲ್ಲಿ ಚಿತ್ರ ಬಿಡುಗಡೆಯನ್ನು ನಿಷೇಧಿಸಲಾಗಿದೆ.

‘ಚಿತ್ರದಲ್ಲಿ ಇತಿಹಾಸ ತಿರುಚಿರುವ ಕುರಿತು ದೇಶದ ಎಲ್ಲೆಡೆ ಕೇಳಿಬರುತ್ತಿದೆ. ಐತಿಹಾಸಿಕ ಸತ್ಯಕ್ಕೆ ಕುಂದು ತುರುವ ವಿಚಾರವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ’ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ರಜಪೂತ ಸಮುದಾಯದ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ)ಯಿಂದ ಪ್ರಮಾಣ ಪಡೆದರೂ ರಾಜ್ಯದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿರುವುದಾಗಿ ಹಿಂದುಸ್ತಾನ್ ಟೈಮ್ಸ್‌ ವರದಿ ಮಾಡಿದೆ.

ADVERTISEMENT

‘ಪದ್ಮಿನಿ ಮತ್ತು ಅಲ್ಲಾವುದ್ದೀನ್‌ ಖಿಲ್ಜಿ ನಡುವೆ ಪ್ರಣಯವಿದ್ದಂತೆ ಚಿತ್ರಿಸಿದ್ದರೆ ಅದು ಇತಿಹಾಸವನ್ನು ತಿರುಚಿದಂತೆ ಆಗುತ್ತದೆ. ಇದನ್ನು ಯಾರೊಬ್ಬರೂ ಸಹ ಸಹಿಸುವುದಿಲ್ಲ ಹಾಗೂ ಈ ಸಂಬಂಧ ಪ್ರತಿಭಟನೆ ಸೂಕ್ತವಾದುದೇ’ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಪ್ರತಿಕ್ರಿಯಿಸಿರುವುದು ವರದಿಯಾಗಿದೆ.

ಈ ಮೂಲಕ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಮುಖಂಡರೊಬ್ಬರು ಪದ್ಮಾವತಿ ಚಿತ್ರದ ಕುರಿತು ವಿರೋಧ ವ್ಯಕ್ತಪಡಿಸಿದಂತಾಗಿದೆ. ‘ರಾಣಿ ಪದ್ಮಾವತಿ ತನ್ನ ಸತಿತ್ವ ಮತ್ತು ಘನತೆ ಕಾಪಾಡುವುದು ಹಾಗೂ ಮೊಘಲರಿಗೆ ಶರಣಾಗುವುದರ ಬದಲಾಗಿ ಅಗ್ನಿ ಪ್ರವೇಶ ಮಾಡಿ, ತಮ್ಮನ್ನು ತಾವೇ ಸುಟ್ಟುಕೊಂಡಿದ್ದರು’ ಎಂದು ಇತಿಹಾಸದ ಮೂಲಕ ನಂಬಲಾಗಿದೆ.

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಲನಚಿತ್ರದಲ್ಲಿ ದೀಪಿಕಾ ಪಡುಕೋಣೆ ಪದ್ಮಾವತಿಯಾಗಿ ಕಾಣಿಸಿಕೊಂಡಿದ್ದು, ಅವರಿಗೂ ಬೆದರಿಕೆಯೊಡ್ಡಲಾಗಿದೆ. ಚಿತ್ರೀಕರಣದ ಸಮಯದಿಂದಲೂ ಚಿತ್ರದ ವಿರುದ್ಧ ಪ್ರತಿಭಟನೆ ನಡೆದು ಬನ್ಸಾಲಿ ಅವರ ಮೇಲೆ ಹಲ್ಲೆ ಮಾಡಲಾಗಿತ್ತು.

ಪದ್ಮಾವತಿ ಚಿತ್ರ ವಿರೋಧಿಸಿ ದೇಶದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವಂತೆಯೇ, ಚಿತ್ರ ನಿರ್ಮಾಣ ಸಂಸ್ಥೆ ವಯಕಾಮ್‌18 ಮೋಷನ್‌ ಪಿಕ್ಚರ್ಸ್‌ ಸಿನಿಮಾ ಬಿಡುಗಡೆಯನ್ನು ಮುಂದೂಡಿದೆ. ಡಿ.1ಕ್ಕೆ ಚಿತ್ರ ಬಿಡುಗಡೆ ನಿಗದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.