ADVERTISEMENT

ಪರಾರಿಯಾದ ಆರೋಪಿಗಳ ಆಸ್ತಿ ಜಪ್ತಿ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST

ನವದೆಹಲಿ: ಆರ್ಥಿಕ ಅಪರಾಧ ಎಸಗಿ ಪರಾರಿಯಾಗುವವರ ಆಸ್ತಿ ಜಪ್ತಿ ಮಸೂದೆಯನ್ನು ಸರ್ಕಾರವು ಲೋಕಸಭೆಯಲ್ಲಿ ಸೋಮವಾರ ಮಂಡಿಸಿದೆ. ಸಾಲ ಮರುಪಾವತಿ ಮಾಡದಿರುವುದು ಸೇರಿ ಆರ್ಥಿಕ ಅಪರಾಧ ಎಸಗಿ, ತನಿಖೆ ತಪ್ಪಿಸಿಕೊಳ್ಳುವುದಕ್ಕಾಗಿ ದೇಶ ಬಿಟ್ಟು ಪರಾರಿಯಾಗುವವರ ಎಲ್ಲ ಆಸ್ತಿಯನ್ನು ಜಪ್ತಿ ಮಾಡುವ ಪ್ರಸ್ತಾವ ಈ ಮಸೂದೆಯಲ್ಲಿ ಇದೆ. ₹100 ಕೋಟಿಗಿಂತ ಹೆಚ್ಚಿನ ಮೊತ್ತದ ಅಪರಾಧ ಪ್ರಕರಣಗಳಲ್ಲಿ ಅನ್ವಯ ಆಗುವಂತೆ ಮಸೂದೆ ರೂಪಿಸಲಾಗಿದೆ.

ಹಣಕಾಸು ಖಾತೆಯ ರಾಜ್ಯ ಸಚಿವ ಶಿವಪ್ರತಾಪ್‌ ಶುಕ್ಲಾ ಮಸೂದೆ ಮಂಡಿಸಿದರು. ಆದರೆ, ಬಿಜೆಡಿ ಸಂಸದ ಬ್ರತೃಹರಿ ಮಹತಾಬ್‌ ಅವರು ಮಸೂದೆ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು. ಇದು ಜನರ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಅವರು ಪ್ರತಿಪಾದಿಸಿದರು.

‘ತಪ್ಪಿತಸ್ಥ ಅಲ್ಲ ಎಂದು ಸಾಬೀತಾಗುವ ತನಕ ಆರೋಪಿಯನ್ನು ಅಪರಾಧಿ ಎಂದೇ ಪರಿಗಣಿಸುವ ನೆಲೆಗಟ್ಟಿನಲ್ಲಿ ಈ ಮಸೂದೆ ರೂಪಿಸಲಾಗಿದೆ. ಅಪರಾಧ ಸಾಬೀತಾಗುವ ಮೊದಲೇ ಆಸ್ತಿ ಜಪ್ತಿ ಮಾಡುವುದು ಸರಿಯಲ್ಲ’ ಎಂದು ಅವರು ಹೇಳಿದರು. ‌

ADVERTISEMENT

ಈ ಎಲ್ಲ ಅಂಶಗಳನ್ನು ಸದನದಲ್ಲಿ ಚರ್ಚೆಗೆ ಒಳಪಡಿಸಬಹುದು ಎಂದು ಶುಕ್ಲಾ ಹೇಳಿದರು.

ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾದ ಕಾರಣ ಈ ಮಸೂದೆ ರೂಪಿಸಲಾಗಿದೆ.

ಚಿಟ್‌ಫಂಡ್‌ ಮಸೂದೆ: ಬಡವರು ಮತ್ತು ಕೆಳ ಮಧ್ಯಮ ವರ್ಗದವರನ್ನು ಗುರಿಯಾಗಿಸಿರುವ ಮತ್ತು ಕೆಲವೊಮ್ಮೆ ವಂಚನೆ ಎಸಗುವ ಚಿಟ್‌ಫಂಡ್‌ಗಳ ನಿಯಂತ್ರಣಕ್ಕೆ ಚಿಟ್‌ಫಂಡ್‌ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.

ಚಿಟ್‌ಫಂಡ್‌ ಡ್ರಾ ಸಂದರ್ಭದಲ್ಲಿ ಕನಿಷ್ಠ ಇಬ್ಬರು ಚಂದಾದಾರರು ಖುದ್ದಾಗಿ ಅಥವಾ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಿರುವುದು ಕಡ್ಡಾಯ ಎಂಬುದು ಮಸೂದೆಯಲ್ಲಿ ಇರುವ ಪ್ರಮುಖ ಅಂಶ. ಚಿಟ್‌ಫಂಡ್‌ ಕ್ಷೇತ್ರದ ವ್ಯವಸ್ಥಿತ ಬೆಳವಣಿಗೆಗೆ ನೆರವಾಗುವ ಹಲವು ಅಂಶಗಳೂ ಈ ಮಸೂದೆಯಲ್ಲಿ ಇವೆ.

6ನೇ ದಿನವೂ ಕಲಾಪ ಇಲ್ಲ
ಆಡಳಿತಾರೂಢ ಎನ್‌ಡಿಎಯ ಭಾಗವಾಗಿರುವ ಟಿಡಿಪಿ ಮತ್ತು ವಿರೋಧ ಪಕ್ಷಗಳು ಸೃಷ್ಟಿಸಿದ ಗದ್ದಲದಿಂದಾಗಿ ಸತತ ಆರನೇ ದಿನವೂ ಸಂಸತ್ತಿನ ಎರಡೂ ಸದನಗಳಲ್ಲಿ ಯಾವುದೇ ಕಲಾಪ ನಡೆಯಲಿಲ್ಲ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನ, ಕಾವೇರಿ ನಿರ್ವಹಣಾ ಮಂಡಳಿ ರಚನೆ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಪ್ರಕರಣಗಳನ್ನು ಹಿಡಿದುಕೊಂದು ವಿವಿಧ ಪಕ್ಷಗಳ ಸಂಸದರು ಕಳೆದ ಇಡೀ ವಾರ ಕೋಲಾಹಲ ಸೃಷ್ಟಿಸಿದ್ದರು. ಸೋಮವಾರವೂ ಅದೇ ಮುಂದುವರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.