ADVERTISEMENT

ಪರಿಣಾಮಕಾರಿ ಸಂವಹನ ಜಾಲಕ್ಕೆ ಚಿಂತನೆ

ಅಜಿತ್ ಅತ್ರಾಡಿ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ನವದೆಹಲಿ: ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಪರಿಣಾಮಕಾರಿ ಸಂವಹನ ಜಾಲವನ್ನು ಹೊಂದುವ ನಿಟ್ಟಿನಲ್ಲಿ, ಪ್ರತ್ಯೇಕ ದೂರಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.

 `ಅತಿ ಶೀಘ್ರದಲ್ಲಿ, ಅತಿ ಸುಲಭದಲ್ಲಿ ಮತ್ತು ಎಲ್ಲ ರೀತಿಯ ಹವಾಮಾನ ಪರಿಸ್ಥಿತಿಯಲ್ಲೂ ಅಳವಡಿಸಬಹುದಾದ ನಿಸ್ತಂತು ಸಂವಹನ ವ್ಯವಸ್ಥೆ ಇದಾಗಿದೆ~ ಎಂದು ದೂರಸಂಪರ್ಕ ವಲಯದ 12ನೇ ಯೋಜನೆಗಾಗಿನ ಕಾರ್ಯನಿರತ ತಂಡ ಸಲ್ಲಿಸಿದ ಇತ್ತೀಚೆಗಿನ ವರದಿ ತಿಳಿಸಿದೆ.

ಕಳೆದ ವರ್ಷ ಸಿಕ್ಕಿಂನಲ್ಲಿ ಸಂಭವಿಸಿದ ಭೀಕರ ಭೂಕಂಪ ಸೇರಿದಂತೆ ಹಲವು ಪ್ರಮುಖ ನೈಸರ್ಗಿಕ ವಿಕೋಪ ಪ್ರಕರಣಗಳಲ್ಲಿ ದೂರಸಂಪರ್ಕ ವ್ಯವಸ್ಥೆ ಸಂಪೂರ್ಣವಾಗಿ ವಿಫಲಗೊಂಡಿದ್ದ ಹಿನ್ನೆಲೆಯಲ್ಲಿ ಇಲಾಖೆ ಇಂಥ ಕ್ರಮಕ್ಕೆ ಮುಂದಾಗಿದೆ. ಸಿಕ್ಕಿಂ ಭೂಕಂಪದ ವೇಳೆಯಂತೂ ದೂರಸಂಪರ್ಕ ಜಾಲ ನಿಶ್ಚಲಗೊಂಡಿದ್ದರಿಂದಾಗಿ ಪರಿಹಾರ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿತ್ತು.

ಉದ್ದೇಶಿತ ಯೋಜನೆಯ ಅಭಿವೃದ್ಧಿಗಾಗಿ ಇಲಾಖೆ 50 ಕೋಟಿ ರೂಪಾಯಿಯನ್ನು ಮೀಸಲಿರಿಸಲಿದ್ದು, ಯೋಜನೆಯ ಹೊಣೆಯನ್ನು ಸರ್ಕಾರಿ ಸಂಸ್ಥೆಗೆ ಅಥವಾ ಖಾಸಗಿ ಸಂಸ್ಥೆಗೆ ವಹಿಸಲು ಸಲಹೆ ನೀಡಿದೆ.

ಹೊಸ ಯೋಜನೆ ಅಳವಡಿಕೆಯಾದಲ್ಲಿ, ಅದರ ಮೂಲ ತಾಣಗಳು ಪೊಲೀಸ್, ನಾಗರಿಕ ಸೇವೆ, ವೈದ್ಯಕೀಯ ತಂಡಗಳಿಂದ ಕರೆಗಳನ್ನು ಸ್ವೀಕರಿಸಿ ಸಾರ್ವಜನಿಕ ಜಾಲತಾಣಗಳೊಂದಿಗೆ ಸಂಪರ್ಕ ಸಾಧಿಸುತ್ತವೆ. ಈ ಮೂಲಕ ವಿಪತ್ತು ಪರಿಹಾರ ನಿರ್ವಹಣೆಯಲ್ಲಿ ನಿರತವಾಗಿರುವ ಎಲ್ಲಾ ಸಂಸ್ಥೆಗಳು ಪರಸ್ಪರ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ ಎಂದು ವರದಿ ತಿಳಿಸಿದೆ.

ವಿದೇಶಗಳಲ್ಲಿ ಈಗಾಗಲೇ ಇಂಥ ವ್ಯವಸ್ಥೆ ಅಳವಡಿಕೆಯಾಗಿದ್ದು, ಭಾರತದಲ್ಲಿ ಇದನ್ನು ಅಭಿವೃದ್ಧಿಪಡಿಸುವ ಮುನ್ನ ಅವುಗಳ ಸೂಕ್ತ ಅಧ್ಯಯನ ನಡೆಸಲಾಗುವುದು ಎಂದೂ ಅದು ಹೇಳಿದೆ.

ಭಾರತೀಯ ದೂರಸಂಪರ್ಕ ಕ್ಷೇತ್ರ ಜಾಗತಿಕ ಮಟ್ಟದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಜಾಲತಾಣಗಳ ಸುರಕ್ಷೆಗಾಗಿ ಹಲವು ಘಟಕಗಳನ್ನು ಸ್ಥಾಪಿಸಲು ದೂರಸಂಪರ್ಕ ಇಲಾಖೆ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಕರೆಗಳಿಗೆ ಸಂಬಂಧಿಸಿದಂತೆ ಕಾನೂನು ಜಾರಿ ಸಂಸ್ಥೆಗಳು ಮುಕ್ತವಾಗಿ ಕಾರ್ಯಾಚರಿಸಬಹುದಾದ ಸಂವಹನ ರಕ್ಷಣಾ ಸಂಶೋಧನೆ ಮತ್ತು ಮುನ್ನೆಚ್ಚರಿಕೆ ಘಟಕದ ಸ್ಥಾಪನೆಗೆ ಕೇಂದ್ರ ಸರ್ಕಾರ ಕಳೆದ ವರ್ಷ ಅನುಮತಿ ನೀಡಿತ್ತು. ಅಂತೆಯೇ ದೂರಸಂಪರ್ಕ ಜಾಲದಲ್ಲಿ ವಿದೇಶಿ ಸಂಸ್ಥೆಗಳು ಗೂಢಚಾರಿಕೆ ನಡೆಸದಂತೆ ತಪಾಸಣೆ ನಡೆಸುವ ದೂರಸಂಪರ್ಕ ತಪಾಸಣಾ ಮತ್ತು ಭದ್ರತಾ ಪ್ರಮಾಣಪತ್ರ ಘಟಕವನ್ನೂ ಆರಂಭಿಸಿತ್ತು.

ಇದರ ಜೊತೆಗೆ, ಕೇವಲ ಸರ್ಕಾರದ ಬಳಕೆಗಾಗಿ `ಪ್ಯಾನ್ ಇಂಡಿಯಾ~ ಸುರಕ್ಷಿತ ದೂರಸಂಪರ್ಕ ಮತ್ತು ಅಂತರ್ಜಾಲ ತಾಣವೊಂದನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ಕಾರ್ಯನಿರತವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.