ADVERTISEMENT

ಪರಿಸರವಾದಿ ಸುನೀತಾ ನಾರಾಯಣ್ ಗೆ ಕಾರು ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2013, 10:49 IST
Last Updated 21 ಅಕ್ಟೋಬರ್ 2013, 10:49 IST

ನವದೆಹಲಿ (ಐಎಎನ್ಎಸ್): ನಗರದಲ್ಲಿ ಮುಂಜಾನೆ ಬೈಸಿಕಲ್ ಸವಾರಿ ಮಾಡುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಪರಿಸರವಾದಿ ಸುನೀತಾ ನಾರಾಯಣ್ (52) ಅವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.

ವಿಜ್ಞಾನ ಮತ್ತು ಪರಿಸರ ಕೇಂದ್ರದ (ಸಿಎಸ್ಇ) ನಿರ್ದೇಶಕಿ ಹಾಗೂ ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ ಪ್ರದೇಶದ ನಿವಾಸಿ,  ಸುನೀತಾ ನಾರಾಯಣ್ ಅವರು ತಮ್ಮ ಬೈಸಿಕಲ್ ನಲ್ಲಿ ಸಾಗುತ್ತಿದ್ದಾಗ ವೇಗವಾಗಿ ಬಂದ ಅಪರಿಚಿತ ಕಾರೊಂದು ಮುಂಜಾನೆ 6 ಗಂಟೆ ಸುಮಾರಿಗೆ ಡಿಕ್ಕಿ ಹೊಡೆದಿತ್ತು.

ಅಪಘಾತ ಸಂಭವಿಸುತ್ತಿದ್ದಂತೆಯೇ ಕಾರು ಚಾಲಕ ಘಟನಾ ಸ್ಥಳದಿಂದ ಪರಾರಿಯಾದ. ಸುನೀತಾ ನಾರಾಯಣ್ ಅವರನ್ನು ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸುನೀತಾ ಅವರ ಎರಡೂ ತೋಳುಗಳಿಗೆ ತೀವ್ರ ಏಟು ಬಿದ್ದಿದ್ದು, ಎದೆ ಭಾಗಕ್ಕೂ ತೀವ್ರ ಗಾಯಗಳಾಗಿದೆ ಎಂದು ವೈದ್ಯರು ಹೇಳಿದರು.

ಸುನೀತಾ ನಾರಾಯಣ್ ಅವರ ಆರೋಗ್ಯ ಸ್ಥಿರವಾಗಿದೆ ಎಂಬುದಾಗಿ ವೈದ್ಯರು ದೃಢ ಪಡಿಸಿದ್ದು, ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿಎಸ್ ಇ ಹೇಳಿಕೆ ತಿಳಿಸಿದೆ. ಸುನೀತಾ ಅವರ ಎರಡೂ ತೋಳುಗಳಿಗೆ ಟಿಟಾನಿಯಂ ಸರಳುಗಳನ್ನು ಅಳವಡಿಸಲಾಗಿದೆ ಎಂದೂ ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.