ADVERTISEMENT

ಪರಿಹಾರ ಕಾಣದೆ ಸೇನೆ ಹಿಂದೆ ಸರಿಯದು

ಪಿಟಿಐ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ಪರಿಹಾರ ಕಾಣದೆ ಸೇನೆ ಹಿಂದೆ ಸರಿಯದು
ಪರಿಹಾರ ಕಾಣದೆ ಸೇನೆ ಹಿಂದೆ ಸರಿಯದು   

ನವದೆಹಲಿ: ಭಾರತ–ಚೀನಾ–ಭೂತಾನ್‌ ಗಡಿಗಳು ಸಂಧಿಸುವ  ದೋಕ ಲಾ ಪ್ರದೇಶದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಚೀನಾ ಮತ್ತೆ ಮತ್ತೆ ಭಾರತಕ್ಕೆ ಹೇಳುತ್ತಿದೆ. ಆದರೆ ಈ ಪ್ರದೇಶದಲ್ಲಿ ಸುದೀರ್ಘ ಕಾಲ ಇರುವುದಕ್ಕೆ ಭಾರತದ ಸೇನೆ ಸನ್ನದ್ಧವಾಗಿದೆ.

ಸಿಕ್ಕಿಂನಲ್ಲಿರುವ ಈ ಪ್ರದೇಶ ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿದೆ. ಭಾರತದ ಸೈನಿಕರು ಅಲ್ಲಿ ಡೇರೆಗಳನ್ನು ಹಾಕಿದ್ದಾರೆ. ಚೀನಾದ ಸೈನಿಕರು ಸ್ಥಳದಿಂದ ತೆರಳುವವರೆಗೆ ಭಾರತದ ಯೋಧರು ಅಲ್ಲಿಯೇ ಉಳಿಯಲಿದ್ದಾರೆ ಎಂಬ ಸುಳಿವನ್ನು ಇದು ನೀಡಿದೆ.

ಭಾರತದ ಯೋಧರಿಗೆ ಅಗತ್ಯ ವಸ್ತುಗಳನ್ನು ನಿರಂತರವಾಗಿ ಪೂರೈಸಲಾಗುತ್ತಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಚೀನಾದ ಒತ್ತಡಕ್ಕೆ ಮಣಿಯುವ ಸಾಧ್ಯತೆ ಇಲ್ಲ ಎಂಬುದನ್ನು ಇದು ಸೂಚಿಸಿದೆ.

ADVERTISEMENT

‘ಯಾವುದೇ ರಾಜಿಗೆ ಸಿದ್ಧ ಇಲ್ಲ, ಚೆಂಡು ಭಾರತದ ಅಂಗಣದಲ್ಲಿದೆ’ ಎಂಬುದು  ಚೀನಾದ ನಿಲುವು. ಹಾಗಿದ್ದರೂ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರ ದೊರಕಬಹುದು ಎಂಬ ನಿರೀಕ್ಷೆಯನ್ನು ಭಾರತೀಯ ಸೇನೆ ಹೊಂದಿದೆ. ಯಾಕೆಂದರೆ ಹಿಂದೆಯೂ ಇಂತಹ ವಿಷಮ ಸ್ಥಿತಿ ಉಂಟಾದಾಗ ರಾಜತಾಂತ್ರಿಕವಾಗಿ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಸೇನೆಯ ಮೂಲಗಳು ಹೇಳಿವೆ.

ವಿವಿಧ ಹಂತಗಳಲ್ಲಿ ಸಮಾಲೋಚನೆ ಮೂಲಕ ಗಡಿ ವಿವಾದಗಳನ್ನು ಪರಿಹರಿಸಿಕೊಳ್ಳಬೇಕು ಎಂಬುದನ್ನು 2012ರಲ್ಲಿ ಎರಡೂ ದೇಶಗಳು ಒಪ್ಪಿಕೊಂಡಿವೆ. ಆದರೆ ದೋಕ ಲಾ ವಿಚಾರದಲ್ಲಿ ಈವರೆಗೆ ಇಂತಹ ಪ್ರಯತ್ನ ನಡೆದಿಲ್ಲ.

ರಕ್ಷಣೆಯ ದೃಷ್ಟಿಯಿಂದ ಬಹಳ ಮಹತ್ವದ್ದಾದ ದೋಕ ಲಾ ಪ್ರದೇಶದಲ್ಲಿ ಚೀನಾ ಸೈನಿಕರು ರಸ್ತೆ ನಿರ್ಮಾಣಕ್ಕೆ ಮುಂದಾದದ್ದೇ ಸಂಘರ್ಷಕ್ಕೆ ಕಾರಣವಾಯಿತು. ಕಳೆದ ಮೂರು ವಾರಗಳಿಂದ ಬಿಕ್ಕಟ್ಟು ಮುಂದುವರಿದಿದೆ.

ಸಂಧಾನವೊಂದೇ ಮಾರ್ಗ

* ಬಿಕ್ಕಟ್ಟು ಸೃಷ್ಟಿಯಾಗಿರುವ ಪ್ರದೇಶವನ್ನು ದೋಕಲಮ್‌ ಎಂದು ಭೂತಾನ್‌ ಗುರುತಿಸುತ್ತದೆ. ಭಾರತ ಈ ಪ್ರದೇಶವನ್ನು ದೋಕ ಲಾ ಎಂದು ಕರೆಯುತ್ತದೆ. ಆದರೆ ಚೀನಾದ ಪ್ರಕಾರ ಇದು ಡಾಂಗ್‌ಲಾಂಗ್‌ ಪ್ರಾಂತ್ಯ.

* ಬಿಕ್ಕಟ್ಟು ಪರಿಹಾರಕ್ಕಾಗಿ ಚೀನಾ ಮತ್ತು ಭೂತಾನ್‌ ನಡುವೆ ಮಾತುಕತೆ ನಡೆಯುತ್ತಿದೆ. ಆದರೆ ಮೂರು ದೇಶಗಳ ಗಡಿ ಸಂಧಿಸುವ ಪ್ರದೇಶವಾ
ದ್ದರಿಂದ ತನ್ನನ್ನೂ ಮಾತುಕತೆಗೆ ಸೇರಿಸಿಕೊಳ್ಳಬೇಕು ಎಂಬುದು ಭಾರತದ ವಾದ.

* 2012ರ ಒಪ್ಪಂದದ ಪ್ರಕಾರ, ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳ ನಡುವಣ ಮಾತುಕತೆ ಮೂಲಕ ವಿವಾದ ಪರಿಹರಿಸಿಕೊಳ್ಳಬೇಕು. ಈವರೆಗೆ ವಿಶೇಷ ಪ್ರತಿನಿಧಿಗಳ ನಡುವೆ 19 ಸುತ್ತು ಮಾತುಕತೆಗಳು ನಡೆದಿವೆ.

* ಚೀನಾದ ಜತೆಗೆ ಭೂತಾನ್‌ಗೆ ರಾಜತಾಂತ್ರಿಕ ಸಂಬಂಧ ಇಲ್ಲ. ಆದರೆ ಭಾರತದ ಜತೆಗೆ ರಾಜತಾಂತ್ರಿಕ ನಂಟನ್ನು ಹೊಂದಿರುವ ಭೂತಾನ್‌, ಸೇನಾ ನೆರವನ್ನೂ ಪಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.