ADVERTISEMENT

ಪಲಾಯನ ಮಾಡದಿದ್ದರೆ ನಾನೂ ಸಾಯುತ್ತಿದ್ದೆ: ರಾಮ್‌ದೇವ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಹರ್ದೊಯಿ (ಉತ್ತರ ಪ್ರದೇಶ) (ಪಿಟಿಐ):  ದೆಹಲಿಯ ರಾಮಲೀಲಾ ಮೈದಾನದಲ್ಲಿ ಜೂನ್ 5ರ ಮುಂಜಾನೆ ಪೊಲೀಸರು ತಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಸಂದರ್ಭದಲ್ಲಿ ಅಲ್ಲಿಂದ ಪಲಾಯನ ಮಾಡದಿದ್ದರೆ ತಮಗೂ ರಾಜ್‌ಬಾಲಾ ಅವರಿಗೆ ಒದಗಿದ ಗತಿ ಆಗುತ್ತಿತ್ತು ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಸ್ವಾಭಿಮಾನೆ ಯಾತ್ರೆ ನಡೆಸುತ್ತಿರುವ ರಾಮದೇವ್ ಶುಕ್ರವಾರ ರಾತ್ರಿ ಅನುಯಾಯಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿ, `ರಾಮಲೀಲಾ ಮೈದಾನದಿಂದ ಓಡಿ ಹೋಗದಿದ್ದರೆ ನಾನು ಕೂಡ ಸಾಯುತ್ತಿದ್ದೆ~ ಎಂದರು.

`ಆ ದಿನ ಅಲ್ಲಿಂದ ತಪ್ಪಿಸಿಕೊಳ್ಳದೇ ಇದ್ದರೆ ಇಂದು ನಾನು ನಿಮ್ಮ ಎದುರು ಇರುತ್ತಿರಲಿಲ್ಲ~ ಎಂದೂ ಹೇಳಿದರು.

ಭ್ರಷ್ಟಾಚಾರದ ವಿರುದ್ಧ ರಾಮ್‌ದೇವ್ ಮತ್ತು ಅವರ ಬೆಂಬಲಿಗರು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ, ಜೂನ್ 5ರ  ಮುಂಜಾನೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದರು. ಈ ಸಂದರ್ಭದಲ್ಲಿ ರಾಮ್‌ದೇವ್ ಅವರ ಅನುಯಾಯಿ 51 ವರ್ಷದ ರಾಜ್‌ಬಾಲಾ ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇತ್ತೀಚೆಗೆ ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.