ADVERTISEMENT

ಪಾಕ್‌ಗೆ ಭೇಟಿ: ಸರಬ್ಜಿತ್ ಸೋದರಿ, ಪುತ್ರಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ನವದೆಹಲಿ (ಪಿಟಿಐ): ಪಾಕಿಸ್ತಾನದ ಜೈಲಿನಲ್ಲಿ ಬಂದಿಯಾಗಿರುವ ಸರಬ್ಜಿತ್ ಸಿಂಗ್ ಅವರ ಸೋದರಿ ಮತ್ತು ಪುತ್ರಿ ಶನಿವಾರ ಭಾರತಕ್ಕೆ ಭೇಟಿ ನೀಡಿರುವ ಪಾಕ್ ಗೃಹ ಸಚಿವ ರೆಹಮಾನ್ ಮಲಿಕ್ ಅವರನ್ನು ಭೇಟಿ ಮಾಡಿ ಸಿಂಗ್ ಅವರನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.

ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಸರಬ್ಜಿತ್ ಸಿಂಗ್ ಅವರನ್ನು ಬಿಡುಗಡೆ ಮಾಡಲು ಪಾಕ್ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದು ಮಲಿಕ್ ಅವರು ಸಿಂಗ್ ಸಹೋದರಿ ದಲ್ಜಿತ್ ಕೌರ್ ಮತ್ತು ಪುತ್ರಿ ಸಪನ್‌ದೀಪ್ ಕೌರ್ ಅವರಿಗೆ ಭರವಸೆ ನೀಡಿದರು. ತಮ್ಮ ವೈಯಕ್ತಿಕ ಅತಿಥಿಯಾಗಿ ಪಾಕ್‌ಗೆ ಭೇಟಿ ನೀಡುವಂತೆ ದಲ್ಜಿತ್ ಹಾಗೂ ಅವರ ಕುಟುಂಬಕ್ಕೆ ಮಲಿಕ್  ಆಹ್ವಾನ ನೀಡಿದರು. ಜೊತೆಗೆ ಅವರ ಭೇಟಿಗಾಗಿ ಸುದೀರ್ಘ ಅವಧಿಯ ವೀಸಾ ನೀಡುವಂತೆಯೂ ಅವರು ಪಾಕಿಸ್ತಾನದ ಹೈ ಕಮಿಷನ್ ಅಧಿಕಾರಿಗಳಿಗೆ ಸೂಚಿಸಿದರು.

`ನನ್ನ ಅತಿಥಿಯಾಗಿ ನೀವೆಲ್ಲರೂ ಪಾಕಿಸ್ತಾನಕ್ಕೆ ಬಂದು, ನಿಮಗಿಷ್ಟ ಬಂದಷ್ಟು ಅವಧಿ ಕಳೆಯಿರಿ' ಎಂದು ದಲ್ಜಿತ್ ಹಾಗೂ ಸಪನ್‌ದೀಪ್ ಅವರಿಗೆ ಮಲಿಕ್ ತಿಳಿಸಿದರು. ಶನಿವಾರ ನಡೆದ ನಿಯೋಗ ಮಟ್ಟದ ಮಾತುಕತೆಯ ಸಂದರ್ಭದಲ್ಲೂ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಸರಬ್ಜಿತ್ ಸಿಂಗ್ ಬಿಡುಗಡೆಗೊಳಿಸುವ ವಿಚಾರ ಪ್ರಸ್ತಾಪಿಸಿದ್ದರು. ಎರಡೂ ರಾಷ್ಟ್ರಗಳ ಪ್ರತಿನಿಧಿಗಳು ಈ ವಿಷಯವನ್ನು ವಿವರವಾಗಿ ಚರ್ಚಿಸಿವೆ ಎಂದು ಮಲಿಕ್  ಇಬ್ಬರಿಗೂ ತಿಳಿಸಿದರು.

`ನಿಮ್ಮ ಪ್ರಧಾನಿ ಕೂಡ ಈ ವಿಚಾರ ಪ್ರಸ್ತಾಪಿಸಿದ್ದಾರೆ. ನಾವು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ. ನ್ಯಾಯಾಂಗ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದೇವೆ. ದೇವರ ದಯೆ ಇದ್ದರೆ ಏನಾದರೂ ಆಗುತ್ತದೆ' ಎಂದು ಮಲಿಕ್ ಹೇಳಿದರು. `ಸರಬ್ಜಿತ್ ಸಿಂಗ್ ಭೇಟಿಯಾಗುವುದಕ್ಕಾಗಿ ನಾವು ಶೀಘ್ರದಲ್ಲಿ ಪಾಕಿಸ್ತಾನ ವೀಸಾಕ್ಕೆ ಅರ್ಜಿ ಸಲ್ಲಿಸುವುತ್ತೇವೆ' ಎಂದು ಮಲಿಕ್ ಅವರನ್ನು ಭೇಟಿಯಾದ ನಂತರ ದಲ್ಜಿತ್ ಕೌರ್ ತಿಳಿಸಿದರು.

`ತಂದೆ ಭೇಟಿಗೆ ಕಾತರಳಾಗಿದ್ದೇನೆ' ಎಂದು ಸಪನ್‌ದೀಪ್ ಹೇಳಿದರು. ಮರಣದಂಡನೆಗೆ ಗುರಿಯಾಗಿರುವ ಸರಬ್ಜಿತ್ ಸಿಂಗ್ ಲಾಹೋರ್ ಲೋಕ್‌ಪತ್ ಜೈಲಿನಲ್ಲಿ ಬಂದಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.