ADVERTISEMENT

‘ಪಾಕ್‌ ನಾಯಕರೊಂದಿಗೆ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದ ಉದ್ದೇಶವೇನು?’

ಮೋದಿ ಪ್ರಶ್ನೆ

ಪಿಟಿಐ
Published 10 ಡಿಸೆಂಬರ್ 2017, 11:17 IST
Last Updated 10 ಡಿಸೆಂಬರ್ 2017, 11:17 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಪಲನ್‌ಪುರ, ಗುಜರಾತ್‌: ‘ಗುಜರಾತ್‌ ಚುನಾವಣೆಯಲ್ಲಿ ಪಾಕಿಸ್ತಾನ ಆಸಕ್ತಿ ತೋರುತ್ತಿದೆ. ಕಾಂಗ್ರೆಸ್ ಮುಖಂಡರು ನೆರೆ ರಾಷ್ಟ್ರದ ನಾಯಕರೊಂದಿಗೆ ಸಭೆ ನಡೆಸಿದ್ದಾರೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಪಲನ್‌ಪುರದಲ್ಲಿ ಭಾನುವಾರ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನ ಸೇನೆಯ ನಿವೃತ್ತ ಮಹಾ ನಿರ್ದೇಶಕ ಸರ್ದಾರ್‌ ಅರ್ಷದ್‌ ರಫಿಕ್‌ ಅವರು ಕಾಂಗ್ರೆಸ್‌ನ ಹಿರಿಯ ಮುಖಂಡ ಅಹ್ಮದ್‌ ಪಟೇಲ್‌ ಗುಜರಾತ್‌ನ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರೆ. ಮಣಿಶಂಕರ್‌ ಅಯ್ಯರ್‌ ಅವರ ಮನೆಯಲ್ಲಿ ಸಭೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ದೇಶದ ಜನರಿಗೆ ಕಾಂಗ್ರೆಸ್‌ ಉತ್ತರಿಸಬೇಕು’ ಎಂದರು.

‘ಮಣಿಶಂಕರ್‌ ಅಯ್ಯರ್‌ ಮನೆಯಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನದ ಹೈಕಮಿಷನರ್‌, ಆ ದೇಶದ ಮಾಜಿ ವಿದೇಶಾಂಗ ಸಚಿವ, ಭಾರತದ ಮಾಜಿ ಉಪರಾಷ್ಟ್ರಪತಿ ಹಾಗೂ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಮೂರು ಗಂಟೆಗಳ ಕಾಲ ನಡೆದ ಆ ಸಭೆಯ ಮರುದಿನ ಅಯ್ಯರ್‌ ನನ್ನನ್ನು ‘ನೀಚ’ ಎಂದು ಜರಿದರು. ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಲ್ಲವೆ?’ ಎಂದರು.

ADVERTISEMENT

‘ಆ ಸಭೆ ಬಳಿಕ ಅಯ್ಯರ್‌ ಆಡಿರುವ ಮಾತುಗಳು ಗುಜರಾತ್‌ನ ಬಡವರು ಹಾಗೂ ಹಿಂದುಳಿದ ಸಮುದಾಯದವರನ್ನು ಅಪಮಾನಿಸಿವೆ. ಇಂತಹ ಘಟನೆಗಳು ನಿಮಗೆ ಅನುಮಾನ ತರಿಸುವುದಿಲ್ಲವೆ?’ ಎಂದರು.

ಗುಜರಾತ್‌ನ ಕೇಂದ್ರ ಮತ್ತು ಉತ್ತರದ ಜಿಲ್ಲೆಗಳಲ್ಲಿ ಡಿ.14ರಂದು ಎರಡನೆ ಹಂತದ ವಿಧಾನಸಭಾ ಚುನಾವಣೆ ನಡೆಯಲಿದೆ. ಹಾಗಾಗಿ ಚುನಾವಣಾ ಪ್ರಚಾರದ ಭರಾಟೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.