ADVERTISEMENT

ಪಾಕ್‌ ಪರ ನಿಂತ ಚೀನಾ

ಪಿಟಿಐ
Published 16 ಅಕ್ಟೋಬರ್ 2016, 20:38 IST
Last Updated 16 ಅಕ್ಟೋಬರ್ 2016, 20:38 IST
ಬ್ರಿಕ್ಸ್‌ ರಾಷ್ಟ್ರಗಳ ಶೃಂಗಸಭೆಯ ಜೊತೆಯಲ್ಲೇ, ಬಂಗಾಳ ಕೊಲ್ಲಿಯ ಸುತ್ತ ಇರುವ ದೇಶಗಳ ನಾಯಕರ ಸಭೆಯೂ ಗೋವಾದಲ್ಲಿ ನಡೆಯಿತು.  ಸಭೆಯಲ್ಲಿ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್, ಭೂತಾನ್ ಪ್ರಧಾನಿ ಸೆರಿಂಗ್ ತೊಬ್ಗೆ, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ, ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ, ಮ್ಯಾನ್ಮಾರ್ ನಾಯಕಿ ಆ್ಯಂಗ್ ಸ್ಯಾನ್ ಸೂಕಿ, ಥಾಯ್ಲೆಂಡ್ ವಿದೇಶಾಂಗ ಖಾತೆ ಉಪ ಸಚಿವ ವಿರಾ ಸಕ್‌ದಿ ಫತ್ರ್‌ಕುಲ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ  – ಪಿಟಿಐ ಚಿತ್ರ
ಬ್ರಿಕ್ಸ್‌ ರಾಷ್ಟ್ರಗಳ ಶೃಂಗಸಭೆಯ ಜೊತೆಯಲ್ಲೇ, ಬಂಗಾಳ ಕೊಲ್ಲಿಯ ಸುತ್ತ ಇರುವ ದೇಶಗಳ ನಾಯಕರ ಸಭೆಯೂ ಗೋವಾದಲ್ಲಿ ನಡೆಯಿತು. ಸಭೆಯಲ್ಲಿ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್, ಭೂತಾನ್ ಪ್ರಧಾನಿ ಸೆರಿಂಗ್ ತೊಬ್ಗೆ, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ, ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ, ಮ್ಯಾನ್ಮಾರ್ ನಾಯಕಿ ಆ್ಯಂಗ್ ಸ್ಯಾನ್ ಸೂಕಿ, ಥಾಯ್ಲೆಂಡ್ ವಿದೇಶಾಂಗ ಖಾತೆ ಉಪ ಸಚಿವ ವಿರಾ ಸಕ್‌ದಿ ಫತ್ರ್‌ಕುಲ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ – ಪಿಟಿಐ ಚಿತ್ರ   

ಬೆನೋಲಿಂ: ಭಯೋತ್ಪಾದನೆ ವಿರುದ್ಧ ಸಮಗ್ರವಾದ ಕ್ರಮಕ್ಕೆ ಎಲ್ಲ ದೇಶಗಳು ಮುಂದಾಗಬೇಕು ಎಂಬ ನಿಲುವಿಗೆ ಬ್ರಿಕ್ಸ್‌ ಮುಖಂಡರು ಬಂದರೂ ಗಡಿಯಾಚೆಗಿನ ಉಗ್ರವಾದವನ್ನು ನಿರ್ದಿಷ್ಟವಾಗಿ ಹೆಸರಿಸಲು ಹಿಂದೇಟು ಹಾಕಿದ್ದಾರೆ.

ಭಯೋತ್ಪಾದನೆಯ ಲಕ್ಷಣಗಳು ಮತ್ತು ಅದರ ಮೂಲ ಕಾರಣಗಳನ್ನು ಪರಿಹರಿಸಲು ಬಹು ಆಯಾಮಗಳ ಧೋರಣೆಯನ್ನು ಅನುಸರಿಸುವ ಅಗತ್ಯ ಇದೆ ಎಂದು ಹೇಳುವ ಮೂಲಕ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಎಚ್ಚರಿಕೆಯ ಹೆಜ್ಜೆ ಇರಿಸಿದ್ದಾರೆ.

ಜಗತ್ತಿನ ಪ್ರಮುಖ ಸಂಘರ್ಷಗಳಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಬ್ರಿಕ್ಸ್‌ ದೇಶಗಳು ಸಂಯೋಜಿತ ಕ್ರಮ ಕೈಗೊಳ್ಳಬೇಕು ಎಂದು ಕ್ಸಿ ಪ್ರತಿಪಾದಿಸಿದ್ದಾರೆ. ಕ್ಸಿ ಅವರ ಹೇಳಿಕೆ ಬಹುತೇಕ ಪಾಕಿಸ್ತಾನದ ವಾದವನ್ನೇ ಪ್ರತಿಧ್ವನಿಸುತ್ತಿದೆ. ಭಾರತ ಎದುರಿಸುತ್ತಿರುವ ಭಯೋತ್ಪಾದನೆಯ ಮೂಲ ಕಾರಣ ಕಾಶ್ಮೀರ ವಿವಾದ ಎಂದು ಪಾಕಿಸ್ತಾನ ಹೇಳುತ್ತಿದೆ.

ADVERTISEMENT

ಉತ್ತರ ಕಾಶ್ಮೀರದ ಉರಿಯಲ್ಲಿನ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿ ತಿಂಗಳಾಗುವುದರೊಳಗೆ ಬ್ರಿಕ್ಸ್ ಶೃಂಗ ಸಭೆ ನಡೆದಿದೆ. ಹಾಗಾಗಿ, ಭಯೋತ್ಪಾದನೆ ಮತ್ತು ಗಡಿಯಾಚೆಗಿನ ಉಗ್ರವಾದವನ್ನು ಸಭೆಯು ಬಲವಾಗಿ ಖಂಡಿಸಬೇಕು ಎಂಬ ನಿರೀಕ್ಷೆಯನ್ನು ಭಾರತ ಹೊಂದಿತ್ತು.

ಬ್ರಿಕ್ಸ್‌ ಶೃಂಗ ಸಭೆಯ ಗೋವಾ ಘೋಷಣೆಯಲ್ಲಿ ‘ಗಡಿಯಾಚೆಗಿನ ಭಯೋತ್ಪಾದನೆ’ ಎಂಬುದನ್ನು ನೇರವಾಗಿ ಉಲ್ಲೇಖಿಸಲಾಗಿಲ್ಲ. ಬದಲಿಗೆ, ‘ಯಾವುದೇ ದೇಶ ತನ್ನ ನೆಲವನ್ನು ಭಯೋತ್ಪಾದನೆಗೆ ಬಳಸಲು ಅವಕಾಶ ನೀಡಬಾರದು’ ಎಂದು ಹೇಳಿದೆ.

ಗಡಿಯಾಚೆಗಿನ ಭಯೋತ್ಪಾದನೆ ಎಂಬುದನ್ನು ಘೋಷಣೆಯಲ್ಲಿ ಸೇರಿಸುವುದನ್ನು ಚೀನಾ ವಿರೋಧಿಸಿತು ಎಂದು ತಿಳಿದು ಬಂದಿದೆ. ಹಾಗೆ ಬಳಸಿದರೆ ಅದು ನೇರವಾಗಿ ಪಾಕಿಸ್ತಾನವನ್ನೇ ಉಲ್ಲೇಖಿಸಿದಂತಾಗುತ್ತದೆ ಎಂಬುದು ಚೀನಾದ ವಿರೋಧಕ್ಕೆ ಕಾರಣ. ಚೀನಾದ ಜತೆ ಪಾಕಿಸ್ತಾನ ಆತ್ಮೀಯ ಸಂಬಂಧ ಹೊಂದಿದೆ.

ಬಿಮ್ಸ್‌ಟೆಕ್‌ ನಾಯಕರ ಉಪಸ್ಥಿತಿ
ಬೆನೋಲಿಂ: ಬ್ರಿಕ್ಸ್‌ ದೇಶಗಳ ಶೃಂಗಸಭೆಯ ಜೊತೆಯಲ್ಲೇ, ಬಂಗಾಳ ಕೊಲ್ಲಿಯ ಸುತ್ತ ಇರುವ ದೇಶಗಳ ನಾಯಕರ ಸಭೆಯೂ ಗೋವಾದಲ್ಲಿ ನಡೆಯಿತು.

ಬಹು ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಲ ಕೊಲ್ಲಿ ಸುತ್ತಲಿನ ರಾಷ್ಟ್ರಗಳ ಒಕ್ಕೂಟ (ಬಿಮ್ಸ್‌ಟೆಕ್‌) ಹೆಸರಿನಲ್ಲಿ ಬಾಂಗ್ಲಾದೇಶ, ಮ್ಯಾನ್ಮಾರ್, ಭಾರತ, ಶ್ರೀಲಂಕಾ, ಥಾಯ್ಲೆಂಡ್, ಭೂತಾನ್ ಮತ್ತು ನೇಪಾಳ ದೇಶಗಳು ಒಕ್ಕೂಟ ರಚಿಸಿಕೊಂಡಿವೆ.
ಪ್ರಧಾನಿ ನರೇಂದ್ರ ಮೋದಿ ಆಹ್ವಾನದ ಮೇರೆಗೆ, ಬಿಮ್ಸ್‌ಟೆಕ್‌ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಬ್ರಿಕ್ಸ್‌ ಶೃಂಗಸಭೆಗೆ ಬಂದಿದ್ದರು. ಬೇರೆ ಬೇರೆ ದೇಶಗಳ ನಾಯಕರ ಜೊತೆ ಮಾತುಕತೆ ನಡೆಸಿದರು.

ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್, ಭೂತಾನ್ ಪ್ರಧಾನಿ ಸೆರಿಂಗ್ ತೊಬ್ಗೆ ಹಾಗೂ ಮ್ಯಾನ್ಮಾರ್ ನಾಯಕಿ ಆ್ಯಂಗ್ ಸ್ಯಾನ್ ಸೂಕಿ ಸಭೆಗೆ ಬಂದಿದ್ದರು.

ಎನ್‌ಎಸ್‌ಜಿ: ಬೆಂಬಲ

ಬೆನೋಲಿಂ: ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ತನ್ನನ್ನು ಏಕೆ ಸೇರಿಸಿಕೊಳ್ಳಬೇಕು ಎಂಬುದಕ್ಕೆ ಭಾರತ ಮುಂದಿಟ್ಟಿರುವ ವಾದವನ್ನು ಬ್ರಿಕ್ಸ್‌ ರಾಷ್ಟ್ರಗಳು ಒಪ್ಪಿಕೊಂಡವು. ಆದರೆ, ಎನ್‌ಎಸ್‌ಜಿಗೆ ಭಾರತವನ್ನು ಸೇರಿಸಿಕೊಳ್ಳಬೇಕು ಎಂಬ ಬೇಡಿಕೆ ಬೆಂಬಲಿಸುವ ಭರವಸೆ ನೀಡಲಿಲ್ಲ.

‘ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದವನ್ನು ಅನುಷ್ಠಾನಕ್ಕೆ ತರುವಲ್ಲಿ ಅಣುಶಕ್ತಿಯು ಬ್ರಿಕ್ಸ್‌ನ ಕೆಲವು ದೇಶಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಸಿರುಮನೆ ಪರಿಣಾಮ ಉಂಟುಮಾಡುವ ಅನಿಲ ಹೊರಸೂಸುವಿಕೆ ತಡೆಯುವಲ್ಲೂ ಇದು ಪರಿಣಾಮಕಾರಿ ಪಾತ್ರ ವಹಿಸಲಿದೆ’ ಎಂದು ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳು ಹೇಳಿವೆ.

ತನಗೆ ಎನ್‌ಎಸ್‌ಜಿ ಸದಸ್ಯತ್ವ ನೀಡಬೇಕು ಎಂದು ಕೇಳುವಾಗ ಭಾರತ ಮುಂದಿಟ್ಟಿದ್ದ ವಾದ ಇದೇ ಆಗಿತ್ತು.

* ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಆರ್ಥಿಕ ಬೆಳವಣಿಗೆ ಹೆಚ್ಚಿಸಲು, ಮೂಲಸೌಕರ್ಯ ಅಭಿವೃದ್ಧಿಯಾಗಬೇಕು. ಇದಕ್ಕೆ, ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌) ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿರಬೇಕು, ಕೋಟಾ ಆಧಾರದಲ್ಲಿ ಕೆಲಸ ಮಾಡಬೇಕು ಎಂದು ಬ್ರಿಕ್ಸ್‌ ದೇಶಗಳು ಒತ್ತಾಯಿಸಿವೆ.

* ಸ್ಟ್ಯಾಂಡರ್ಡ್‌ ಅಂಡ್‌ ಪೂರ್‌, ಮೂಡಿಸ್‌ ಮಾದರಿಯಲ್ಲಿ ಬ್ರಿಕ್ಸ್‌ ದೇಶಗಳು ತಮ್ಮದೇ ಆದ ಮೌಲ್ಯಮಾಪನ ಸಂಸ್ಥೆಯನ್ನು ಕಟ್ಟಬೇಕು ಎಂದು ಭಾರತ ಮುಂದಿಟ್ಟ ಪ್ರಸ್ತಾಪಕ್ಕೆ ಒಮ್ಮತ ವ್ಯಕ್ತವಾಗಲಿಲ್ಲ. ಈ ರೀತಿಯ ಸಂಸ್ಥೆ ಕಟ್ಟಲು ಅಗತ್ಯವಿರುವ ಅಂಕಿ–ಅಂಶಗಳ ಲಭ್ಯತೆ ಬಗ್ಗೆ ನಾಯಕರಲ್ಲಿ ಸಹಮತ ಮೂಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.