ADVERTISEMENT

ಪಾಕ್ ಪ್ರವಾಸ ಕೈಗೊಳ್ಳಲು ದೀಪಿಕಾ, ಸೌರವ್ ನಕಾರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 19:59 IST
Last Updated 24 ಏಪ್ರಿಲ್ 2013, 19:59 IST

ನವದೆಹಲಿ (ಐಎಎನ್‌ಎಸ್): ಭಾರತದ ಅಗ್ರಮಾನ್ಯ ಸ್ಕ್ವಾಷ್ ಆಟಗಾರರಾದ ಸೌರವ್ ಘೋಷಾಲ್ ಹಾಗೂ ದೀಪಿಕಾ ಪಳ್ಳಿಕಲ್ ಭದ್ರತಾ ಕಾರಣವೊಡ್ಡಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಮೇ ಒಂದರಂದು ಆರಂಭವಾಗಲಿರುವ ಏಷ್ಯನ್ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅವರು ಪಾಕ್‌ಗೆ ತೆರಳಬೇಕಿತ್ತು. ಜೋಷ್ನಾ ಚಿನ್ನಪ್ಪ, ಸಿದ್ದಾರ್ಥ್ ಸಚ್ದೆ ಹಾಗೂ ಹರಿಂದರ್ ಪಾಲ್ ಸಂಧು ಕೂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

`ಸದ್ಯದ ಪರಿಸ್ಥಿತಿ ಗಮನಿಸಿದರೆ ನಾನು ಆ ಟೂರ್ನಿಯಲ್ಲಿ ಪಾಲ್ಗೊಳ್ಳಲು    ಪಾಕ್‌ಗೆ ತೆರಳಲಾರೆ. ಭದ್ರತಾ ಸಮಸ್ಯೆಯೇ ಇದಕ್ಕೆ ಮುಖ್ಯ ಕಾರಣ. ಈ ಟೂರ್ನಿ ಬೇರೆಡೆ ನಡೆದಿದ್ದರೆ ಖಂಡಿತ ಪಾಲ್ಗೊಳ್ಳುತ್ತಿದ್ದೆ' ಎಂದು ಘೋಷಾಲ್ ನುಡಿದಿದ್ದಾರೆ.

`ರ‌್ಯಾಂಕಿಂಗ್ ದೃಷ್ಟಿಯಿಂದ ಈ ಟೂರ್ನಿ ಅಷ್ಟೇನು ಪ್ರಾಮುಖ್ಯ ಪಡೆದಿಲ್ಲ. ಆದರೆ ಬೇರೆಡೆ ನಡೆದಿದ್ದರೆ ಖಂಡಿತ ನಾನು ಭಾಗವಹಿಸುತ್ತಿದ್ದೆ. ಭದ್ರತಾ ಸಮಸ್ಯೆ ಕಾರಣ ನನ್ನ ಪೋಷಕರು ಆತಂಕಗೊಂಡಿದ್ದಾರೆ. ಹಾಗಾಗಿ ನಾನು ಪಾಕ್‌ಗೆ ತೆರಳುತ್ತಿಲ್ಲ' ಎಂದು ದೀಪಿಕಾ ತಿಳಿಸಿದ್ದಾರೆ.

`ಈ ಬಗ್ಗೆ ನಾವಿನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿರ್ಧಾರ ಸಂಪೂರ್ಣವಾಗಿ ಆಟಗಾರರಿಗೆ ಬಿಟ್ಟದ್ದು' ಎಂದು ಭಾರತ ಸ್ಕ್ವಾಷ್ ರಾಕೆಟ್ ಫೆಡರೇಷನ್‌ನ ಅಧ್ಯಕ್ಷ ಶ್ರೀವತ್ಸನ್ ಸುಬ್ರಮಣ್ಯಮ್ ಸ್ಪಷ್ಟಪಡಿಸಿದ್ದಾರೆ.

ಆದರೆ ಭಾರತದ ಆಟಗಾರರ ಅನುಪಸ್ಥಿತಿ ಟೂರ್ನಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪಾಕ್‌ನ ಪಂಜಾಬ್ ಸ್ಕ್ವಾಷ್ ಸಂಸ್ಥೆಯ ಅಧ್ಯಕ್ಷ ಅಮ್ಜದ್ ಅಲಿ ಕೆಲ ದಿನಗಳ ಹಿಂದೆಯೇ ನುಡಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.