ಲೋಕಸಭೆಯಲ್ಲಿ ರಕ್ಷಣಾ ಸಚಿವರ ಹೇಳಿಕೆ
ನವದೆಹಲಿ (ಪಿಟಿಐ): ಪಾಕಿಸ್ತಾನ ಮೂಲದ ಗುಪ್ತಚರ ಸಂಸ್ಥೆಗಳು ಕಳೆದ ಮೂರು ವರ್ಷಗಳಲ್ಲಿ ನಡೆಸಿದ ಬೇಹುಗಾರಿಕೆ ಚಟುವಟಿಕೆಗೆ ಸಂಬಂಧಿಸಿದಂತೆ ಒಟ್ಟು ಐದು ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಈ ಸಂಬಂಧ 12 ಜನರನ್ನು ಬಂಧಿಸಲಾಗಿದೆ ಎಂದು ಸೋಮವಾರ ರಕ್ಷಣಾ ಸಚಿವ ಎ.ಕೆ. ಆಂಟನಿ ಲೋಕಸಭೆಗೆ ತಿಳಿಸಿದರು.
ಬಂಧಿತರಲ್ಲಿ ಒಬ್ಬನಿಗೆ ಈಗಾಗಲೆ ಜೈಲು ಶಿಕ್ಷೆ ವಿಧಿಸಲಾಗಿದ್ದು ಉಳಿದ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಬೇಹುಗಾರಿಕೆ ಚಟುವಟಿಕೆಗಳ ಮೇಲೆ ಕಣ್ಣಿಡಲು ಗುಪ್ತಚರ ಇಲಾಖೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದೂ ತಿಳಿಸಿದರು.
`ಕಾಶ್ಮೀರ ಸಮಸ್ಯೆಗೆ ಪರಿಹಾರ~
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಅತಿಕ್ರಮಣ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ದ್ವಿಪಕ್ಷೀಯ ಹಾಗೂ ಶಾಂತಿಯುತ ಮಾತುಕತೆಯ ಮೂಲಕ ಭಾರತ ಶೀಘ್ರ ಪರಿಹಾರ ಕಂಡುಕೊಳ್ಳಲಿದೆ ಎಂದೂ ಸಚಿವರು ತಿಳಿಸಿದರು.
ಗಡಿನಿಯಂತ್ರಣ ರೇಖೆ ಕುರಿತಾದ ಸಮಸ್ಯೆಯನ್ನೂ 1949ರ ಕರಾಚಿ ಒಪ್ಪಂದ ಹಾಗೂ 1972ರ ಸಿಮ್ಲಾ ಒಪ್ಪಂದದ ಅನ್ವಯವೇ ಪರಿಹರಿಸಿಕೊಳ್ಳಲಾಗುವುದು. ಕೆಲ ಪ್ರಕಾಶಕರ ನಕಾಶೆ ಪುಸ್ತಕಗಳಲ್ಲಿ ಭಾರತದ ಗಡಿಗಳ ಕುರಿತು ತಪ್ಪು ಮಾಹಿತಿ ಇದ್ದು ಈ ಕುರಿತು ಸಂಬಂಧಿಸಿದವರ ಜತೆ ಚರ್ಚೆ ನಡೆಸಲಾಗುವುದು ಎಂದರು.
ಕೇಂದ್ರದ ತೀವ್ರ ನಿಗಾ
ನವದೆಹಲಿ (ಪಿಟಿಐ): ಗಡಿ ಪ್ರದೇಶದಲ್ಲಿ ಚೀನಾ ಮೂಲಸೌಲಭ್ಯಗಳ ಅಭಿವೃದ್ಧಿ ಯೋಜನೆ ಕೈಗೊಳ್ಳುತ್ತಿರುವ ಬಗ್ಗೆ ಕೇಂದ್ರಕ್ಕೆ ಮಾಹಿತಿ ಇದ್ದು, ಅದರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಸರ್ಕಾರ ಹೇಳಿದೆ.
`ಭಾರತದ ಪ್ರಬಲ ವಿರೋಧದ ಮಧ್ಯೆಯೂ ಚೀನಾ ಸರ್ಕಾರ ಗಡಿಗುಂಟ ರೈಲು, ರಸ್ತೆ ಅಭಿವೃದ್ಧಿ ಯೋಜನೆ ಮತ್ತು ವಿಮಾನಯಾನ ಸೌಕರ್ಯದಂಥ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ. ಸರ್ಕಾರ ಇದರ ಬಗ್ಗೆ ಹೆಚ್ಚಿನ ನಿಗಾ ವಹಿಸಿದೆ~ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಲೋಕಸಭೆಗೆ ನೀಡಿರುವ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.