ADVERTISEMENT

ಪಾರದರ್ಶಕ ಬಿಡ್ಡಿಂಗ್ ಕರಡು ಮಸೂದೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಸರ್ಕಾರದ ಇಲಾಖೆಗಳಿಂದ ನಡೆಯುವ ವಸ್ತುಗಳ ಖರೀದಿಯನ್ನು ಪಾರದರ್ಶಕ ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ನಿಯಂತ್ರಿಸುವ ಸಾರ್ವಜನಿಕ ಖರೀದಿ ಕರಡು ಮಸೂದೆಗೆ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ರಚಿಸಲಾಗಿರುವ ಸಚಿವರ ಸಮಿತಿಯು ಬುಧವಾರ ಒಪ್ಪಿಗೆ ನೀಡಿದೆ.

ಸಿಬ್ಬಂದಿ ಖಾತೆ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ಸುದ್ದಿಗಾರರಿಗೆ ಇದನ್ನು ಖಚಿತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ, ಹಣಕಾಸು ಸಚಿವಾಲಯ ಈ ಸಂಬಂಧ ಅಭಿಪ್ರಾಯಗಳನ್ನು ಕ್ರೋಡೀಕರಿಸಲು ಸಾರ್ವಜನಿಕ ಪ್ರಕಟಣೆ ಹೊರಡಿಸಿತ್ತು.

ಇದೀಗ ಈ ಮಸೂದೆಯು ಪ್ರಧಾನಿ ಅನುಮೋದನೆಗಾಗಿ ಹಾಗೂ ನಂತರ ಸಚಿವ ಸಂಪುಟದ ಅಂಗೀಕಾರಕ್ಕೆ ಹೋಗಲಿದೆ. ಈ ಕರಡು ಮಸೂದೆಯು ಬಜೆಟ್ ಅಧಿವೇಶನದ ವೇಳೆ ಸಂಸತ್ತಿನ ಮುಂದೆ ಚರ್ಚೆಗೆ ಬರಬಹುದು ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.

ADVERTISEMENT

ಅಹವಾಲು ಆಲಿಕೆ ವ್ಯವಸ್ಥೆ, ಅಕ್ರಮಗಳಿಗೆ ದಂಡ, ನೀತಿಬಾಹಿರ ಕ್ರಮಗಳಲ್ಲಿ ಭಾಗಿಯಾದ ಬಿಡ್ಡರ್‌ಗಳನ್ನು ಅನರ್ಹಗೊಳಿಸಲು ಅವಕಾಶ, ನಿರ್ದಿಷ್ಟ ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಬೆಲೆ ಸಂಧಾನಕ್ಕೆ ಅವಕಾಶ ಇಲ್ಲದಿರುವುದು, ಬಿಡ್ಡರ್ ಸಂಖ್ಯೆ ಮಿತಿಯನ್ನು ತೆಗೆದುಹಾಕುವುದು ಇತ್ಯಾದಿ ನಿಬಂಧನೆಗಳನ್ನು ಮಸೂದೆ ಒಳಗೊಂಡಿದೆ.

ಸಾರ್ವಜನಿಕ ಖರೀದಿಸಿ ಸಂಬಂಧಿಸಿದ ಮಾಜಿ ಅಧಿಕಾರಿ ವಿನೋದ್ ಧಾಲ್ ಸಮಿತಿಯ ಶಿಫಾರಸಿನ ಮೇರೆಗೆ ಈ ಕರಡು ಸಿದ್ಧಪಡಿಸಲಾಗಿದೆ. ಎಲ್ಲಾ ಸಚಿವಾಲಯಗಳು ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳು ನಡೆಸುವ ವಿವಿಧ ಉತ್ಪನ್ನಗಳ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಇದರ ಉದ್ದೇಶ. ಬಿಡ್ಡರ್‌ಗಳಿಗೆ ಸಮಾನ ಅವಕಾಶ ಕಲ್ಪಿಸುವುದು, ಪಾರದರ್ಶಕತೆ ಕಾಯ್ದುಕೊಳ್ಳುವುದು, ಸ್ಪರ್ಧಾತ್ಮಕತೆ ಹೆಚ್ಚಿಸುವುದು, ದಕ್ಷತೆ ಹಾಗೂ ಆರ್ಥಿಕತೆ ಹೆಚ್ಚಿಸುವುದು ಕೂಡ ಈ ಮಸೂದೆಯ ಉದ್ದೇಶಗಳಾಗಿವೆ. ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಲು ಅನುಮತಿ ನೀಡುವ ವೇಳೆ ಪಾರದರ್ಶಕತೆ ಕಾಯ್ದುಕೊಂಡು ಭ್ರಷ್ಟಾಚಾರ ತಗ್ಗಿಸುವ ಕುರಿತೂ ಸಚಿವರ ಸಮಿತಿ ಚರ್ಚಿಸಿತು ಎನ್ನಲಾಗಿದೆ.

ಸಚಿವರ ಸಮಿತಿಯು ಈ ಸಂಬಂಧ ಮಾಜಿ ಹಣಕಾಸು ಕಾರ್ಯದರ್ಶಿ ಅಶೋಕ್ ಚಾವ್ಲಾ ನೇತೃತ್ವದ ತಂಡವು ಮಾಡಿದ್ದ ಕೆಲವು ಶಿಫಾರಸುಗಳನ್ನು ಈ ಹಿಂದೆಯೇ ಒಪ್ಪಿಕೊಂಡಿತ್ತು.

ಚರ್ಚೆಗೆ ಬಾರದ ನೀತಿ ಸಂಹಿತೆ ವಿಚಾರ

ನವದೆಹಲಿ (ಐಎಎನ್‌ಎಸ್): ಭ್ರಷ್ಟಾಚಾರ ನಿಯಂತ್ರಣ ಸಂಬಂಧ ರಚಿತವಾಗಿರುವ ಸಚಿವರ ಸಮಿತಿಯ ಬುಧವಾರದ ಸಭೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸುವ ಚುನಾವಣಾ ಆಯೋಗದ ಅಧಿಕಾರ ಮೊಟಕುಗೊಳಿಸುವ ವಿಷಯ ಚರ್ಚೆಗೆ ಬರಲಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸಭೆಯ ಕಲಾಪ ಪಟ್ಟಿಯಲ್ಲಿ ಈ ವಿಷಯ ಸೇರಿರಲಿಲ್ಲವಾದ್ದರಿಂದ ಸಚಿವರ ಸಮಿತಿ ಈ ಕುರಿತು ಚರ್ಚಿಸಲಿಲ್ಲ ಎಂದು ಪ್ರಧಾನಿ ಸಚಿವಾಲಯದ ರಾಜ್ಯ ಸಚಿವ ವಿ.ನಾರಾಯಣಸ್ವಾಮಿ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಆಯೋಗದ ಅಧಿಕಾರ ಮೊಟಕುಗೊಳಿಸುವ ಈ ಪ್ರಸ್ತಾವ ಸಚಿವರ ಸಮಿತಿಯ ಸಭೆಯ ಕಲಾಪ ಪಟ್ಟಿಗೆ ರಹಸ್ಯವಾಗಿ ಸೇರಿದೆ ಎಂದು ಮಂಗಳವಾರ ವರದಿಗಳು ಪ್ರಕಟವಾಗಿದ್ದವು. ಆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದವು.

ಉತ್ತರ ಪ್ರದೇಶ ಚುನಾವಣಾ ಪ್ರಚಾರದ ವೇಳೆ, ಮುಸ್ಲಿಮ್ ಒಳಮೀಸಲಾತಿ ಕುರಿತು ಪ್ರಸ್ತಾಪಿಸಿದ್ದ  ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಉಕ್ಕು ಸಚಿವ ಬೇಣಿ ಪ್ರಸಾದ್ ವರ್ಮ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಈ ವಿಷಯ ಭಾರಿ ಸುದ್ದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.