ADVERTISEMENT

ಪಿಎಸಿ ವರದಿ ಜೋಶಿಗೆ ವಾಪಸ್

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST

 ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಪಿಎಸಿ ಅಧ್ಯಕ್ಷ ಮುರಳಿ ಮನೋಹರ ಜೋಶಿ ಸಲ್ಲಿಸಿದ್ದ ವಿವಾದಾತ್ಮಕ ಕರಡು ವರದಿಯನ್ನು ಸ್ಪೀಕರ್ ಮೀರಾಕುಮಾರ್ ಅವರು ಜೋಶಿ ಅವರಿಗೇ ಹಿಂತಿರುಗಿಸಿದ್ದಾರೆ.

`2ಜಿ ಹಗರಣ ಕುರಿತ ಕರಡು ವರದಿಯನ್ನು ಅಧ್ಯಕ್ಷರಿಗೆ ವಾಪಸ್ ನೀಡಲಾಗಿದೆ~ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮಂಗಳವಾರ ತಿಳಿಸಿದೆ.ಬಿಜೆಪಿ ನಾಯಕ ಜೋಶಿ ಅವರು ಸಮಿತಿ ಅಧ್ಯಕ್ಷರಾಗಿ ತಮ್ಮ ಅಧಿಕಾರದ ಅವಧಿಯ ಕೊನೆಯ ದಿನವಾದ ಏಪ್ರಿಲ್ 30ರಂದು ಈ ವರದಿಯನ್ನು ಸ್ಪೀಕರ್‌ಗೆ ಸಲ್ಲಿಸಿದ್ದರು. ಅಲ್ಲದೆ ಅದನ್ನು ಸಂಸತ್ತಿನಲ್ಲಿ ಮಂಡಿಸಬೇಕು ಎಂದೂ ಒತ್ತಾಯಿಸಿದ್ದರು. ಇದಾದ ಒಂದೂವರೆ ತಿಂಗಳ ಬಳಿಕ ಸ್ಪೀಕರ್  ಈ ಅಪರೂಪದ ಕ್ರಮ ಕೈಗೊಂಡಿದ್ದಾರೆ.

2ಜಿ ಹಗರಣದ ಈ ವರದಿಯನ್ನು ಯುಪಿಎ ಸದಸ್ಯರು `ತಿರಸ್ಕರಿಸಿದ್ದರೂ~ ಅದನ್ನು ಲೆಕ್ಕಿಸದೆ ಜೋಶಿ ವರದಿಯನ್ನು ಸ್ಪೀಕರ್‌ಗೆ ಕಳುಹಿಸಿದ್ದರು.ಕರಡು ವರದಿಯು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಸೇರಿದಂತೆ ಹಲವರ ನಿಲುವುಗಳ ಬಗ್ಗೆ ತೀವ್ರವಾಗಿ ಆಕ್ಷೇಪಿಸಿದೆ ಅಲ್ಲದೆ ಮಾಜಿ ಸಚಿವ ಎ. ರಾಜಾ ವಿರುದ್ಧ ಕೂಡ ಟೀಕಾ ಪ್ರಹಾರ ಮಾಡಿದೆ.

ವರದಿಯನ್ನು ಸದಸ್ಯರು ಒಪ್ಪದಿದ್ದರೂ  ಅದನ್ನು ಸ್ಪೀಕರ್‌ಗೆ ಕಳುಹಿಸಲು ಸಮಿತಿ ಅಧ್ಯಕ್ಷರಾಗಿ ತಮಗೆ ಹಕ್ಕು ಇದೆ ಎಂದು ಜೋಶಿ ಹೇಳಿದ್ದರು.`ನಾನು ವರದಿಯನ್ನು ಸಲ್ಲಿಸಿದ್ದೇನೆ. ಸ್ಪೀಕರ್ ಇದನ್ನು ಅಂಗೀಕರಿಸುತ್ತಾರೆ ಮತ್ತು ಸಂಸತ್ತಿನಲ್ಲಿ ಮಂಡಿಸುತ್ತಾರೆ ಎಂಬುದು ನನ್ನ ನಿರೀಕ್ಷೆ~ ಎಂದೂ ಅವರು ನುಡಿದಿದ್ದರು.

ನಿಯಮಗಳ ಪ್ರಕಾರ, ವರದಿಯನ್ನು ಸಿದ್ಧಪಡಿಸಿದ ಸಮಿತಿಯಿಂದ ಅಂಗೀಕಾರ ಪಡೆದ ನಂತರವೇ ಸಂಸತ್ತಿನ ಉಭಯ ಸದನಗಳಲ್ಲಿ ಅದನ್ನು  ಮಂಡಿಸ ಬಹುದು. ಸಮಿತಿಯ 21 ಸದಸ್ಯರಲ್ಲಿ 11 ಸಂಸದರು ವರದಿಯನ್ನು `ತಿರಸ್ಕರಿಸಿದ್ದು~ `ಅಸಂವಿಧಾನಾತ್ಮಕ~ ಎಂದು ಜೋಶಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.