ADVERTISEMENT

ಪಿಡಿಪಿ ಪ್ರತಿಭಟನೆ: ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ಜಮ್ಮು (ಪಿಟಿಐ): ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ರಾಜೀನಾಮೆಗೆ ಒತ್ತಾಯಿಸಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪಿಡಿಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕರ್ತ ಸೈಯದ್ ಯೂಸುಫ್‌ನ ಲಾಕಪ್ ಸಾವಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತಿತರರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪಿಡಿಪಿ ಕಾರ್ಯಕರ್ತರು ಶುಕ್ರವಾರ ಬೆಳಿಗ್ಗೆ ಇಲ್ಲಿನ ಗಾಂಧಿನಗರದಲ್ಲಿರುವ ಪಕ್ಷದ ಮುಖ್ಯ ಕಚೇರಿಯಿಂದ ಮೆರವಣಿಗೆ ಹೊರಟರು. ನಂತರ ರಸ್ತೆ ತಡೆ ನಡೆಸಿದರು.

ಈ ಸಂದರ್ಭ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಮೆರವಣಿಗೆಯ ನೇತೃತ್ವವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಂಸದ ಬಲಬೀರ್ ಸಿಂಗ್ ಮತ್ತು ಪಕ್ಷದ ಉಪಾಧ್ಯಕ್ಷ ಟಿ.ಎಸ್. ಬಜ್ವಾ ವಹಿಸಿದ್ದರು.

ಘಟನೆಯಲ್ಲಿ ಇಬ್ಬರು ಕಾರ್ಯಕರ್ತರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪಿಡಿಪಿಯ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ದಾಮನ್ ಬಷೀರ್ ಆರೋಪಿಸಿದ್ದರೆ, ಉದ್ರಿಕ್ತ ಪ್ರತಿಭಟನಾಕಾರರನ್ನು ಚದುರಿಸಲು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ ನಡೆಸಲಾಯಿತೇ ಹೊರತು ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಎಸ್ಪಿ ರಾಜೇಶ್ವರ ಸ್ಪಷ್ಟಪಡಿಸಿದ್ದಾರೆ.

ಶ್ರೀನಗರ ವರದಿ: ಸೈಯದ್ ಯೂಸುಫ್ ಸಾವಿನ ತನಿಖೆಯನ್ನು ಸೂಕ್ತವಾಗಿ ಮತ್ತು ಪಾರದರ್ಶಕವಾಗಿ ನಡೆಸುವ ಮೂಲಕ ಸತ್ಯಾಂಶ ಏನೆಂಬುದನ್ನು ಜನರಿಗೆ ತಿಳಿಯಪಡಿಸಬೇಕು ಎಂದು ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್‌ನ ಅಧ್ಯಕ್ಷ ಹಕೀಮ್ ಮಹಮ್ಮದ್ ಒತ್ತಾಯಿಸಿದ್ದಾರೆ.

ಪಿಡಿಪಿ ವಿರುದ್ಧ ಒಮರ್ ಆರೋಪ
ಶ್ರೀನಗರ (ಐಎಎನ್‌ಎಸ್):
ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ ಕಾರ್ಯಕರ್ತ ಸಯೀದ್ ಮಹಮ್ಮದ್ ಯೂಸುಫ್ ಹತ್ಯೆಗೆ ಸಂಬಂಧಿಸಿದಂತೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಮಾಡಿರುವ ಆರೋಪಗಳನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶುಕ್ರವಾರ ಬಲವಾಗಿ ಅಲ್ಲಗಳೆದಿದ್ದಾರೆ.

`ಅಂದು ಸಯೀದ್ ನನ್ನ ಮನೆಗೆ ಬಂದಿದ್ದಾಗ ಯಾರೂ ಅವನ ಮೈಮುಟ್ಟಿಲ್ಲ. ನನ್ನ ಮನೆಗೆ ಬಂದು ಹೋದ 12 ಗಂಟೆಗಳ ತರುವಾಯ ಅವನು ಹೃದಯಾಘಾತದಿಂದ ಮರಣ ಹೊಂದಿದ್ದಾನೆ. ಆದರೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರು ಈ ವಿಷಯದಲ್ಲಿ ಪ್ರತ್ಯಕ್ಷ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ~ ಎಂದು ಒಮರ್ ಅಬ್ದುಲ್ಲಾ ಆರೋಪ ಮಾಡಿದ್ದಾರೆ.
 
ಖಾಸಗಿ ಟಿ.ವಿ.ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಮೃತ ಯುವಕ ಸೈಯದ್ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಅವರ ತಂದೆ ಡಾ.ಫಾರೂಕ್ ಅಬ್ದುಲ್ಲಾ ಅವರಿಗೆ ಅತ್ಯಂತ ನಿಕಟವಾಗಿದ್ದ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.