ADVERTISEMENT

ಪಿಣರಾಯಿ ವಿಜಯನ್‌ ತವರು ಜಿಲ್ಲೆಯಲ್ಲಿ ‘ಜನ ರಕ್ಷಾ ಯಾತ್ರೆ’ಗೆ ಅಮಿತ್‌ ಷಾ ಚಾಲನೆ

ಏಜೆನ್ಸೀಸ್
Published 3 ಅಕ್ಟೋಬರ್ 2017, 10:21 IST
Last Updated 3 ಅಕ್ಟೋಬರ್ 2017, 10:21 IST
ರಾಜರಾಜೇಶ್ವರ ದೇಗುಲದಲ್ಲಿ ಅಮಿತ್‌ ಷಾ ಪ್ರಾರ್ಥನೆ ಸಲ್ಲಿಸಿದರು. (ಅಮಿತ್‌ ಷಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಚಿತ್ರ)
ರಾಜರಾಜೇಶ್ವರ ದೇಗುಲದಲ್ಲಿ ಅಮಿತ್‌ ಷಾ ಪ್ರಾರ್ಥನೆ ಸಲ್ಲಿಸಿದರು. (ಅಮಿತ್‌ ಷಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಚಿತ್ರ)   

ತಿರುವನಂತಪುರ: ಕೇರಳದ ಆಡಳಿತಾರೂಢ ಸಿಪಿಎಂ ಸರ್ಕಾರ ‘ಹತ್ಯೆ ರಾಜಕೀಯ’ ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಇದನ್ನು ಪ್ರತಿಭಟಿಸಿ ‘ಜನ ರಕ್ಷಾ ಯಾತ್ರೆ’ ಆರಂಭಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತವರು ಜಿಲ್ಲೆ ಕಣ್ಣೂರಿನ ಪಯ್ಯನ್ನೂರಿನಲ್ಲಿ ಮಂಗಳವಾರ ಯಾತ್ರೆಗೆ ಚಾಲನೆ ನೀಡಿದರು.

ಇದಕ್ಕೂ ಮುನ್ನ, ಉತ್ತರ ಕಣ್ಣೂರಿನ ರಾಜರಾಜೇಶ್ವರ ದೇಗುಲಕ್ಕೆ ಭೇಟಿ ನೀಡಿದ ಅಮಿತ್‌ ಷಾ ಪ್ರಾರ್ಥನೆ ಸಲ್ಲಿಸಿದರು.

ರಾಜಧಾನಿ ತಿರುವನಂತಪುರಕ್ಕೆ ಹಮ್ಮಿಕೊಳ್ಳಲಾಗಿರುವ, ಸುಮಾರು 15 ದಿನಗಳ ಕಾಲ ನಡೆಯಲಿರುವ ಯಾತ್ರೆಯಲ್ಲಿ ಬಿಜೆಪಿಯ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಯಾತ್ರೆಯಲ್ಲಿ ಭಾಗವಹಿಸುವ ಸಲುವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಕಣ್ಣೂರಿಗೆ ತೆರಳಲಿದ್ದಾರೆ.

ADVERTISEMENT

ಮೂರು ದಿನಗಳಿಂದ ಕೇರಳ ಪ್ರವಾಸದಲ್ಲಿರುವ ಅಮಿತ್ ಷಾ ಮಂಗಳವಾರ ನಾಲ್ಕು ಕಿಲೋ ಮೀಟರ್ ಯಾತ್ರೆ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು, ‘ಪಶ್ಚಿಮ ಬಂಗಾಳ ಮತ್ತು ತ್ರಿಪುರಾದ ಪರಿಸ್ಥಿತಿಯನ್ನು ಗಮನಿಸಿ. ಕಮ್ಯೂನಿಸ್ಟರು ಇಲ್ಲಿ ಆಡಳಿತ ನಡೆಸುತ್ತಿದ್ದಾರೆ. ಶಾಂತಿಯಿಂದಿದ್ದ ಕೇರಳ ಹಿಂಸಾಚಾರಕ್ಕೆ ತಿರುಗುತ್ತಿದೆ. ಕಮ್ಯೂನಿಸ್ಟ್ ಸಿದ್ಧಾಂತವನ್ನು ಇಲ್ಲಿ ಹರಡಲಾಗುತ್ತಿದೆ’ ಎಂದು ಹೇಳಿದರು. ಷಾ ಅವರು ಗುರುವಾರ ಮತ್ತೆ ಯಾತ್ರೆಯನ್ನು ಸೇರಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.